Dinesh Karthik: ಡಿಕೆಯ ಸೆಲ್ಫಿ ಕೇಳಿದ ಫ್ಯಾನ್: ಕರೆಯದಿದ್ದರೂ ಪೋಸ್ ನೀಡಿದ ಅಶ್ವಿನ್..!
Dinesh Karthik: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ರೋಹಿತ್ ಶರ್ಮಾ ಅವರ ಅರ್ಧಶತಕ ಹಾಗೂ ದಿನೇಶ್ ಕಾರ್ತಿಕ್ ಅವರ ಸ್ಪೋಟಕ 41 ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿತು.
ಭಾರತ-ವೆಸ್ಟ್ ಇಂಡೀಸ್ ನಡುವಣ 5 ಪಂದ್ಯಗಳ ಟಿ20 ಸರಣಿ ಶುರುವಾಗಿದೆ. ಸೆಂಟ್ ಕಿಟ್ಸ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 68 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಈ ಜಯದ ಬಳಿಕ ಗೆಲುವಿನ ರುವಾರಿಗಳಾದ ದಿನೇಶ್ ಕಾರ್ತಿಕ್ ಹಾಗೂ ರವಿಚಂದ್ರನ್ ಅಶ್ವಿನ್ ಬಿಸಿಸಿಐ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದರು. ಪಂದ್ಯದ ಬಗ್ಗೆ ಮಾತನಾಡಿದ ಈ ಇಬ್ಬರು ಬಳಿಕ ಡ್ರೆಸ್ಸಿಂಗ್ ರೂಮ್ನತ್ತ ಮುಖ ಮಾಡಿದ್ದರು.
ಇದೇ ವೇಳೆ ಅಭಿಮಾನಿಯೊಬ್ಬರು ಬಂದು ದಿನೇಶ್ ಕಾರ್ತಿಕ್ ಅವರಲ್ಲಿ ಸೆಲ್ಫಿಗಾಗಿ ಮನವಿ ಮಾಡಿದ್ದಾರೆ. ಇತ್ತ ದಿನೇಶ್ ಕಾರ್ತಿಕ್ ಅಭಿಮಾನಿಯ ಜೊತೆ ಸೆಲ್ಫಿಗೆ ಪೋಸ್ ನೀಡುತ್ತಿದ್ದರೆ, ಅತ್ತ ಅಶ್ವಿನ್ ಅದನ್ನು ಗಮನಿಸದೇ ಮುಂದಕ್ಕೆ ತೆರಳಿದ್ದರು. ಆ ಬಳಿಕ ದಿನೇಶ್ ಕಾರ್ತಿಕ್ ಅಭಿಮಾನಿ ಜೊತೆ ಫೋಟೋ ತೆಗೆಸಿಕೊಳ್ಳುತ್ತಿರುವುದು ನೋಡಿದ ಅಶ್ವಿನ್, ನೇರವಾಗಿ ಬಂದು ಪಕ್ಕದಲ್ಲೇ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ.
ವಿಶೇಷ ಎಂದರೆ ಅಶ್ವಿನ್ ಅವರಲ್ಲಿ ಸೆಲ್ಫಿಗೆ ಮನವಿ ಮಾಡದಿದ್ದರೂ, ಅವರೇ ಖುದ್ದು ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಅಶ್ವಿನ್ ಅವರ ಈ ವಿನಮ್ರತೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ಟಾರ್ ಆಟಗಾರನಾಗಿದ್ದರೂ ಅಭಿಮಾನಿಯೊಂದಿಗೆ ಸರಳವಾಗಿ ವರ್ತಿಸಿದ ಅಶ್ವಿನ್ ಅವರ ನಡೆಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ರೋಹಿತ್ ಶರ್ಮಾ ಅವರ ಅರ್ಧಶತಕ ಹಾಗೂ ದಿನೇಶ್ ಕಾರ್ತಿಕ್ ಅವರ ಸ್ಪೋಟಕ 41 ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿತು. 191 ರನ್ಗಳ ಬೃಹತ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಟೀಮ್ ಇಂಡಿಯಾದ ಕರಾರುವಾಕ್ ದಾಳಿ ಮುಂದೆ ರನ್ಗಳಿಸಲು ಪರದಾಡಿದರು. ಪರಿಣಾಮ 101 ರನ್ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು.
ಇದಾಗ್ಯೂ 20 ಓವರ್ಗಳ ಬ್ಯಾಟಿಂಗ್ ಪೂರ್ಣಗೊಳಿಸಿದ ವಿಂಡೀಸ್ ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 122 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಟೀಮ್ ಇಂಡಿಯಾ 68 ರನ್ಗಳ ಭರ್ಜರಿ ಜಯ ಸಾಧಿಸಿತು. ಕೇವಲ 19 ಎಸೆತಗಳಲ್ಲಿ 4 ಫೋರ್ ಹಾಗೂ 2 ಭರ್ಜರಿ ಸಿಕ್ಸ್ ಸಿಡಿಸಿ 41 ರನ್ ಬಾರಿಸಿದ್ದ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.