Sreesanth: ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ ವೇಗದ ಬೌಲರ್ ಶ್ರೀಶಾಂತ್; ನೀಡಿದ ಕಾರಣವೇನು ಗೊತ್ತಾ?

Sreesanth: ಭಾರತದ ಮಾಜಿ ವೇಗದ ಬೌಲರ್ ಶಾಂತಕುಮಾರನ್ ಶ್ರೀಶಾಂತ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2005 ರಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಸ್ಥಾನ ಪಡೆದ ಕೇರಳದ ವೇಗಿ, ಇತ್ತೀಚೆಗೆ ರಣಜಿ ಟ್ರೋಫಿ 2022 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು.

Sreesanth: ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ ವೇಗದ ಬೌಲರ್ ಶ್ರೀಶಾಂತ್; ನೀಡಿದ ಕಾರಣವೇನು ಗೊತ್ತಾ?
ಶ್ರೀಶಾಂತ್
Follow us
TV9 Web
| Updated By: ಪೃಥ್ವಿಶಂಕರ

Updated on:Mar 09, 2022 | 8:25 PM

ಭಾರತದ ಮಾಜಿ ವೇಗದ ಬೌಲರ್ ಶಾಂತಕುಮಾರನ್ ಶ್ರೀಶಾಂತ್ ಎಲ್ಲಾ ಮಾದರಿಯ (S Sreesanth Retires) ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2005 ರಲ್ಲಿ ಭಾರತೀಯ ಕ್ರಿಕೆಟ್‌ (Indian Cricket Team)ನಲ್ಲಿ ಸ್ಥಾನ ಪಡೆದ ಕೇರಳದ ವೇಗಿ, ಇತ್ತೀಚೆಗೆ ರಣಜಿ ಟ್ರೋಫಿ 2022 ((Ranji Trophy 2022))ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. 39 ವರ್ಷದ ಶ್ರೀಶಾಂತ್ ಅವರು ಮಾರ್ಚ್ 9 ರ ಬುಧವಾರದಂದು ತಮ್ಮ ನಿರ್ಧಾರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಇದು ತನಗೆ ತುಂಬಾ ಕಷ್ಟಕರವಾದ ನಿರ್ಧಾರವಾಗಿದೆ. ಇದು ತನಗೆ ಹೆಚ್ಚಿನ ಸಂತೋಷವನ್ನು ತರುವುದಿಲ್ಲವಾದರೂ, ಆದರೆ ಮುಂಬರುವ ಪೀಳಿಗೆಯ ಸಲುವಾಗಿ, ಈ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ತಮ್ಮ ವೇಗ ಮತ್ತು ಆಘಾತಕಾರಿ ಬೌನ್ಸಿ ಎಸೆತಗಳಿಂದ ವಿವಾದಕ್ಕೀಡಾಗಿದ್ದ ಶ್ರೀಶಾಂತ್, 2005 ರಲ್ಲಿ ಭಾರತಕ್ಕಾಗಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ 5 ವರ್ಷಗಳ ಕಾಲ ಟೀಮ್ ಇಂಡಿಯಾದ ಭಾಗವಾಗಿದ್ದರು. ಈ ಸಮಯದಲ್ಲಿ, ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ 90 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದರು. ಅವರು 2007 ರ T20 ವಿಶ್ವಕಪ್ ಮತ್ತು 2011 ODI ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. ಇದಲ್ಲದೇ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದರು.

ಶ್ರೀಶಾಂತ್ ಮನದಾಳದ ಮಾತು ಶ್ರೀಶಾಂತ್ ಇತ್ತೀಚೆಗೆ ಕೇರಳ ಕ್ರಿಕೆಟ್ ರಣಜಿ ತಂಡದ ಭಾಗವಾಗಿದ್ದರು. ಅದರಲ್ಲಿ ಅವರು 2 ವಿಕೆಟ್ಗಳನ್ನು ಪಡೆದರು. ಆದರೆ, ಕೇರಳ ತಂಡ ಗ್ರೂಪ್ ಹಂತದಲ್ಲೇ ಹೊರಬಿದ್ದಿದ್ದರಿಂದ ಶ್ರೀಶಾಂತ್ ತಮ್ಮ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಬಲಗೈ ವೇಗಿ, “ಇಂದು ನನಗೆ ಕಷ್ಟದ ದಿನವಾಗಿದೆ, ಆದರೆ ಇದು ಕೃತಜ್ಞತೆ ಮತ್ತು ಚಿಂತನೆಯ ದಿನವಾಗಿದೆ. ಇಸಿಸಿ, ಎರ್ನಾಕುಲಂ ಜಿಲ್ಲೆಯ ವಿವಿಧ ಕ್ರಿಕೆಟ್ ಲೀಗ್‌ಗಳು ಮತ್ತು ಪಂದ್ಯಾವಳಿಗಳಲ್ಲಿ ಆಡುವುದು ಹಾಗೂ ಕೇರಳ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್, ಬಿಸಿಸಿಐ, ವಾರ್ವಿಕ್‌ಶೈರ್ ಕ್ರಿಕೆಟ್ ಕೌಂಟಿ, ಇಂಡಿಯನ್ ಏರ್‌ಲೈನ್ಸ್ ಕ್ರಿಕೆಟ್ ತಂಡ ಮತ್ತು ಐಪಿಎಲ್​ನಲ್ಲಿ ಆಡಿದ್ದು ಗೌರವದ ವಿಚಾರವಾಗಿದೆ. ನನ್ನ 25 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ, ನಾನು ಯಾವಾಗಲೂ ಯಶಸ್ವಿಯಾಗಲು ಮತ್ತು ಪಂದ್ಯಗಳನ್ನು ಗೆಲ್ಲಿಸಲು ಶ್ರಮಿಸುತ್ತಿದ್ದೇನೆ, ಅದೇ ಸಮಯದಲ್ಲಿ ತರಬೇತಿ ಮತ್ತು ಉನ್ನತ ಗುಣಮಟ್ಟಕ್ಕೆ ತಯಾರಿ ನಡೆಸುತ್ತಿದ್ದೇನೆ.

ಭಾರತವನ್ನು ಪ್ರತಿನಿಧಿಸಿದ್ದು ನನಗೆ ಗೌರವದ ವಿಚಾರವಾಗಿದೆ. ಈ ಸಮಯದಲ್ಲಿ ತುಂಬಾ ದುಃಖಿತನಾಗಿದ್ದರೂ ಯಾವುದೇ ಪಶ್ಚಾತ್ತಾಪವಿಲ್ಲದೆ, ಭಾರವಾದ ಹೃದಯದಿಂದ ನಾನು ಪ್ರಥಮ ದರ್ಜೆ ಮತ್ತು ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಯುವ ಆಟಗಾರರಿಗಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿಯೂ ಶ್ರೀಶಾಂತ್ ಹೇಳಿದ್ದಾರೆ. ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ. ಇದು ನನ್ನ ನಿರ್ಧಾರ ಮಾತ್ರ, ಮತ್ತು ಇದು ನನಗೆ ಸಂತೋಷವನ್ನು ತರುವುದಿಲ್ಲ ಎಂದು ನನಗೆ ತಿಳಿದಿದ್ದರೂ, ಇದು ನನ್ನ ಜೀವನದ ಈ ಹಂತದಲ್ಲಿ ಸರಿಯಾದ ಮತ್ತು ಗೌರವಾನ್ವಿತ ನಿರ್ಧಾರವಾಗಿದೆ ಎಂದಿದ್ದಾರೆ.

ಎರಡು ಬಾರಿ ವಿಶ್ವ ಚಾಂಪಿಯನ್ ತಂಡದಲ್ಲಿದ್ದ ಶ್ರೀಶಾಂತ್ ಶ್ರೀಶಾಂತ್ 2005 ರಲ್ಲಿ ODI ಪಾದಾರ್ಪಣೆ ಮಾಡಿದರು. ನಂತರ ತಮ್ಮ ವೇಗ ಮತ್ತು ಬೌನ್ಸರ್‌ಗಳಿಂದ ಟೆಸ್ಟ್ ಮತ್ತು T20 ತಂಡದಲ್ಲಿ ಸ್ಥಾನ ಪಡೆದರು. ಅವರ ಮಾರಕ ಬೌಲಿಂಗ್‌ನ ಆಧಾರದ ಮೇಲೆ, ಭಾರತ ತಂಡವು 2006 ರಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿತು. ಅದೇ ಸಮಯದಲ್ಲಿ, 2007 ರ ವಿಶ್ವಕಪ್‌ನ ಫೈನಲ್‌ನಲ್ಲಿ, ಶ್ರೀಶಾಂತ್ ಕೊನೆಯ ಓವರ್‌ನಲ್ಲಿ ಭಾರತಕ್ಕೆ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದರು. ಪಾಕಿಸ್ತಾನದ ಬ್ಯಾಟ್ಸ್‌ಮನ್ ಮಿಸ್ಬಾ-ಉಲ್-ಹಕ್ ಅವರು ಹೊಡೆದ ಬಾಲನ್ನು ಫೈನ್ ಲೆಗ್‌ನಲ್ಲಿ ಕ್ಯಾಚ್ ಹಿಡಿಯುವ ಮೂಲಕ ಶ್ರೀಶಾಂತ್ ಫೈನಲ್‌ನಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಇದಲ್ಲದೆ ಪಂದ್ಯಾವಳಿಯಲ್ಲಿ ಅವರು ಪ್ರಮುಖ 6 ವಿಕೆಟ್ಗಳನ್ನು ಪಡೆದರು. ನಂತರ 2011ರ ವಿಶ್ವಕಪ್‌ನಲ್ಲೂ ಶ್ರೀಶಾಂತ್ ತಂಡದ ಭಾಗವಾಗಿದ್ದರು.

ಇದನ್ನೂ ಓದಿ:ICC T20I Rankings: ಟಿ20 ರ‍್ಯಾಂಕಿಂಗ್​ನಲ್ಲಿ ಭಾರತ ನಂ.1! ಆದರೆ, ಇಲ್ಲಿ ಶಾಕ್ ಆಗುವ ಸಂಗತಿಯೂ ಇದೆ

Published On - 8:11 pm, Wed, 9 March 22