
ಕರ್ನಾಟಕ ಕ್ರಿಕೆಟ್ ಲೋಕ ಇಂದು ಅತ್ಯಂತ ಆಘಾತಕಾರಿ ಮತ್ತು ದುಃಖದ ಸುದ್ದಿಯೊಂದಕ್ಕೆ ಸಾಕ್ಷಿಯಾಗಿದೆ. ತನ್ನ ಸ್ವಿಂಗ್ ಬೌಲಿಂಗ್ ಮತ್ತು ಸೌಮ್ಯ ಸ್ವಭಾವದಿಂದ ಎಲ್ಲರ ಮನಗೆದ್ದಿದ್ದ ಕರ್ನಾಟಕದ ಮಾಜಿ ವೇಗದ ಬೌಲರ್ ಎಸ್.ಎಲ್. ಅಕ್ಷಯ್ (39) ಅವರು ಕೆ.ಎಸ್.ಸಿ.ಎ ಡಿವಿಷನ್ ಪಂದ್ಯವೊಂದನ್ನು ಆಡುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಸಿರು ಮೈದಾನವನ್ನೇ ದೇವರೆಂದು ನಂಬಿದ್ದ ಆಟಗಾರ, ಅದೇ ಮೈದಾನದಲ್ಲೇ ಕೊನೆಯುಸಿರೆಳೆದಿರುವುದು ಇಡೀ ಕ್ರೀಡಾಲೋಕವನ್ನು ದಿಗ್ಭ್ರಮೆಗೊಳಿಸಿದೆ.
ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಎಸ್‌ಎಲ್‌ಎಸ್ ಕ್ರೀಡಾಂಗಣದಲ್ಲಿ ಸಫೈರ್ ಸಿಸಿ ಮತ್ತು ಭರತ್ ಸಿಸಿ ತಂಡಗಳ ನಡುವೆ ಡಿವಿಷನ್ 3 ಪಂದ್ಯ ನಡೆಯುತ್ತಿತ್ತು. ಸಫೈರ್ ಸಿಸಿ ಪರ ಆಡುತ್ತಿದ್ದ ಅಕ್ಷಯ್, ಆರಂಭದಲ್ಲಿ ಅತ್ಯಂತ ಉತ್ಸಾಹದಿಂದ 4 ಓವರ್‌ಗಳ ಬೌಲಿಂಗ್ ದಾಳಿ ನಡೆಸಿದ್ದರು. ಆ ಬಳಿಕ ಅವರಿಗೆ ಎದೆಯಲ್ಲಿ ತೀವ್ರ ಅಸ್ವಸ್ಥತೆ ಮತ್ತು ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಮೈದಾನದಿಂದ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ಘೋಷಿಸಿದರು.
ಎಸ್.ಎಲ್ ಅಕ್ಷಯ್ ಅವರ ನಿಧನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿರುವ ಟೀಮ್ ಇಂಡಿಯಾದ ಮಾಜಿ ವೇಗಿ, ಕನ್ನಡಿಗ ದೊಡ್ಡ ಗಣೇಶ್ ಅವರು, ಕ್ರಿಕೆಟ್ ಸಮುದಾಯಕ್ಕೆ ಅತ್ಯಂತ ಆಘಾತಕಾರಿ ಸುದ್ದಿ. ಅಂಡರ್-19 ಕ್ರಿಕೆಟ್ ದಿನಗಳಿಂದಲೂ ನಾನು ಹತ್ತಿರದಿಂದ ನೋಡಿದ್ದ 39 ವರ್ಷದ ವೇಗದ ಬೌಲರ್ ಎಸ್.ಎಲ್. ಅಕ್ಷಯ್, ಇಂದು ಡಿವಿಷನ್ ಪಂದ್ಯವನ್ನಾಡುವಾಗ ನಿಧನರಾಗಿದ್ದಾರೆ.
ಈ ಬಗ್ಗೆ ನನಗೆ ದುಃಖವನ್ನು ವ್ಯಕ್ತಪಡಿಸಲು ಮಾತುಗಳೇ ಸಿಗುತ್ತಿಲ್ಲ. 2011/12 ರಲ್ಲಿ ಕರ್ನಾಟಕ ತಂಡದ ಪರವಾಗಿ ಆಡಿ ಉತ್ತಮ ಯಶಸ್ಸು ಕಂಡಿದ್ದ, ಮೃದು ಸ್ವಭಾವದ ವ್ಯಕ್ತಿ ಅಕ್ಷಯ್ ಇನ್ನಿಲ್ಲ ಎಂಬುದು ಅರಗಿಸಿಕೊಳ್ಳಲಾಗುತ್ತಿಲ್ಲ. RIP Akshay… ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಕುಟುಂಬಕ್ಕೆ ಈ ನೋವನ್ನ ಸಹಿಸಿಕೊಳ್ಳೋ ಶಕ್ತಿ ಆ ಭಗವಂತ ನೀಡಲಿ ಎಂದಷ್ಟೇ ಕೇಳಿಕೊಳ್ಳಬಲ್ಲೆ ಎಂದು ದೊಡ್ಡ ಗಣೇಶ್ ಸೋಷಿಯಲ್ ಮೀಡಿಯಾ ಮೂಲಕ ಸಂತಾಸ ಸೂಚಿಸಿದ್ದಾರೆ.
ಕ್ರಿಕೆಟ್ ಆಟದಿಂದ ನಿವೃತ್ತರಾದ ಮೇಲೆಯೂ ಅಕ್ಷಯ್ ಅವರ ಕ್ರೀಡಾ ಪ್ರೇಮ ಕಡಿಮೆಯಾಗಲಿಲ್ಲ. ಎನ್.ಸಿ.ಎ (NCA) ಪ್ರಮಾಣೀಕೃತ ಕೋಚ್ ಆಗಿ ಬದಲಾದ ಅವರು, ಕರ್ನಾಟಕದ ಅಂಡರ್-19 ಮತ್ತು ಜೂನಿಯರ್ ತಂಡಗಳ ಯುವ ಆಟಗಾರರನ್ನು ತರಬೇತುಗೊಳಿಸುವಲ್ಲಿ ನಿರತರಾಗಿದ್ದರು. ಅವರ ಗರಡಿಯಲ್ಲಿ ಬೆಳೆದ ಹಲವು ಯುವ ಆಟಗಾರರು ಇಂದು ಅಕ್ಷಯ್ ಅವರ ಕೋಚಿಂಗ್ ಶೈಲಿ ಮತ್ತು ಪ್ರೀತಿಯ ಸ್ವಭಾವವನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಅಕ್ಷಯ್ ಕೇವಲ ಒಬ್ಬ ಉತ್ತಮ ಕ್ರಿಕೆಟಿಗನಷ್ಟೇ ಅಲ್ಲದೆ, ವೈಯಕ್ತಿಕ ಜೀವನದಲ್ಲಿ ಅತ್ಯಂತ ಸೌಮ್ಯ, ಶಿಸ್ತುಬದ್ಧ ಮತ್ತು ಸ್ನೇಹಪರ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ಮರಣದಿಂದಾಗಿ ಅವರ ಪತ್ನಿ ಹಾಗೂ ಇಬ್ಬರು ಸಣ್ಣ ಹೆಣ್ಣುಮಕ್ಕಳು ಅನಾಥರಾಗಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಸೇರಿದಂತೆ ಹಲವು ಹಿರಿಯ ಕ್ರಿಕೆಟಿಗರು ಅಕ್ಷಯ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: IPL 2026: ಡೆಡ್ ಬಾಲ್ನಲ್ಲಿ ಔಟ್ ನೀಡಿದ ಅಂಪೈರ್..!
ಮೈದಾನದಲ್ಲಿ ಸದಾ ಹಸನ್ಮುಖಿಯಾಗಿರುತ್ತಿದ್ದ ಈ ಪ್ರತಿಭಾನ್ವಿತ ವೇಗಿಯ ನೆನಪು ಕರ್ನಾಟಕ ಕ್ರಿಕೆಟ್ ಇತಿಹಾಸದಲ್ಲಿ ಸದಾ ಜೀವಂತವಾಗಿರುತ್ತದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ, ಹಾಗೂ ಅವರ ಕುಟುಂಬಕ್ಕೆ ಈ ಅಪಾರ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
Published On - 10:30 am, Mon, 25 May 26