
ಗಾಲೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ತಮ್ಮ ತಮ್ಮ ಮೊದಲ ಇನ್ನಿಂಗ್ಸ್ ಆಡಿ ಮುಗಿಸಿವೆ. ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 462 ರನ್ ಕಲೆಹಾಕಿದರೆ, ಆತಿಥೇಯ ಶ್ರೀಲಂಕಾ 284 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 178 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಶ್ರೀಲಂಕಾ ಪರ ಯುವ ಬ್ಯಾಟರ್ ಸೋನಾಲ್ ದಿನುಷಾ (Sonal Dinusha) ಚೊಚ್ಚಲ ಟೆಸ್ಟ್ ಶತಕ ಬಾರಿಸಿದರೆ, ನಿರೋಷನ್ ಡಿಕ್ವೆಲ್ಲಾ 80 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಆಟದಿಂದ ಶ್ರೀಲಂಕಾ ತಂಡ ಫಾಲೋ ಆನ್‌ನಿಂದ ಪಾರಾಯಿತು. ಇತ್ತ ಟೀಂ ಇಂಡಿಯಾ ಪರ ಮಾನವ್ ಸುತಾರ್ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು. ಉಳಿದಂತೆ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
ಶ್ರೀಲಂಕಾಕ್ಕೆ ಉತ್ತಮ ಆರಂಭವಾಗಲಿಲ್ಲ. ತಂಡದ ಅಗ್ರ ಐದು ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾದರು. ಹೀಗಾಗಿ 90 ರನ್‌ಗಳಿಗೆ 5 ವಿಕೆಟ್‌ಗಳು ಬಿದ್ದಿದ್ದರಿಂದ ತಂಡಕ್ಕೆ ಒತ್ತಡ ಹೆಚ್ಚಿತ್ತು. ಆದರೆ ಸೋನಲ್ ದಿನುಷಾ ಮತ್ತು ನಿರೋಷನ್ ಡಿಕ್ವೆಲ್ಲಾ ಆರನೇ ವಿಕೆಟ್‌ಗೆ 146 ರನ್‌ಗಳ ನಿರ್ಣಾಯಕ ಪಾಲುದಾರಿಕೆಯನ್ನು ಹಂಚಿಕೊಂಡರು. ಇವರಿಬ್ಬರ ಜೊತೆಯಾಟಕ್ಕೆ ಕೆಎಲ್ ರಾಹುಲ್ ಬಿಟ್ಟ ಕ್ಯಾಚ್ ಕೂಡ ಕಾರಣವಾಯಿತು. ನಿರೋಷನ್ ಅವರ ಕ್ಯಾಚ್ ಅನ್ನು ರಾಹುಲ್ ಕೈಬಿಟ್ಟರು. ಇದರ ಲಾಭ ಪಡೆದ ನಿರೋಷನ್ ಡಿಕ್ವೆಲ್ಲಾ 115 ಎಸೆತಗಳಲ್ಲಿ 80 ರನ್‌ಗಳ ಇನ್ನಿಂಗ್ಸ್ ಆಡಿದರು.
ಇತ್ತ ಸೋನಲ್ ದಿನುಷಾ 168 ಎಸೆತಗಳನ್ನು ಎದುರಿಸಿ ಚೊಚ್ಚಲ ಟೆಸ್ಟ್ ಶತಕವನ್ನು ಪೂರೈಸಿದರು. ಈ ಇಬ್ಬರನ್ನು ಹೊರತುಪಡಿಸಿ, ತಂಡದ ಯಾವುದೇ ಬ್ಯಾಟ್ಸ್ಮನ್ಗೆ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಈ ಇಬ್ಬರ ನಡುವಿನ ಪಾಲುದಾರಿಕೆ ಇಲ್ಲದಿದ್ದರೆ, ಶ್ರೀಲಂಕಾಕ್ಕೆ ಫಾಲೋ-ಆನ್ ನೀಡಬಹುದಿತ್ತು. ಇದರಿಂದ ಭಾರತದ ಗೆಲುವಿನ ಭರವಸೆ ಇನ್ನಷ್ಟು ಹೆಚ್ಚಾಗುತ್ತಿತ್ತು. ಆದರೆ ತಂಡದ ಕೆಲವು ತಪ್ಪುಗಳು ಸಾಕಷ್ಟು ದುಬಾರಿಯಾಯಿತು.
IND vs SL: 3ನೇ ದಿನದಾಟದ 2ನೇ ಸೆಷನ್ ಶ್ರೀಲಂಕಾ ಪಾಲು
ಭಾರತ ಪರ ಸ್ಪಿನ್ನರ್ ಮಾನವ್ ಸುತಾರ್ ಅದ್ಭುತ ಪ್ರದರ್ಶನ ನೀಡಿ 21.4 ಓವರ್ ಬೌಲಿಂಗ್ ಮಾಡಿ 76 ರನ್ಗೆ 4 ವಿಕೆಟ್ ಪಡೆದರು. ರವೀಂದ್ರ ಜಡೇಜಾ 21 ಓವರ್ಗಳಲ್ಲಿ 3 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಏತನ್ಮಧ್ಯೆ, ಮಳೆ ಮತ್ತೆ ಆಟವನ್ನು ಸ್ಥಗಿತಗೊಳಿಸಿದೆ. ಮೂರನೇ ದಿನದ ಆಟ ಮುಗಿದಿದೆ ಎಂದು ಘೋಷಿಸಲಾಗಿದ್ದು, ಉಳಿದ ಎರಡು ದಿನಗಳು ನಿರ್ಣಾಯಕವಾಗಿವೆ.
Published On - 5:02 pm, Mon, 17 August 26