ಬೇಕೇ ಬೇಕು… ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತ ಗೌತಮ್ ಗಂಭೀರ್..!
ICC Champions Trophy 2025: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ ಎಂದು ಕೋಚ್ ಗೌತಮ್ ಗಂಭೀರ್ ಖಚಿತಪಡಿಸಿದ್ದಾರೆ. ಆದರೆ ಅತ್ತ ರಿಷಭ್ ಪಂತ್ ಪರ ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯ ಅಜಿತ್ ಅಗರ್ಕರ್ ಒಲವು ಹೊಂದಿದ್ದಾರೆ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.

ಜನವರಿ 19, 2025… ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡದ ಘೋಷಣೆಗೆ ಸಮಯ ನಿಗದಿ ಮಾಡಲಾಗಿತ್ತು. ಮಧ್ಯಾಹ್ನ 12.30 ಕ್ಕೆ ಸುದ್ದಿಗೋಷ್ಠಿ ಕರೆದಿದ್ದರೂ, ಅಂದು ಭಾರತ ತಂಡದ ಘೋಷಣೆಯಾಗಿದ್ದು 3 ಗಂಟೆಗೆ. ಹೀಗೆ ಟೀಮ್ ಇಂಡಿಯಾ ಘೋಷಣೆ ವಿಳಂಬವಾಗಲು ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನಡುವಣ ಭಿನ್ನಾಭಿಪ್ರಾಯವೇ ಕಾರಣ ಎಂದು ವರದಿಯಾಗಿದೆ.
ಕೆಲ ಆಟಗಾರರ ಆಯ್ಕೆಗೆ ಗೌತಮ್ ಗಂಭೀರ್ ಹಾಗೂ ಅಜಿತ್ ಅಗರ್ಕರ್ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹೀಗಾಗಿ ತಂಡದ ಘೋಷಣೆ ವಿಳಂಬವಾಗಿತ್ತು. ಇಲ್ಲಿ ಮುಖ್ಯವಾಗಿ ವಿಕೆಟ್ ಕೀಪರ್ಗಳ ಆಯ್ಕೆ ವಿಷಯದಲ್ಲಿ ಅಗರ್ಕರ್ ಹಾಗೂ ಗಂಭೀರ್ ಪರಸ್ಪರ ಭಿನ್ನ ನಿಲುವುಗಳನ್ನು ಹೊಂದಿದ್ದರು ಎಂದು ವರದಿಯಾಗಿದೆ.
ಕೆಎಲ್ ರಾಹುಲ್ vs ರಿಷಭ್ ಪಂತ್:
ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ರಿಷಭ್ ಪಂತ್ ಅವರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿದ್ದರು. ಆದರೆ ಅತ್ತ ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಕೆಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್ ಆಯ್ಕೆಗೆ ಒಲವು ಹೊಂದಿದ್ದರು.
ಇದಾದ ಬಳಿಕ ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಆದರೆ ಇಲ್ಲಿ ಅಜಿತ್ ಅಗರ್ಕರ್ ರಿಷಭ್ ಪಂತ್ ಅವರನ್ನು ಮೊದಲ ಆಯ್ಕೆ ಎಂದು ಪರಿಗಣಿಸಿದ್ದಾರೆ. ಆದರೆ ಗೌತಮ್ ಗಂಭೀರ್ ಅವರು ಕೆಎಲ್ ರಾಹುಲ್ ಅವರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಬೇಕೆಂದು ಪಟ್ಟು ಹಿಡಿದಿದ್ದರು ಎಂದು ವರದಿಯಾಗಿದೆ.
ಅಗರ್ಕರ್ಗೆ ಪರೋಕ್ಷ ಪಂಚ್:
ಭಾರತ ತಂಡದ ಘೋಷಣೆ ವೇಳೆ ಅಜಿತ್ ಅಗರ್ಕರ್ ಅವರು ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಹೇಳಿದ್ದರು. ಆದರೆ ಇದಕ್ಕೆ ಮೊದಲೇ ಅಸಮ್ಮತಿ ಹೊಂದಿದ್ದ ಗೌತಮ್ ಗಂಭೀರ್ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಉತ್ತರ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಗೌತಮ್ ಗಂಭೀರ್, ರಿಷಭ್ ಪಂತ್ ಅವರನ್ನು ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಸಿರಲಿಲ್ಲ. ಅಲ್ಲದೆ ಮೂರು ಮ್ಯಾಚ್ನಲ್ಲೂ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಅವರಿಗೆ ಚಾನ್ಸ್ ನೀಡಿದ್ದರು.
ಅಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಕೆಎಲ್ ರಾಹುಲ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿರಲಿದ್ದಾರೆ ಎಂದು ದೃಢಪಡಿಸಿದ್ದಾರೆ.
ಇದನ್ನೂ ಓದಿ: WPL 2025: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇತಿಹಾಸ ನಿರ್ಮಿಸಿದ RCB
ಈ ಮೂಲಕ ಆಯ್ಕೆ ಸಮಿತಿ ಮುಖ್ಯಸ್ಥನ ನಿರ್ಧಾರದ ವಿರುದ್ಧ ಸೆಟೆದು ನಿಲ್ಲಲು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ನಿರ್ಧರಿಸಿದ್ದಾರೆ. ಭಾರತ ತಂಡದ ಕೋಚ್ ನಡೆಯಿಂದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕನ್ನಡಿಗನಿಗೆ ನ್ಯಾಯ ಸಿಗಲಿದೆಯಾ ಎಂಬುದೇ ಈಗ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಸಿಗಬೇಕಿದ್ದರೆ ಚಾಂಪಿಯನ್ಸ್ ಟ್ರೋಫಿ ಆರಂಭದವರೆಗೆ ಕಾಯಲೇಬೇಕು.
Published On - 11:53 am, Sun, 16 February 25