IPL 2022: ಒಟ್ಟು 28 ಆಟಗಾರರು: ಚಹಲ್ನ ಕೊಲ್ಲಲು ಯತ್ನಿಸಿದ್ದು ಯಾರು?
Yuzvendra Chahal: ರಾಜಸ್ಥಾನ್ ರಾಯಲ್ಸ್ ತಂಡದ ಸಹ ಆಟಗಾರರಾದ ಆರ್. ಅಶ್ವಿನ್ ಮತ್ತು ಕರುಣ್ ನಾಯರ್ ಜೊತೆಗಿನ ಸಂಭಾಷಣೆಯಲ್ಲಿ ಚಹಲ್ ಈ ತಮಗಾದ ಕಹಿ ಘಟನೆಯನ್ನು ಬಹಿರಂಗ ಪಡಿಸಿದ್ದರು.
ಬರೋಬ್ಬರಿ ಒಂದು ದಶಕದ ಹಿಂದಿನ ಐಪಿಎಲ್ ತಂಡವೊಂದು 2022 ರಲ್ಲಿ ವೈರಲ್ ಆಗುತ್ತೆ ಎಂದು ನೀವು ಭಾವಿಸುತ್ತೀರಾ? ಅದು ಕೂಡ ಒಂದೇ ಒಂದು ಹೇಳಿಕೆಯಿಂದ..ಹೌದು, ಅಂತಹದೊಂದು ಅಪರೂಪದ ಹುಡುಕಾಟಕ್ಕೆ ಗೂಗಲ್ ಸಾಕ್ಷಿಯಾಗಿದೆ. ಏಕೆಂದರೆ ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯುಜುವೇಂದ್ರ ಚಹಲ್ ನೀಡಿದ ಒಂದು ಹೇಳಿಕೆಯಿಂದ ಇದೀಗ 2013 ರ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಯಾರೆಲ್ಲಾ ಎಂದು ಕ್ರಿಕೆಟ್ ಪ್ರೇಮಿಗಳು ಹುಡುಕಾಡುತ್ತಿದ್ದಾರೆ. ಇದಕ್ಕೆ ಕಾರಣ ಅಂದು ತಂಡದಲ್ಲಿದ್ದ ಆಟಗಾರನೊಬ್ಬನ ದುರ್ವತನೆ. ಏಪ್ರಿಲ್ 7 ರಂದು ತಮ್ಮ ಜೀವನದಲ್ಲಿ ನಡೆದ ಆಘಾತಕಾರಿ ಘಟನೆಯೊಂದನ್ನು ಚಹಲ್ ಬಹಿರಂಗಪಡಿಸಿದ್ದರು., 2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಆಟಗಾರನೊಬ್ಬ ನನ್ನನ್ನು ಸಾವಿಗೆ ಕಾರಣನಾಗುತ್ತಿದ್ದ ಎಂಬ ವಿಚಾರವನ್ನು ತಿಳಿಸಿ ಶಾಕ್ ನೀಡಿದ್ದರು. ಅಂದು ಕುಡಿದು ಅಮಲಿನಲ್ಲಿದ್ದ ಆಟಗಾರನ ವರ್ತನೆಯಿಂದಾಗಿ ನಾನು ಸಾವನ್ನು ಹತ್ತಿರದಿಂದ ನೋಡಿದ್ದೆ ಎಂದು ತಮ್ಮ ಜೀವನದಲ್ಲಿ ನಡೆದಿದ್ದ ಆಘಾತಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದರು.
ರಾಜಸ್ಥಾನ್ ರಾಯಲ್ಸ್ ತಂಡದ ಸಹ ಆಟಗಾರರಾದ ಆರ್. ಅಶ್ವಿನ್ ಮತ್ತು ಕರುಣ್ ನಾಯರ್ ಜೊತೆಗಿನ ಸಂಭಾಷಣೆಯಲ್ಲಿ ಚಹಲ್ ಈ ತಮಗಾದ ಕಹಿ ಘಟನೆಯನ್ನು ಬಹಿರಂಗ ಪಡಿಸಿದ್ದರು. “ಇದು 2013ರಲ್ಲಿ ನಡೆದಂತಹ ಘಟನೆ. ನಾನಾಗ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯದ ಬಳಿಕ ಎಲ್ಲ ಆಟಗಾರರ ಗೆಟ್ ಟುಗೆದರ್ ಇತ್ತು. ಅದರಲ್ಲಿ ಓರ್ವ ಪ್ಲೇಯರ್ ಅತಿಯಾಗಿ ಮದ್ಯ ಸೇವಿಸಿದ್ದ. ಆದರೆ ಅವನ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. ತುಂಬಾ ಕುಡಿದಿದ್ದ ಆ ಆಟಗಾರ ಕೆಲ ಹೊತ್ತು ನನ್ನನ್ನೇ ನೋಡಿಕೊಂಡಿದ್ದ. ನಂತರ ಇಲ್ಲಿಗೆ ಬಾ ಎಂದು ನನ್ನನ್ನು ಕರೆದ. ನಾನು ಆತನ ಸಮೀಪಕ್ಕೆ ತೆರಳಿದೆ. ಈ ವೇಳೆ ಆತ ನನ್ನನ್ನು ಬಾಲ್ಕನಿಯಲ್ಲಿ ನೇತಾಡಿಸಿದ.”
“ಆ ಪ್ಲೇಯರ್ ನನ್ನ ಎರಡೂ ಕೈಗಳನ್ನು ಆತನ ಕತ್ತಿನಿಂದ ಲಾಕ್ ಮಾಡಿದ್ದ. ಅದು ಹದಿನೈದನೇ ಫ್ಲೋರ್ ಆಗಿತ್ತು. ಇದನ್ನು ಗಮನಿಸಿದ ಇತರೆ ಆಟಗಾರರು ತಕ್ಷಣವೇ ಅಲ್ಲಿಗೆ ಓಡೋಡಿ ಬಂದು ನನ್ನನ್ನು ರಕ್ಷಿಸಿದರು. ಸ್ವಲ್ಪ ಹೆಚ್ಚುಕಮ್ಮಿ ಆಗಿದ್ದರೂ ದುರಂತವೇ ನಡೆಯುತ್ತಿತ್ತು. ಆಗ ನಾನು ಮೂರ್ಛೆ ಹೋದೆ, ಅವರು ನನಗೆ ನೀರು ಕೊಟ್ಟರು. ನಾವು ಎಲ್ಲಿಗಾದರೂ ಹೋದಾಗ ಎಷ್ಟು ಜವಬ್ದಾರಿಯಿಂದ ಇರಬೇಕೆಂದು ಈ ಘಟನೆಯಿಂದ ನನಗೆ ಅರಿವಾಯಿತು,” ಎಂಬ ಶಾಕಿಂಗ್ ಘಟನೆಯನ್ನು ಚಹಲ್ ವಿವರಿಸಿದ್ದಾರೆ.
2013 ರಲ್ಲಿ ಚಹಲ್ ಮುಂಬೈ ಪರ ಐಪಿಎಲ್ ಆಡಿದ್ದರು. ಹೀಗಾಗಿಯೇ ಅಂದು ಚಹಲ್ ಜೊತೆಗಿದ್ದ ಆಟಗಾರರು ಯಾರೆಲ್ಲಾ ಎಂಬ ಹುಡುಕಾಟ ಶುರುವಾಗಿದೆ. ಅದರಂತೆ 2013 ರ ಮುಂಬೈ ಇಂಡಿಯನ್ಸ್ ತಂಡವು ಈಗ ವೈರಲ್ ಆಗಿದೆ. ಹಾಗಿದ್ರೆ ಅಂದು ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಆಟಗಾರರು ಯಾರೆಲ್ಲಾ ನೋಡೋಣ…
ಮುಂಬೈ ಇಂಡಿಯನ್ಸ್ (2013) ಸಂಪೂರ್ಣ ತಂಡ: ಭಾರತೀಯ ಆಟಗಾರರು: ದಿನೇಶ್ ಕಾರ್ತಿಕ್, ಹರ್ಭಜನ್ ಸಿಂಗ್, ಮುನಾಫ್ ಪಟೇಲ್, ಪ್ರಗ್ಯಾನ್ ಓಜಾ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್
ಅನ್ ಕ್ಯಾಪ್ಡ್ ಭಾರತೀಯ ಆಟಗಾರರು: ಅಬು ನೆಚಿಮ್ ಅಹ್ಮದ್, ಅಕ್ಷರ್ ಪಟೇಲ್, ಆದಿತ್ಯ ತಾರೆ, ಅಂಬಟಿ ರಾಯುಡು, ಅಮಿತೋಜ್ ಸಿಂಗ್, ಧವಲ್ ಕುಲಕರ್ಣಿ, ಜಲಜ್ ಸಕ್ಸೇನಾ, ಪವನ್ ಸುಯಲ್, ರಿಷಿ ಧವನ್, ಸೂರ್ಯಕುಮಾರ್ ಯಾದವ್, ಸುಶಾಂತ್ ಮರಾಠೆ, ಯುಜುವೇಂದ್ರ ಚಹಲ್
ವಿದೇಶಿ ಆಟಗಾರರು: ಐಡೆನ್ ಬ್ಲಿಝಾರ್ಡ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಜಾನ್ಸನ್, ನಾಥನ್ ಕೌಲ್ಟರ್-ನೈಲ್, ಫಿಲಿಪ್ ಹ್ಯೂಸ್, ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) ಜೇಕಬ್ ಓರಮ್, ಜೇಮ್ಸ್ ಫ್ರಾಂಕ್ಲಿನ್ (ನ್ಯೂಜಿಲೆಂಡ್) ಡ್ವೇನ್ ಸ್ಮಿತ್, ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್) ಲಸಿತ್ ಮಾಲಿಂಗ (ಶ್ರೀಲಂಕಾ)
ಇವರಲ್ಲಿ ಯಾವ ಆಟಗಾರ ಯುಜುವೇಂದ್ರ ಚಹಲ್ ಅವರನ್ನು ಕುಡಿದ ಅಮಲಿನಲ್ಲಿ ನೇತುಹಾಕಿದ್ದ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?
Published On - 5:49 pm, Mon, 11 April 22