ರಾಹುಲ್ ದ್ರಾವಿಡ್ಗೆ 50ರ ಸಂಭ್ರಮ
Happy Birthday Rahul Dravid: ರಾಹುಲ್ ದ್ರಾವಿಡ್ (Rahul Dravid)… ವಿಶ್ವ ಕ್ರಿಕೆಟ್ನ ಸವ್ಯಸಾಚಿ. ದಿ ವಾಲ್ ಖ್ಯಾತಿಯ ದ್ರಾವಿಡ್ ಅವರ ದಾಖಲೆ ಇಲ್ಲದೆ ಅವರ ಬಗ್ಗೆ ಮಾತನಾಡುವುದು ಅಸಾಧ್ಯ. ದಾಖಲೆಗಳಿಲ್ಲದೆ ರಾಹುಲ್ ದ್ರಾವಿಡ್ ಹೆಸರೂ ಕೂಡ ಅಪೂರ್ಣ ಎನಿಸುತ್ತದೆ. ತಮ್ಮ 16 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಿದಲ್ಲದೆ, ಹಲವು ದಾಖಲೆಗಳನ್ನು ಮಾಡುವುದರೊಂದಿಗೆ ದೊಡ್ಡ ದೊಡ್ಡ ದಾಖಲೆಗಳೂ ಮುರಿದಿದ್ದಾರೆ. ಆದರೆ ಅವರ ಹೆಸರಿನಲ್ಲಿ ದಾಖಲಾಗಿರುವ ಕೆಲವು ದಾಖಲೆಗಳನ್ನು ಮುರಿಯುವುದು ಅಸಾಧ್ಯದ ಮಾತು ಎಂತಲೇ ಹೇಳಲಾಗುತ್ತದೆ. ಅಂತಹ ಕಠಿಣ ದಾಖಲೆಗಳನ್ನು ಮಾಡಿದ ದ್ರಾವಿಡ್ ಇಂದು 50 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
1973 ರ ಜನವರಿ 11 ರಂದು ಇಂದೋರ್ನಲ್ಲಿ ಜನಿಸಿದ ದ್ರಾವಿಡ್ 1996 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಬಳಿಕ ತಮ್ಮ 16 ವರ್ಷಗಳ ಕ್ರಿಕೆಟ್ ಜೀವನಕ್ಕೆ 2012 ರಲ್ಲಿ ವಿದಾಯ ಹೇಳಿದ ದ್ರಾವಿಡ್ ಸದ್ಯ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಪ್ರಾಬಲ್ಯ
ದ್ರಾವಿಡ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, 164 ಟೆಸ್ಟ್ ಪಂದ್ಯಗಳನ್ನಾಡಿರುವ ದಿ ವಾಲ್, 52.31 ಸರಾಸರಿಯಲ್ಲಿ 13 ಸಾವಿರದ 288 ರನ್ ಗಳಿಸಿದ್ದಾರೆ. ಇದರಲ್ಲಿ 36 ಶತಕಗಳು ಮತ್ತು 63 ಅರ್ಧ ಶತಕಗಳು ಸೇರಿವೆ. ಅದೇ ಸಮಯದಲ್ಲಿ, 344 ಏಕದಿನ ಪಂದ್ಯಗಳಲ್ಲಿ 12 ಶತಕಗಳು ಮತ್ತು 83 ಅರ್ಧ ಶತಕಗಳನ್ನು ಒಳಗೊಂಡಂತೆ 39.16 ರ ಸರಾಸರಿಯಲ್ಲಿ 10 ಸಾವಿರದ 889 ರನ್ಗಳನ್ನು ದ್ರಾವಿಡ್ ಬಾರಿಸಿದ್ದಾರೆ. ಇದರೊಂದಿಗೆ ವಿಕೆಟ್ ಕೀಪಿಂಗ್ನಲ್ಲಿ ತನ್ನ ಸಾಮಥ್ರ್ಯ ತೋರಿರುವ ದ್ರಾವಿಡ್ ಒಟ್ಟು 406 ಕ್ಯಾಚ್ಗಳನ್ನು ಪಡೆದಿದ್ದು, ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ 14 ಸ್ಟಂಪಿಂಗ್ ಕೂಡ ಮಾಡಿದ್ದಾರೆ.
ಕ್ರಿಕೆಟ್ ಲೋಕದಲ್ಲಿ ದ್ರಾವಿಡ್ ಬರೆದ ದಾಖಲೆಗಳಿವು
- ದ್ರಾವಿಡ್ ತಮ್ಮ ಇಡೀ ಟೆಸ್ಟ್ ವೃತ್ತಿಜೀವನದಲ್ಲಿ 44 ಸಾವಿರದ 152 ನಿಮಿಷಗಳು ಅಂದರೆ 735 ಗಂಟೆ 52 ನಿಮಿಷಗಳನ್ನು ಕ್ರೀಸ್ನಲ್ಲಿ ಕಳೆದಿದ್ದಾರೆ. ಅಂದರೆ, ಅವರು ಸುಮಾರು 735 ಗಂಟೆಗಳ ಕಾಲ ಬ್ಯಾಟ್ ಮಾಡಿದ ದಾಖಲೆ ಬರೆದಿದ್ದಾರೆ.
- ಟೆಸ್ಟ್ ಕ್ರಿಕೆಟ್ನಲ್ಲಿ 30,000ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ವಿಶ್ವದ ಏಕೈಕ ಬ್ಯಾಟ್ಸ್ಮನ್ ದ್ರಾವಿಡ್. ಅವರು ತಮ್ಮ ವೃತ್ತಿಜೀವನದಲ್ಲಿ 31 ಸಾವಿರದ 258 ಎಸೆತಗಳನ್ನು ಆಡಿದ್ದಾರೆ.
- ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ 286 ಇನ್ನಿಂಗ್ಸ್ಗಳಲ್ಲಿ ಒಮ್ಮೆಯೂ ಗೋಲ್ಡನ್ ಡಕ್ ಆಗದ ದಾಖಲೆಯನ್ನು ದ್ರಾವಿಡ್ ಬರೆದಿದ್ದಾರೆ.
- 2004 ರಿಂದ ಮೊದಲ ಬಾರಿಗೆ ಐಸಿಸಿ ಪ್ರಶಸ್ತಿಗಳನ್ನು ನೀಡಲು ಆರಂಭಿಸಲಾಯಿತು. ಇದರಲ್ಲಿ ರಾಹುಲ್ ದ್ರಾವಿಡ್ಗೆ ವರ್ಷದ ಟೆಸ್ಟ್ ಕ್ರಿಕೆಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
- ಅಲ್ಲದೆ ದ್ರಾವಿಡ್ ಎಲ್ಲಾ ಟೆಸ್ಟ್ ಆಡುವ ತಂಡಗಳ ವಿರುದ್ಧ ಶತಕಗಳನ್ನು ಗಳಿಸಿದ ದಾಖಲೆಯನ್ನು ಬರೆದಿದ್ದಾರೆ.
- ಅತಿ ಹೆಚ್ಚು ರನ್ ಗಳಿಸಿದ, ಕ್ರೀಸ್ನಲ್ಲಿ ಹೆಚ್ಚು ಕಾಲ ಕಳೆದ ಆಟಗಾರನಾಗಿ ಮಾತ್ರ ರಾಹುಲ್ ದ್ರಾವಿಡ್ ದಾಖಲೆ ಬರೆದಿಲ್ಲ. ಬದಲಿಗೆ ಮತ್ತೊಂದು ವಿಶಿಷ್ಟ ದಾಖಲೆ ಅವರ ಹೆಸರಿನಲ್ಲಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ಗಳನ್ನು ಪಡೆದ ಮೊದಲ ವಿಕೆಟ್ಕೀಪರ್ ಅಲ್ಲದ ಆಟಗಾರ ದ್ರಾವಿಡ್. ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 210 ಕ್ಯಾಚ್ಗಳನ್ನು ಪಡೆದಿದ್ದಾರೆ.
- ಭಾರತ ತಂಡದ ಪ್ರಸ್ತುತ ಕೋಚ್ ಆಗಿರುವ ದ್ರಾವಿಡ್ ತಮ್ಮ ಏಕದಿನ ವೃತ್ತಿಜೀವನದಲ್ಲಿ ಎರಡು ಬಾರಿ 300 ಕ್ಕೂ ಹೆಚ್ಚು ಪಾಲುದಾರಿಕೆಗಳನ್ನು ಹಂಚಿಕೊಂಡಿದ್ದಾರೆ.
- ಏಕದಿನ ಕ್ರಿಕೆಟ್ನ ಇತಿಹಾಸದಲ್ಲಿ ಎರಡು ಬಾರಿ 300ಕ್ಕೂ ಹೆಚ್ಚು ಜೊತೆಯಾಟ ನೀಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.