
ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಊಹಾಪೋಹಗಳು, ನಾನಾ ರೀತಿಯ ಸುದ್ದಿಗಳು ಹಾಗೂ ಚರ್ಚೆಗಳಿಗೆ ಕೊನೆಗೂ ತೆರೆ ಬಿದ್ದಿದೆ. ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಹಾಲಿ ನಾಯಕ ಹಾರ್ದಿಕ್ ಪಾಂಡ್ಯ ಅವರ ಮುಂದಿನ ತಂಡ ಯಾವುದು ಎಂಬುದು ಅಂತಿಮವಾಗಿದೆ. ಮುಂಬೈ ಇಂಡಿಯನ್ಸ್ ತಂಡವನ್ನು ತೊರೆದು ಹಾರ್ದಿಕ್ ಪಾಂಡ್ಯ ಇದೀಗ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಐಪಿಎಲ್ 2026ರ ಸೀಸನ್ ಮುಗಿದ ಬಳಿಕವೇ ಹಾರ್ದಿಕ್ ಮುಂಬೈ ತಂಡದಿಂದ ಹೊರಬರುವುದು ಬಹುತೇಕ ಖಚಿತವಾಗಿತ್ತು. ಆದರೆ ಅವರು ಯಾವ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಬಗ್ಗೆ ಹಲವು ತಂಡಗಳ ಹೆಸರು ಕೇಳಿಬಂದಿದ್ದವು. ಕೊನೆಗೆ ಉಳಿದ ತಂಡಗಳನ್ನು ಹಿಂದಿಕ್ಕಿದ ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಈ ಡೀಲ್‌ನಲ್ಲಿ ಗೆಲುವು ಸಾಧಿಸಿದೆ. ಆದರೆ ಹಾರ್ದಿಕ್ ಅವರನ್ನು ತಂಡಕ್ಕೆ ಕರೆತರಲು ಪಂಜಾಬ್ ತನ್ನ ಪ್ರಮುಖ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಟ್ಟುಕೊಡಬೇಕಾಗಿದೆ.