ಆರ್ಸಿಬಿಗೆ ಬಿಗ್ ಶಾಕ್; ಟೂರ್ನಿಯಿಂದ ಹೊರಬಿದ್ದ ಸ್ಟಾರ್ ವಿದೇಶಿ ಪ್ಲೇಯರ್..!
RCB: ಟೂರ್ನಿ ಆರಂಭಕ್ಕೆ ಕೆಲವು ದಿನಗಳು ಬಾಕಿ ಉಳಿದಿರುವಾಗ ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ಎನಿಸಿಕೊಂಡಿದ್ದ ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ಹೀದರ್ ನೈಟ್ ಲೀಗ್ನಿಂದ ಹಿಂದೆ ಸರಿದಿದ್ದಾರೆ. ಅಂದರೆ ಮುಂದಿನ ಆವೃತ್ತಿಯಲ್ಲಿ ಹೀದರ್ ನೈಟ್ ಆಡುತ್ತಿಲ್ಲ ಎಂದು ವರದಿಯಾಗಿದೆ.
ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ಮುಂದಿನ ತಿಂಗಳು ಅಂದರೆ ಫೆಬ್ರವರಿ 23 ರಿಂದ ಆರಂಭವಾಗುತ್ತಿದೆ. ಇದಕ್ಕಾಗಿ ಎಲ್ಲಾ ತಂಡಗಳು ಕೂಡ ತಮ್ಮ ತಯಾರಿಯನ್ನು ಆರಂಭಿಸಿವೆ. ಈ ನಡುವೆ ಲೀಗ್ನ ಅತ್ಯಂತ ಪ್ರಸಿದ್ಧ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಟೂರ್ನಿ ಆರಂಭಕ್ಕೆ ಕೆಲವು ದಿನಗಳು ಬಾಕಿ ಉಳಿದಿರುವಾಗ ತಂಡದ ಸ್ಟಾರ್ ಬ್ಯಾಟರ್ ಎನಿಸಿಕೊಂಡಿದ್ದ ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ಹೀದರ್ ನೈಟ್ (Heather Knight) ಲೀಗ್ನಿಂದ ಹಿಂದೆ ಸರಿದಿದ್ದಾರೆ. ಅಂದರೆ ಮುಂದಿನ ಆವೃತ್ತಿಯಲ್ಲಿ ಹೀದರ್ ನೈಟ್ ಆಡುತ್ತಿಲ್ಲ ಎಂದು ವರದಿಯಾಗಿದೆ.
ಲೀಗ್ನಿಂದ ಹೊರಬಿದ್ದ ಹೀದರ್ ನೈಟ್
ಫೆಬ್ರವರಿ 23 ರಿಂದ ಪ್ರಾರಂಭವಾಗುವ ಮಹಿಳಾ ಪ್ರೀಮಿಯರ್ ಲೀಗ್ನಿಂದ ಹೀದರ್ ನೈಟ್ ಯಾಕೆ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ ಎಂಬುದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ಆದರೆ ಹೀದರ್ ನೈಟ್ರಂತೆಯೇ ಇಂಗ್ಲೆಂಡ್ ತಂಡದ ಇತರ ಮಹಿಳಾ ಆಟಗಾರ್ತಿಯರು ಕೂಡ ಮಹಿಳಾ ಪ್ರೀಮಿಯರ್ ಲೀಗ್ನಿಂದ ತಮ್ಮ ಹೆಸರನ್ನು ಹಿಂಪಡೆಯುತ್ತಿದ್ದಾರೆ.
ಇದಕ್ಕೆ ಯಾವುದೇ ಸೂಕ್ತ ಕಾರಣ ಸಿಕ್ಕಿಲ್ಲವಾದರೂ, ಮಹಿಳಾ ಪ್ರೀಮಿಯರ್ ಲೀಗ್ ಮುಗಿದ ತಕ್ಷಣ ಇಂಗ್ಲೆಂಡ್ ಮಹಿಳಾ ಪಡೆ, ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಾಗಿದೆ. ಹೀಗಾಗಿ ಈ ಸರಣಿಯ ಮೇಲೆ ಹೆಚ್ಚು ಗಮನ ಹರಿಸುವ ಸಲುವಾಗಿ ಇಂಗ್ಲೆಂಡ್ ತಂಡದ ವನಿತಾ ಆಟಗಾರ್ತಿಯರು ಮಹಿಳಾ ಪ್ರೀಮಿಯರ್ ಲೀಗ್ನಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ವರದಿಯಾಗಿದೆ.
ಬದಲಿಯಾಗಿ ಬಂದವರ್ಯಾರು?
ಫೆಬ್ರವರಿ 23 ರಿಂದ ಪ್ರಾರಂಭವಾಗುವ ಮಹಿಳಾ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯವು ಮಾರ್ಚ್ 17 ರಂದು ನಡೆಯಲ್ಲಿದೆ. ಆದರೆ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಮಾರ್ಚ್ 19 ರಂದು ಡ್ಯುನೆಡಿನ್‌ನಲ್ಲಿ ನಡೆಯಲ್ಲಿದೆ. ಹಾಗಾಗಿ ದ್ವಿಪಕ್ಷೀಯ ಸರಣಿಗೆ ಹೆಚ್ಚಿನ ಆಧ್ಯತೆ ನೀಡುವ ಸಲುವಾಗಿ ಹೀದರ್ ನೈಟ್ ಮಹಿಳಾ ಪ್ರೀಮಿಯರ್ ಲೀಗ್ನಿಂದ ಹಿಂದೆ ಸರಿದಿರುವ ಸಾಧ್ಯತೆಗಳಿವೆ. ಇದೀಗ ಹೀದರ್ ನೈಟ್ ಅವರ ಬದಲಿಯನ್ನು ಸಹ ಪ್ರಕಟಿಸಿರುವ ಆರ್ಸಿಬಿ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ನಡಿನ್ ಡಿ ಕ್ಲರ್ಕ್ ಅವರನ್ನು ನೈಟ್ ಬದಲಿಗೆ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.
ಡಿ ಕ್ಲರ್ಕ್ ವೃತ್ತಿ ಬದುಕು ಹೇಗಿದೆ?
ಮಧ್ಯಮ ವೇಗದ ಬೌಲಿಂಗ್ ಮತ್ತು ಬಲಗೈ ಬ್ಯಾಟರ್ ಆಗಿರುವ ಡಿ ಕ್ಲರ್ಕ್ ದಕ್ಷಿಣ ಆಫ್ರಿಕಾ ಪರ 30 ಏಕದಿನ ಮತ್ತು 46 ಟಿ20 ಪಂದ್ಯಗಳನ್ನಾಡಿದ್ದಾರೆ. ವರದಿಗಳ ಪ್ರಕಾರ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಡಬ್ಲ್ಯುಪಿಎಲ್‌ನಲ್ಲಿ ಭಾಗಿಯಾಗಿರುವ ಆಟಗಾರ್ತಿಯರಿಗೆ ಟಿ20 ಲೀಗ್ ಮುಗಿಯುವವರೆಗೆ ಭಾರತದಲ್ಲಿದ್ದರೆ, ನ್ಯೂಜಿಲೆಂಡ್‌ನಲ್ಲಿನ ಮೊದಲ ಮೂರು ಟಿ20 ಪಂದ್ಯಗಳಿಗೆ ಅವರ ಹೆಸರನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ ಎಂದು ವರದಿಯಾಗಿದೆ. ಹೀಗಾಗಿಯೇ ಆಟಗಾರ್ತಿಯರು ಒಬ್ಬೋಬ್ಬರಾಗಿ ಲೀಗ್ನಿಂದ ಹಿಂದೆ ಸರಿಯುತ್ತಿದ್ದಾರೆ. ಹೀದರ್ ನೈಟ್ ಹೊರತುಪಡಿಸಿ, ಯುಪಿ ವಾರಿಯರ್ಸ್ ಪರ ಆಡಬೇಕಿದ್ದ ಲಾರೆನ್ ಬೆಲ್ ಶುಕ್ರವಾರ ತನ್ನ ಹೆಸರನ್ನು ಡಬ್ಲ್ಯುಪಿಎಲ್‌ನಿಂದ ಹಿಂತೆಗೆದುಕೊಂಡಿದ್ದು, ನ್ಯೂಜಿಲೆಂಡ್ ಪ್ರವಾಸಕ್ಕೆ ತಯಾರಿ ನಡೆಸುವುದು ತನ್ನ ಆದ್ಯತೆಯಾಗಿದೆ ಎಂದು ಹೇಳಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ