ಕುಟುಂಬದ ತಂಟೆಗೆ ಬಂದರೆ ಹೊಡೆದುರುಳಿಸ್ತೀನಿ: ಹೆನ್ರಿಕ್ ಕ್ಲಾಸೆನ್ ಧಮ್ಕಿ!

Heinrich Klaasen: ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಹೆನ್ರಿಕ್ ಕ್ಲಾಸೆನ್ ಸಖತ್ ಡೇಂಜರಸ್! ತಮ್ಮ ಫ್ಯಾಮಿಲಿ ತಂಟೆಗೆ ಬಂದ ಫ್ಯಾನ್ ಮುಖಕ್ಕೆ ಹೊಡೆದಂತೆ ವಾರ್ನಿಂಗ್ ಕೊಟ್ಟಿದ್ದಾರೆ. ಅದು ಅಂತಿಂಥ ಎಚ್ಚರಿಕೆಯಲ್ಲ. ಬದಲಾಗಿ ಕುಟುಂಬದ ತಂಟೆಗೆ ಹೊಡೆದುರುಳಿಸ್ತೀನಿ ಎಂಬ ನೇರ ಧಮ್ಕಿ. ಈ ಖಡಕ್ ಎಚ್ಚರಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕುಟುಂಬದ ತಂಟೆಗೆ ಬಂದರೆ ಹೊಡೆದುರುಳಿಸ್ತೀನಿ: ಹೆನ್ರಿಕ್ ಕ್ಲಾಸೆನ್ ಧಮ್ಕಿ!
Heinrich Klaasen

Updated on: May 02, 2026 | 10:39 AM

ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಗೈಯುವ ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್ (Heinrich Klaasen), ರಿಯಲ್ ಲೈಫ್‌ನಲ್ಲಿ ಕೆಂಡಾಮಂಡಲವಾಗಿದ್ದಾರೆ. ತಮ್ಮ ಪತ್ನಿ ಮತ್ತು ಮಗುವಿನ ಖಾಸಗಿತನಕ್ಕೆ ಧಕ್ಕೆ ತಂದ ಅಭಿಮಾನಿಯೊಬ್ಬನಿಗೆ, “ಕುಟುಂಬದ ತಂಟೆಗೆ ಬಂದರೆ, ಹೊಡೆದುರುಳಿಸ್ತೀನಿ” ಎಂದು ನೇರವಾಗಿಯೇ ಧಮ್ಕಿ ಹಾಕಿದ್ದಾರೆ!

ಏನಿದು ಘಟನೆ?

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಮುಗಿಸಿ ಸನ್​ರೈಸರ್ಸ್​ ಹೈದರಾಬಾದ್ ತಂಡ ಹೋಟೆಲ್‌ನಿಂದ ವಿಮಾನ ನಿಲ್ದಾಣಕ್ಕೆ ಹೊರಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕ್ಲಾಸೆನ್ ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ನಡೆದು ಬರುತ್ತಿದ್ದಾಗ, ಅಭಿಮಾನಿಯೊಬ್ಬರು ಅತೀ ಸಮೀಪಕ್ಕೆ ಬಂದು ವಿಡಿಯೋ ಚಿತ್ರೀಕರಿಸಲು ಆರಂಭಿಸಿದ್ದಾರೆ.

ಕ್ಲಾಸೆನ್ ಆಕ್ರೋಶಕ್ಕೆ ಕಾರಣವೇನು?

ಆರಂಭದಲ್ಲಿ ಸಂಯಮದಿಂದಲೇ ವರ್ತಿಸಿದ ಹೆನ್ರಿಕ್ ಕ್ಲಾಸೆನ್, “ದಯವಿಟ್ಟು ವಿಡಿಯೋ ಮಾಡಬೇಡಿ, ನಮಗೆ ಸ್ವಲ್ಪ ಏಕಾಂತ ಬೇಕು” ಎಂದು ಮನವಿ ಮಾಡಿದ್ದರು. ಆದರೆ ಆ ಅಭಿಮಾನಿ ‘ನಾನು ನಿಮ್ಮ ದೊಡ್ಡ ಫ್ಯಾನ್’ ಎನ್ನುತ್ತಲೇ ಕ್ಯಾಮೆರಾವನ್ನು ಕ್ಲಾಸೆನ್ ಕುಟುಂಬದತ್ತ ತಿರುಗಿಸಿದ್ದಾನೆ. ಇದರಿಂದ ತೀವ್ರ ಆಕ್ರೋಶಗೊಂಡ ಕ್ಲಾಸೆನ್, ಕುಟುಂಬದ ವಿಡಿಯೋ ಮಾಡದಂತೆ ಸೂಚಿಸಿದ್ದಾರೆ.

ಕ್ಲಾಸೆನ್ ಧಮ್ಕಿ:

ಕುಟುಂಬದ ವಿಡಿಯೋ ಮಾಡಬೇಡಿ ಎಂದು ಸೂಚಿಸಿದರೂ ಅಭಿಮಾನಿ ಮಾತ್ರ ಕ್ಯಾಮೆರಾವನ್ನು ಕ್ಲಾಸೆನ್ ಅವರ ಪತ್ನಿ ಹಾಗೂ ಮಗುವಿನತ್ತ ಹಿಡಿದಿದ್ದ. ಇದರಿಂದ ಕೋಪಗೊಂಡ ಕ್ಲಾಸೆನ್  “ನಾನು ನಿನಗೆ ಮೊದಲೇ ಬೇಡ ಎಂದು ಹೇಳಿದ್ದೇನೆ. ಈಗ ನಾನು ಅಲ್ಲಿಗೆ ಹೋಗಿ ವಾಪಸ್ ಬರುವಷ್ಟರಲ್ಲಿ ನೀನೇನಾದರೂ ಫೋಟೋ ಅಥವಾ ವಿಡಿಯೋ ತೆಗೆದರೆ, ನಿಜವಾಗಲೂ ಹೊಡೆದುರುಳಿಸುತ್ತೀನಿ” ಎಂದು ಧಮ್ಕಿ ಹಾಕಿದ್ದಾರೆ.  ತಕ್ಷಣವೇ ಎಚ್ಚೆತ್ತುಕೊಂಡ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ದೂರ ಕಳುಹಿಸಿದ್ದಾರೆ.

ವಿಡಿಯೋ ವೈರಲ್:

ಹೆನ್ರಿಕ್ ಕ್ಲಾಸೆನ್ ಅವರ ಈ ಆಕ್ರೋಶಭರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ “ಆಟಗಾರರಿಗೂ ಕುಟುಂಬದೊಂದಿಗೆ ಇರಲು ಖಾಸಗಿತನ ಬೇಕು, ಅಭಿಮಾನಿಗಳು ಮಿತಿ ಮೀರುವುದು ಸರಿಯಲ್ಲ” ಎಂದು ಬಹುತೇಕರು ಕ್ಲಾಸೆನ್ ನಡೆಯನ್ನು ಬೆಂಬಲಿಸಿದ್ದಾರೆ.

ಇದನ್ನೂ ಓದಿ: GT vs RCB ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಬೌಲಿಂಗ್ ಮಾಡದಿರಲು ಇದುವೇ ಕಾರಣ!

ಒಟ್ಟಾರೆಯಾಗಿ, ಮೈದಾನದಲ್ಲಿ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಹೆನ್ರಿಕ್ ಕ್ಲಾಸೆನ್, ಮೈದಾನದ ಹೊರಗೂ ಅಷ್ಟೇ ಖಡಕ್ ವ್ಯಕ್ತಿತ್ವದವರು ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಅಭಿಮಾನದ ಹೆಸರಿನಲ್ಲಿ ಆಟಗಾರರ ಖಾಸಗಿ ಬದುಕಿಗೆ ಇಣುಕುವವರಿಗೆ ಕ್ಲಾಸೆನ್ ನೀಡಿರುವ ಈ ಎಚ್ಚರಿಕೆ ಇದೀಗ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಆಟಗಾರರ ಪ್ರದರ್ಶನವನ್ನು ಮೆಚ್ಚುವ ಅಭಿಮಾನಿಗಳು, ಅವರ ವೈಯಕ್ತಿಕ ಬದುಕಿಗೂ ಅಷ್ಟೇ ಗೌರವ ನೀಡಬೇಕಿರುವುದು ಇಂದಿನ ಅಗತ್ಯವಾಗಿದೆ.

 

 

Published On - 10:32 am, Sat, 2 May 26

Follow Us