
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಹಂತದ ವೇಳಾಪಟ್ಟಿ ಪ್ರಕಟವಾಗಿದೆ. ಈ ವೇಳಾಪಟ್ಟಿಯಂತೆ ಈ ಬಾರಿಯ ಐಪಿಎಲ್ ಮಾರ್ಚ್ 28 ರಿಂದ ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ.
ಇತ್ತ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದರೂ ಬಿಸಿಸಿಐ ಇನ್ನೂ ಕೂಡ ಫಾರ್ಮ್ಯಾಟ್ನ ಸ್ವರೂಪವನ್ನು ಬಹಿರಂಗಪಡಿಸಿಲ್ಲ ಎಂಬುದು ವಿಶೇಷ. ಅಂದರೆ ಈ ಬಾರಿ ಲೀಗ್ ಹಂತದಲ್ಲಿ ಎಷ್ಟು ಮ್ಯಾಚ್ಗಳನ್ನು ಆಡಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಐಪಿಎಲ್ ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಬಿಸಿಸಿಐ ಐಪಿಎಲ್ ಸೀಸನ್-18 ಮತ್ತು 19 ರಲ್ಲಿ 84 ಪಂದ್ಯಗಳನ್ನು ಆಯೋಜಿಸುವುದಾಗಿ ತಿಳಿಸಿತ್ತು. ಆದರೆ ಕಳೆದ ಬಾರಿ ಆಟಗಾರರ ಅಲಭ್ಯತೆಯ ಕಾರಣ 84 ಪಂದ್ಯಗಳನ್ನು ಆಯೋಜಿಸಿರಲಿಲ್ಲ. ಆದರೆ ಈ ಬಾರಿ 84 ಮ್ಯಾಚ್ಗಳ ಟೂರ್ನಿ ಆಯೋಜಿಸಲು ಪ್ರಸಾರಕ ಕಂಪೆನಿ ಸ್ಟಾರ್ ಸ್ಪೋರ್ಟ್ಸ್ ಪಟ್ಟು ಹಿಡಿದಿದೆ ಎಂದು ವರದಿಯಾಗಿದೆ.
ಇತ್ತ 84 ಮ್ಯಾಚ್ಗಳನ್ನು ಆಯೋಜಿಸಿದರೆ ಫಾರ್ಮ್ಯಾಟ್ ಬದಲಾಗಲಿದೆ. ಅಂದರೆ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಬೇಕಾಗುತ್ತದೆ. ಹೀಗಾಗಿಯೇ ಬಿಸಿಸಿಐ ಇನ್ನೂ ಕೂಡ ಟೂರ್ನಿಯ ಸ್ವರೂಪವನ್ನು ಬಹಿರಂಗಪಡಿಸಿಲ್ಲ.
ಐಪಿಎಲ್ನಲ್ಲಿ ಪಂದ್ಯಗಳ ಹೆಚ್ಚಳವಾದರೆ ಪ್ರತಿಯೊಂದು ತಂಡವು ಒಟ್ಟು 16 ಲೀಗ್ ಪಂದ್ಯಗಳನ್ನು ಆಡಲಿದೆ. ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ 10 ಮ್ಯಾಚ್ಗಳು ಹೆಚ್ಚಾಗಲಿದೆ. ಅಂದರೆ ಕಳೆದ ಸೀಸನ್ನಲ್ಲಿ 74 ಮ್ಯಾಚ್ಗಳನ್ನು ಆಡಲಾಗಿತ್ತು.
ಇದೀಗ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ಆಯೋಜಿಸಿದರೆ 84 ಪಂದ್ಯಗಳ ಟೂರ್ನಿ ನಡೆಯಲಿದೆ. ಇಲ್ಲಿ ಲೀಗ್ ಹಂತದಲ್ಲಿ 80 ಪಂದ್ಯಗಳು ನಡೆದರೆ, ಪ್ಲೇಆಫ್ ಹಂತದಲ್ಲಿ 4 ಮ್ಯಾಚ್ಗಳನ್ನು ಆಡಲಾಗುತ್ತದೆ.
ಅಂದರೆ ಇಲ್ಲಿ ಒಂದು ಗ್ರೂಪ್ನಲ್ಲಿ 5 ತಂಡಗಳಿರಲಿದೆ. ಈ ಗ್ರೂಪ್ನಲ್ಲಿರುವ ಉಳಿದ 4 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನಾಡಲಿದೆ. ಈ ಮೂಲಕ ಒಟ್ಟು 8 ಪಂದ್ಯಗಳನ್ನಾಡಲಾಗುತ್ತದೆ.
ಹಾಗೆಯೇ ಮತ್ತೊಂದು ಗ್ರೂಪ್ನಲ್ಲಿರುವ 5 ತಂಡಗಳ ಪೈಕಿ 3 ತಂಡಗಳ ವಿರುದ್ಧ ತಲಾ 2 ಬಾರಿ (6 ಪಂದ್ಯ) ಮತ್ತು ಉಳಿದ 2 ತಂಡಗಳ ವಿರುದ್ಧ ತಲಾ 1 ಬಾರಿ (2 ಪಂದ್ಯ) ಆಡಲಿದ್ದಾರೆ. ಈ ಮೂಲಕ ಒಟ್ಟು 16 ಪಂದ್ಯಗಳನ್ನಾಡಬಹುದು.
ಇದನ್ನೂ ಓದಿ: IPL 2026: ಈ ಬಾರಿಯ ಐಪಿಎಲ್ನಲ್ಲಿ RCBಗೆ ‘ಗೋಲ್ಡನ್’ ಗೌರವ!
ಆದರೆ ಇತ್ತ ಮೊದಲ ಹಂತದ ವೇಳಾಪಟ್ಟಿ ಪ್ರಕಟಣೆಯ ವೇಳೆ ಬಿಸಿಸಿಐ ತಂಡಗಳ ಗ್ರೂಪ್ಗಳನ್ನು ಪ್ರಕಟಿಸಿಲ್ಲ ಎಂಬುದು ವಿಶೇಷ. ಹೀಗಾಗಿಯೇ ಈ ಬಾರಿ ಒಂದು ತಂಡದ ಎಷ್ಟು ಪಂದ್ಯಗಳನ್ನಾಡಲಿದೆ ಎಂಬುದು ಅಧಿಕೃತವಾಗಿ ಖಚಿತವಾಗಲು ದ್ವಿತೀಯ ಹಂತದ ವೇಳಾಪಟ್ಟಿ ಪ್ರಕಟವಾಗುವವರೆಗೆ ಕಾಯಲೇಬೇಕು.