
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 14 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 223 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೆ, ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಲಷ್ಟೇ ಶಕ್ತವಾಯಿತು.
ಇಲ್ಲಿ ವೆಸ್ಟ್ ಇಂಡೀಸ್ ತಂಡ 14 ರನ್‌ಗಳ ಸೋಲನ್ನು ಅನುಭವಿಸಲು ಮುಖ್ಯ ಕಾರಣ ಟೀಮ್ ಇಂಡಿಯಾ ಪವರ್‌ಪ್ಲೇನಲ್ಲಿ ಸಾಧಿಸಿದ ಭರ್ಜರಿ ಮುನ್ನಡೆ. ಮೊದಲ 6 ಓವರ್‌ಗಳಲ್ಲಿ ಭಾರತೀಯ ಬ್ಯಾಟರ್‌ಗಳು ಅಬ್ಬರಿಸಿದ್ದಲ್ಲದೆ, ಬೌಲರ್‌ಗಳು ವಿಂಡೀಸ್ ರನ್ ವೇಗಕ್ಕೆ ಬ್ರೇಕ್ ಹಾಕಿದ್ದು ಪಂದ್ಯದ ಗತಿಯನ್ನೇ ಬದಲಿಸಿತು.
ಏಕೆಂದರೆ, ಪವರ್‌ಪ್ಲೇ (ಮೊದಲ 6 ಓವರ್‌ಗಳು) ಹಂತವನ್ನು ಹೊರತುಪಡಿಸಿ, ಉಳಿದೆಲ್ಲಾ ಹಂತಗಳಲ್ಲೂ ವೆಸ್ಟ್ ಇಂಡೀಸ್ ತಂಡವು ಟೀಮ್ ಇಂಡಿಯಾಗಿಂತಲೂ ಹೆಚ್ಚಿನ ರನ್ ಕಲೆಹಾಕಿತ್ತು. ಇದಾಗ್ಯೂ, ಆರಂಭಿಕ 6 ಓವರ್‌ಗಳಲ್ಲಿ ರನ್ ಗಳಿಕೆಯಲ್ಲಿ ವಿಪರೀತ ಹಿಂದೆ ಬಿದ್ದಿದ್ದರಿಂದ, ಕೆರಿಬಿಯನ್ ಪಡೆಗೆ ಟೀಮ್ ಇಂಡಿಯಾ ನೀಡಿದ ಬೃಹತ್ ಗುರಿಯನ್ನು ಚೇಸ್ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ಸಾಕ್ಷಿ ಪಂದ್ಯದ ಹಂತ-ಹಂತದ ಅಂಕಿ-ಅಂಶಗಳು:
ಟಾಸ್ ಸೋತರೂ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ 69 ರನ್ ಚಚ್ಚಿ ಸಿಡಿಲಬ್ಬರದ ಆರಂಭ ನೀಡಿದರು. ಅವರ ಈ ಅಬ್ಬರದಿಂದಾಗಿ ಭಾರತ ಮೊದಲ 6 ಓವರ್‌ಗಳಲ್ಲೇ 87 ರನ್ ಕಲೆಹಾಕಿತು. ಪ್ರತಿಯಾಗಿ ವೆಸ್ಟ್ ಇಂಡೀಸ್ ಕೂಡ ಉತ್ತಮ ಆರಂಭ ಪಡೆದರೂ, ಭಾರತದ ರನ್ ವೇಗಕ್ಕೆ ಹೋಲಿಸಿದರೆ 33 ರನ್‌ಗಳಷ್ಟು ಹಿಂದೆ ಬಿದ್ದಿತು. ಅಂದರೆ ಮೊದಲ 6 ಓವರ್‌ಗಳಲ್ಲಿ ವಿಂಡೀಸ್ ಪಡೆ ಕಲೆಹಾಕಿದ್ದು ಕೇವಲ 54 ರನ್ಗಳು ಮಾತ್ರ.
ಈ ಹಂತದಲ್ಲಿ ವೆಸ್ಟ್ ಇಂಡೀಸ್ ಪಂದ್ಯಕ್ಕೆ ಭರ್ಜರಿ ಕಂಬ್ಯಾಕ್ ಮಾಡಿತು. ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಸತತವಾಗಿ ಬಲಿಪಡೆದ ವಿಂಡೀಸ್ ಬೌಲರ್‌ಗಳು ರನ್ ವೇಗಕ್ಕೆ ಬ್ರೇಕ್ ಹಾಕಿದರು. ಇತ್ತ ಬ್ಯಾಟಿಂಗ್‌ನಲ್ಲಿ ಶಿಮ್ರಾನ್ ಹೆಟ್ಮೆಯರ್ (43 ರನ್) ಮತ್ತು ಕಮಿಲ್ ಪೂರನ್ (42 ರನ್) ಭಾರತದ ಬೌಲರ್‌ಗಳ ಮೇಲೆ ಮುಗಿಬಿದ್ದು 95 ರನ್ ಚಚ್ಚಿದರು. ಆದರೆ, ಭಾರತದ ಸ್ಪಿನ್ನರ್‌ಗಳು ಪ್ರಮುಖ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದರಿಂದ ಪಂದ್ಯ ಸಂಪೂರ್ಣವಾಗಿ ಕೈತಪ್ಪುವುದು ತಪ್ಪಿತು. ಅಂದರೆ ಮಧ್ಯಂತರ 7 ರಿಂದ 15 ಓವರ್‌ಗಳಲ್ಲಿ ಭಾರತ ತಂಡ 87 ರನ್ ಕಲೆಹಾಕಿದರೆ, ವೆಸ್ಟ್ ಇಂಡೀಸ್ 95 ರನ್ ಚಚ್ಚುವಲ್ಲಿ ಯಶಸ್ವಿಯಾಗಿದ್ದರು.
ಭಾರತ ಕೊನೆಯ ಓವರ್‌ಗಳಲ್ಲಿ ಸತತ ವಿಕೆಟ್ ಕಳೆದುಕೊಂಡು 223 ರನ್‌ಗಳಿಗೆ ಆಲೌಟ್ ಆಯಿತು. ಇತ್ತ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಪರ ಶಮರ್ ಸ್ಪ್ರಿಂಗರ್ ಕೇವಲ 11 ಎಸೆತಗಳಲ್ಲಿ ಅಜೇಯ 35 ರನ್ ಸಿಡಿಸಿ ಪಂದ್ಯವನ್ನು ರೋಮಾಂಚಕ ಘಟ್ಟಕ್ಕೆ ತಂದಿಟ್ಟರು. ಆದರೆ, ಅಂತಿಮ ಓವರ್‌ಗಳಲ್ಲಿ ಅದ್ಭುತ ಯಾರ್ಕರ್‌ಗಳನ್ನು ಎಸೆದ ಅರ್ಷದೀಪ್ ಸಿಂಗ್ ವಿಂಡೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಿ ಭಾರತಕ್ಕೆ 14 ರನ್‌ಗಳ ಸ್ಮರಣೀಯ ಗೆಲುವು ತಂದುಕೊಟ್ಟರು. ಅಂದರೆ 16 ರಿಂದ 20 ಓವರ್‌ಗಳಲ್ಲಿ ಟೀಮ್ ಇಂಡಿಯಾ ಕೇವಲ 49 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಅತ್ತ ವೆಸ್ಟ್ ಇಂಡೀಸ್ ತಂಡ ಕೊನೆಯ ಓವರ್‌ಗಳಲ್ಲಿ ಬರೋಬ್ಬರಿ 60 ರನ್ ಬಾರಿಸಿದ್ದರು.
ಇದನ್ನೂ ಓದಿ: ಈ ಬುಮ್ರಾ-ಗಿಮ್ರಾ ಏನು ಮಾಡ್ತಾನೆ? RCB ಮಾಡಿದ ಅತೀ ದೊಡ್ಡ ಎಡವಟ್ಟು ಇದು!
ಇದಾಗ್ಯೂ, ಮೊದಲ 6 ಓವರ್‌ಗಳ ಪವರ್‌ಪ್ಲೇನಲ್ಲಿ ವೆಸ್ಟ್ ಇಂಡೀಸ್ ಕೇವಲ 54 ರನ್ ಗಳಿಸಲಷ್ಟೇ ಶಕ್ತವಾಗಿದ್ದು ಆ ತಂಡಕ್ಕೆ ಭಾರಿ ಮುಳುವಾಯಿತು. ಅಂದರೆ, ಪವರ್‌ಪ್ಲೇನಲ್ಲಿ ಟೀಮ್ ಇಂಡಿಯಾ ಕಲೆಹಾಕಿದ್ದ 87 ರನ್‌ಗಳಿಗೆ ಹೋಲಿಸಿದರೆ ವಿಂಡೀಸ್ ಬರೋಬ್ಬರಿ 33 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಅಂತಿಮವಾಗಿ ಇದೇ ರನ್ ವ್ಯತ್ಯಾಸದ ಒತ್ತಡದಿಂದಾಗಿ ವೆಸ್ಟ್ ಇಂಡೀಸ್ ತಂಡವು 14 ರನ್‌ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಹೀಗಾಗಿ, ಆರಂಭಿಕ ಓವರ್‌ಗಳಲ್ಲಿ ಟೀಮ್ ಇಂಡಿಯಾ ಪ್ರದರ್ಶಿಸಿದ ಅದ್ಭುತ ಆಟವೇ ಈ ರೋಚಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು ಎಂದರೆ ತಪ್ಪಾಗಲಾರದು.