ಕ್ವಾರ್ಟರ್ ಫೈನಲ್‌ಗೂ ಮುನ್ನ ಟೀಂ ಇಂಡಿಯಾದಲ್ಲಿ ಬದಲಾವಣೆ; ಕೊರೊನಾ ಸೋಂಕಿತರು ಗುಣಮುಖ!

ಕ್ವಾರ್ಟರ್ ಫೈನಲ್‌ಗೂ ಮುನ್ನ ಟೀಂ ಇಂಡಿಯಾದಲ್ಲಿ ಬದಲಾವಣೆ; ಕೊರೊನಾ ಸೋಂಕಿತರು ಗುಣಮುಖ!
ಆರಾಧ್ಯ ಯಾದವ್

U19 World Cup 2022: ಗಾಯಗೊಂಡಿರುವ ಆಲ್‌ರೌಂಡರ್ ವಾಸು ವಾಟ್ಸ್ ಬದಲಿಗೆ ಆರಾಧ್ಯ ಯಾದವ್ ಅವರನ್ನು ICC ಅಂಡರ್ 19 ವಿಶ್ವಕಪ್ 2022 ಗಾಗಿ ಭಾರತ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

TV9kannada Web Team

| Edited By: pruthvi Shankar

Jan 29, 2022 | 3:45 PM

ಗಾಯಗೊಂಡಿರುವ ಆಲ್‌ರೌಂಡರ್ ವಾಸು ವಾಟ್ಸ್ ಬದಲಿಗೆ ಆರಾಧ್ಯ ಯಾದವ್ ಅವರನ್ನು ICC ಅಂಡರ್ 19 ವಿಶ್ವಕಪ್ 2022 (Under 19 World Cup 2022) ಗಾಗಿ ಭಾರತ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಐಸಿಸಿಯ ಟೂರ್ನಮೆಂಟ್ ತಾಂತ್ರಿಕ ಸಮಿತಿಯು ಶನಿವಾರ (29 ಜನವರಿ) ಇದನ್ನು ಅನುಮೋದಿಸಿದೆ. ‘ವಾಸು ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದು, ಟೂರ್ನಿಯಲ್ಲಿ ಮುಂದೆ ಆಡಲು ಸಾಧ್ಯವಾಗುವುದಿಲ್ಲ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ಶನಿವಾರ ನಡೆಯಲಿರುವ ಸೂಪರ್ ಲೀಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಎದುರಿಸಬೇಕಿದೆ. ಈ ಪಂದ್ಯ ಆ್ಯಂಟಿಗುವಾದಲ್ಲಿ ನಡೆಯಲಿದೆ. ಇದರಲ್ಲಿ ಯಾರು ಗೆದ್ದರೂ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ. ವಾಸು ವಾಟ್ಸ್ ಈ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನು ಆಡಿದ ಅದರಲ್ಲಿ ಒಂದು ವಿಕೆಟ್ ಪಡೆದಿದ್ದಾರೆ.

ಆಟಗಾರನ ಆಯ್ಕೆಗೆ ಪಂದ್ಯಾವಳಿಯ ತಾಂತ್ರಿಕ ಸಮಿತಿಯಿಂದ ಅನುಮೋದನೆ ಅಗತ್ಯವಿದೆ. ಆಗ ಮಾತ್ರ ಆ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ತಾಂತ್ರಿಕ ಸಮಿತಿಯಲ್ಲಿ ಅಧ್ಯಕ್ಷ ಕ್ರಿಸ್ ಟೆಟ್ಲಿ (ಐಸಿಸಿ ಈವೆಂಟ್ ಹೆಡ್), ಬೆನ್ ಲೀವರ್ (ಐಸಿಸಿ ಸೀನಿಯರ್ ಇವೆಂಟ್ ಮ್ಯಾನೇಜರ್), ಫವಾಜ್ ಬಕ್ಷ್ (ಟೂರ್ನಮೆಂಟ್ ನಿರ್ದೇಶಕ), ರೋಲ್ಯಾಂಡ್ ಹೋಲ್ಡರ್ (ಕ್ರಿಕೆಟ್ ವೆಸ್ಟ್ ಇಂಡೀಸ್ ಪ್ರತಿನಿಧಿ), ಅಲೆನ್ ವಿಲ್ಕಿನ್ಸ್ ಮತ್ತು ರಸ್ಸೆಲ್ ಅರ್ನಾಲ್ಡ್ (ಸ್ವತಂತ್ರ ಪ್ರತಿನಿಧಿ) ಇದ್ದಾರೆ.

ಕೊರೊನಾದಿಂದ ಗುಣಮುಖರಾದ ಪ್ರಮುಖ ಆಟಗಾರರು ಇದಕ್ಕೂ ಮುನ್ನ ಭಾರತ ತಂಡದ ನಾಯಕ ಯಶ್ ಧುಲ್ ಸೇರಿದಂತೆ ಪ್ರಮುಖ ಆಟಗಾರರೆಲ್ಲ ವಾಪಸಾಗಿರುವುದು ಭಾರತ ತಂಡಕ್ಕೆ ಸಂತಸದ ವಿಚಾರವಾಗಿದೆ. ಭಾರತ ತಂಡದ ಅರ್ಧ ಡಜನ್ ಆಟಗಾರರು ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಅವರಲ್ಲಿ ಹೆಚ್ಚಿನವರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಈ ಮಹತ್ವದ ಪಂದ್ಯದಲ್ಲಿ ಆಡಲು ಸಿದ್ಧರಾಗಿದ್ದಾರೆ. ಆರು ಆಟಗಾರರಾದ ಕ್ಯಾಪ್ಟನ್ ಧುಲ್, ವೈಸ್ ಕ್ಯಾಪ್ಟನ್ ಶೇಖ್ ರಶೀದ್, ಸಿದ್ಧಾರ್ಥ್ ಯಾದವ್, ಆರಾಧ್ಯ ಯಾದವ್, ವಾಸು ವಾಟ್ಸ್ ಮತ್ತು ಮಾನವ್ ಪಾರಿಖ್ ಐರ್ಲೆಂಡ್‌ನ ಪಂದ್ಯಕ್ಕೂ ಮುನ್ನ ನಡೆದ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದರು. ಐರ್ಲೆಂಡ್ ವಿರುದ್ಧದ ಭಾರತದ ಎರಡನೇ ಲೀಗ್ ಪಂದ್ಯದ ಮೊದಲು ಈ ಆಟಗಾರರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಇದು ನಾಲ್ಕು ಬಾರಿ ಚಾಂಪಿಯನ್ ತಂಡಕ್ಕೆ ದೊಡ್ಡ ಹೊಡೆತವನ್ನು ನೀಡಿತು. ಇವರಲ್ಲಿ ಐವರು ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದ್ದು ಉಗಾಂಡಾ ವಿರುದ್ಧದ ಕೊನೆಯ ಲೀಗ್ ಪಂದ್ಯವನ್ನು ಆಡಿರಲಿಲ್ಲ.

ಈಗ ಇವರೆಲ್ಲ ಶನಿವಾರದ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ. ಟ್ರಿನಿಡಾಡ್‌ನಲ್ಲಿ ಏಳು ದಿನಗಳ ಪ್ರತ್ಯೇಕತೆಯ ನಂತರ ಧುಲ್ ಮತ್ತು ಇತರ ಸೋಂಕಿತ ಆಟಗಾರರು ಶುಕ್ರವಾರ ಬೆಳಿಗ್ಗೆ ಆಂಟಿಗುವಾ ತಲುಪಿದರು. ಆದರೆ, ಧುಲ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿರುವ ನಿಶಾಂತ್ ಸಿಂಧು ಪಾಸಿಟಿವ್ ಬಂದಿದ್ದಾರೆ. ಅವರು ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಅವರ ಬದಲಿಗೆ ಅನೀಶ್ವರ್ ಗೌತಮ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

2020ರ ಫೈನಲ್‌ನಲ್ಲಿ ಭಾರತ ಬಾಂಗ್ಲಾದೇಶ ವಿರುದ್ಧ ಸೋತಿತ್ತು 2020 ರ ಅಂಡರ್ 19 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವು ಬಾಂಗ್ಲಾದೇಶವನ್ನು ಎದುರಿಸಿತು. ಇದರಲ್ಲಿ ಬಾಂಗ್ಲಾ ತಂಡ ಬಲಿಷ್ಠ ಸ್ಪರ್ಧಿ ಭಾರತವನ್ನು ಮಣಿಸಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಬಾಂಗ್ಲಾದೇಶದ ನಾಯಕ ರಕಿಬುಲ್ ಹಸನ್ ಆ ಸ್ಮರಣೀಯ ಫೈನಲ್‌ನ ಭಾಗವಾಗಿದ್ದರು. ಇತ್ತೀಚೆಗಷ್ಟೇ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆದ ಏಷ್ಯಾಕಪ್​ನ ಸೆಮಿಫೈನಲ್​ನಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಭಾರತ ಪ್ರಶಸ್ತಿ ಜಯಿಸಿತ್ತು.

ಇದನ್ನೂ ಓದಿ: U19 World Cup 2022: ಇಂದು ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ: ಯಾವುದರಲ್ಲಿ ನೇರ ಪ್ರಸಾರ, ಎಷ್ಟು ಗಂಟೆಗೆ ಪಂದ್ಯ?

U19 World Cup 2022: ಕ್ವಾರ್ಟರ್ ಫೈನಲ್‌ಗೂ ಮುನ್ನವೇ ಭಾರತಕ್ಕೆ ಆಘಾತ; ಹಂಗಾಮಿ ನಾಯಕ ನಿಶಾಂತ್ ಸಿಂಧುಗೆ ಕೊರೊನಾ

Follow us on

Related Stories

Most Read Stories

Click on your DTH Provider to Add TV9 Kannada