AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸಿಸಿ ವಿಶ್ವಕಪ್ ತಂಡ ಪ್ರಕಟ: ಹರ್ಮನ್​ಪ್ರೀತ್ ಕೌರ್​ಗೆ ಇಲ್ಲ ಸ್ಥಾನ..!

World Cup Team of the Tournament: ಈ ಬಾರಿಯ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಹರ್ಮನ್​ಪ್ರೀತ್ ಕೌರ್ ಯಶಸ್ವಿಯಾಗಿ ಮುನ್ನಡೆಸಿದ್ದರು. ಈ ಮೂಲಕ ಚೊಚ್ಚಲ ಬಾರಿ ಭಾರತ ಮಹಿಳಾ ತಂಡಕ್ಕೆ ಏಕದಿನ ವಿಶ್ವಕಪ್ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದರು. ಇದಾಗ್ಯೂ ಐಸಿಸಿ ಪ್ರಕಟಿಸಿದ ಟೀಮ್ ಆಫ್ ದಿ ಟೂರ್ನಮೆಂಟ್ ತಂಡದಲ್ಲಿ ಹರ್ಮನ್​ಪ್ರೀತ್ ಕೌರ್​ಗೆ ಸ್ಥಾನ ನೀಡಲಾಗಿಲ್ಲ.

ಐಸಿಸಿ ವಿಶ್ವಕಪ್ ತಂಡ ಪ್ರಕಟ: ಹರ್ಮನ್​ಪ್ರೀತ್ ಕೌರ್​ಗೆ ಇಲ್ಲ ಸ್ಥಾನ..!
Smriti- Kapp - Alana
ಝಾಹಿರ್ ಯೂಸುಫ್
|

Updated on: Nov 04, 2025 | 3:00 PM

Share

ಮಹಿಳಾ ಏಕದಿನ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಐಸಿಸಿ ಟೀಮ್ ಆಫ್ ದಿ ಟೂರ್ನಮೆಂಟ್ ಅನ್ನು ಪ್ರಕಟಿಸಿದೆ. 12 ಆಟಗಾರ್ತಿಯರನ್ನು ಒಳಗೊಂಡಿರುವ ಈ ತಂಡದಲ್ಲಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕಿ ಹರ್ಮನ್​ಪ್ರೀತ್ ಕೌರ್​ಗೆ ಸ್ಥಾನ ನೀಡಿಲ್ಲ ಎಂಬುದು ವಿಶೇಷ.  ಇನ್ನು ಈ ತಂಡದ ನಾಯಕಿಯಾಗಿ ಆಯ್ಕೆಯಾಗಿರುವುದು ಸೌತ್ ಆಫ್ರಿಕಾ ತಂಡದ ಕ್ಯಾಪ್ಟನ್ ಲಾರಾ ವೋಲ್ವಾರ್ಡ್​. ಹಾಗೆಯೇ ಹನ್ನೆರಡು ಸದಸ್ಯರುಗಳಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರ್ತಿಯರು ಕಾಣಿಸಿಕೊಂಡಿದ್ದಾರೆ.

ಭಾರತದ ಗೆಲುವಿನ ಅಭಿಯಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸ್ಮೃತಿ ಮಂಧಾನ, ಜೆಮಿಮಾ ರೊಡ್ರಿಗಸ್ ಮತ್ತು ದೀಪ್ತಿ ಶರ್ಮಾ  ಐಸಿಸಿ ಮಹಿಳಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮತ್ತೊಂದೆಡೆ ಇಡೀ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಸಿದ್ರಾ ನವಾಝ್​ ಐಸಿಸಿ ತಂಡದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ನಾಟ್ ಸೀವರ್ ಬ್ರಂಟ್ 12ನೇ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.

ಯಾರಿಗೆ ಯಾವ ಕ್ರಮಾಂಕ?

ಐಸಿಸಿ ವಿಶ್ವಕಪ್​ ತಂಡದಲ್ಲಿ ಆರಂಭಿಕರಾಗಿ ಆಯ್ಕೆಯಾಗಿರುವುದು ಟೀಮ್ ಇಂಡಿಯಾದ ಓಪನರ್ ಸ್ಮೃತಿ ಮಂಧಾನ ಹಾಗೂ ಸೌತ್ ಆಫ್ರಿಕಾದ ಆರಂಭಿಕ ಬ್ಯಾಟರ್ ಲಾರಾ ವೋಲ್ವಾರ್ಡ್. ಇನ್ನು ಮೂರನೇ ಕ್ರಮಾಂಕ್ಕೆ ಟೀಮ್ ಇಂಡಿಯಾದ ಜೆಮಿಮಾ ರೊಡ್ರಿಗಸ್ ಆಯ್ಕೆಯಾಗಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಸೌತ್ ಆಫ್ರಿಕಾದ ಆಲ್​ರೌಂಡರ್ ಮರಿಝನ್ನೆ ಕಪ್ ಕಾಣಿಸಿಕೊಂಡರೆ, ಐದನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ಆಲ್​ರೌಂಡರ್ ಆಶ್ಲೀ ಗಾರ್ಡ್ನರ್ ಇದ್ದಾರೆ. ಇನ್ನು ಟೀಮ್ ಇಂಡಿಯಾ ಆಲ್​ರೌಂಡರ್ ದೀಪ್ತಿ ಶರ್ಮಾ ಆರನೇ ಕ್ರಮಾಂಕಕ್ಕೆ ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ ಇಂಗ್ಲೆಂಡ್​ನ ಸೋಫಿ ಎಕ್ಲೆಸ್ಟೋನ್, ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್​ಲ್ಯಾಂಡ್, ಸೌತ್ ಆಫ್ರಿಕಾದ ನಾಡಿನ್ ಡಿ ಕ್ಲರ್ಕ್​, ಪಾಕಿಸ್ತಾನದ ಸಿದ್ರಾ ನವಾಝ್ ಹಾಗೂ ಆಸ್ಟ್ರೇಲಿಯಾ ಸ್ಪಿನ್ನರ್ ಅಲನಾ ಕಿಂಗ್ ಐಸಿಸಿ ವಿಶ್ವಕಪ್ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: IPL 2026: ಹೆಚ್ಚುವರಿ 10 ಪಂದ್ಯಗಳು… ಐಪಿಎಲ್​​ನಲ್ಲಿ ಮಹತ್ವದ ಬದಲಾವಣೆ

ಐಸಿಸಿ ಟೀಮ್ ಆಫ್ ದಿ ಟೂರ್ನಮೆಂಟ್:

  1. ಸ್ಮೃತಿ ಮಂಧಾನ (ಭಾರತ)
  2. ಲಾರಾ ವೋಲ್ವಾರ್ಡ್ (ಸೌತ್ ಆಫ್ರಿಕಾ)-(ನಾಯಕಿ)
  3. ಜೆಮಿಮಾ ರೊಡ್ರಿಗಸ್ (ಭಾರತ)
  4. ಮರಿಝನ್ನೆ ಕಪ್ (ಸೌತ್ ಆಫ್ರಿಕಾ)
  5. ಆಶ್ಲೀ ಗಾರ್ಡ್ನರ್ (ಆಸ್ಟ್ರೇಲಿಯಾ)
  6. ದೀಪ್ತಿ ಶರ್ಮಾ (ಭಾರತ)
  7. ಅನ್ನಾಬೆಲ್ ಸದರ್​ಲ್ಯಾಂಡ್ (ಆಸ್ಟ್ರೇಲಿಯಾ)
  8. ನಾಡಿನ್ ಡಿ ಕ್ಲರ್ಕ್ (ಸೌತ್ ಆಫ್ರಿಕಾ)
  9. ಸಿದ್ರಾ ನವಾಝ್ (ಪಾಕಿಸ್ತಾನ್)-(ವಿಕೆಟ್ ಕೀಪರ್)
  10. ಅಲನಾ ಕಿಂಗ್ (ಆಸ್ಟ್ರೇಲಿಯಾ).
  11. ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್).
  12. ನಾಟ್ ಸೀವರ್ ಬ್ರಂಟ್ (ಇಂಗ್ಲೆಂಡ್).