ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿ ಔಟಾದ ಮೊದಲ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್!

ICC World Cup 2023: ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಐತಿಹಾಸಿಕ ಘಟನೆಯೊಂದು ನಡೆದಿದೆ. ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಟ ರೀತಿಯಲ್ಲಿ ಔಟಾದ ಮೊದಲ ಕ್ರಿಕೆಟಿಗ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿ ಔಟಾದ ಮೊದಲ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್!
ಏಂಜೆಲೊ ಮ್ಯಾಥ್ಯೂಸ್
Follow us
ಪೃಥ್ವಿಶಂಕರ
|

Updated on:Nov 06, 2023 | 5:39 PM

ಶ್ರೀಲಂಕಾ ಮತ್ತು ಬಾಂಗ್ಲಾದೇಶ (Sri Lanka vs Bangladesh) ನಡುವೆ ನಡೆಯುತ್ತಿರುವ ಏಕದಿನ ವಿಶ್ವಕಪ್ (ICC World Cup 2023) ಪಂದ್ಯದಲ್ಲಿ ಐತಿಹಾಸಿಕ ಘಟನೆಯೊಂದು ನಡೆದಿದೆ. ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ (Angelo Matthews) ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಟ ರೀತಿಯಲ್ಲಿ ಔಟಾದ ಮೊದಲ ಕ್ರಿಕೆಟಿಗ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ವಾಸ್ತವವಾಗಿ ಲಂಕಾ ಇನ್ನಿಂಗ್ಸ್​ನ 25ನೇ ಓವರ್‌ನ ಎರಡನೇ ಎಸೆತದಲ್ಲಿ ಸದಿರ ಸಮರವಿಕ್ರಮ ವಿಕೆಟ್ ಪತನವಾಯಿತು. ಆ ಬಳಿಕ ಕ್ರೀಸ್​ಗಿಳಿದ ಮ್ಯಾಥ್ಯೂಸ್ ಚೆಂಡನ್ನು ಎದುರಿಸಲು ಸಾಕಷ್ಟು ಸಮಯ ತೆಗೆದುಕೊಂಡರು. ಇದನ್ನು ಗಮನಿಸಿದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್, ಮ್ಯಾಥ್ಯೂಸ್ ವಿರುದ್ಧ ಅಂಪೈರ್ ಬಳಿ ಟೈಮ್ ಔಟ್ ಮನವಿ ಮಾಡಿದರು. ಬಾಂಗ್ಲಾ ನಾಯಕನ ಮನವಿ ಪುರಸ್ಕರಿಸಿದ ಆನ್​ಪೀಲ್ಡ್ ಅಂಪೈರ್, ಮ್ಯಾಥ್ಯೂಸ್ ಔಟೆಂದು ತೀರ್ಪು ನೀಡಿದರು. ಕೆಲ ಸಮಯ ಅಂಪೈರ್ ಜತೆ ವಾಗ್ವಾದಕ್ಕಿಳಿದ ಮ್ಯಾಥ್ಯೂಸ್ ಅಸಹಾಯಕರಾಗಿ ಪೆವಿಲಿಯನ್​ಗೆ ಮರಳಬೇಕಾಯಿತು.

ಟೈಮ್ ಔಟಾದ ಮ್ಯಾಥ್ಯೂಸ್

ಮ್ಯಾಥ್ಯೂಸ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಟೈಮ್ ಔಟ್ ಆದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಮ್ಯಾಥ್ಯೂಸ್​ಗೂ ಮೊದಲು ಯಾವುದೇ ಬ್ಯಾಟ್ಸ್‌ಮನ್‌ ಈ ರೀತಿ ಔಟಾಗಿರಲಿಲ್ಲ. ಮ್ಯಾಥ್ಯೂಸ್ ಬ್ಯಾಟಿಂಗ್‌ಗೆ ಬಂದಾಗ ಅವರ ಹೆಲ್ಮೆಟ್‌ ಕಟ್ಟಿದ್ದ ಪಟ್ಟಿ ಹರಿದಿತ್ತು. ಇದನ್ನು ಗಮನಿಸಿದ ಮ್ಯಾಥ್ಯೂಸ್, ಬೇರೆ ಹೆಲ್ಮೆಟ್ ತರುವಂತೆ ಡಗೌಟ್​ಗೆ ಸನ್ನೆ ಮಾಡಿದರು. ಆದರೆ ಆ ವೇಳೆಗಾಗಲೇ ಮ್ಯಾಥ್ಯೂಸ್ ಮೈದಾನಕ್ಕೆ ಬಂದು 2 ನಿಮಿಷಕ್ಕೂ ಹೆಚ್ಚು ಸಮಯ ಕಳೆದಿತ್ತು. ಇದನ್ನು ಗಮನಿಸಿದ ಬಾಂಗ್ಲಾದೇಶ ನಾಯಕ ಹಸನ್, ಮ್ಯಾಥ್ಯೂಸ್ ವಿರುದ್ಧ ಟೈಮ್ ಔಟ್ ಮನವಿ ಮಾಡಿದರು. ನಿಯಮಗಳ ಪ್ರಕಾರ, ಒಬ್ಬ ಬ್ಯಾಟರ್ ಔಟಾದ ಬಳಿಕ ಹೊಸ ಬ್ಯಾಟ್ಸ್‌ಮನ್ ಎರಡು ನಿಮಿಷಗಳಲ್ಲಿ ಚೆಂಡನ್ನು ಎದುರಿಸಲು ಸಿದ್ಧರಾಗಿರಬೇಕು. ಆದರೆ ಮ್ಯಾಥ್ಯೂಸ್‌ಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂಪೈರ್ ಔಟ್ ನೀಡಬೇಕಾಯಿತು. ಒಂದು ವೇಳೆ ಬಾಂಗ್ಲಾದೇಶದ ನಾಯಕ ಹಸನ್, ಇಲ್ಲಿ ಮ್ಯಾಥ್ಯೂಸ್ ಔಟ್​ಗೆ ಮನವಿ ಮಾಡದಿದ್ದರೆ ಮ್ಯಾಥ್ಯೂಸ್ ಔಟಾಗುತ್ತಿರಲಿಲ್ಲ.

ICC World Cup: ಸಿಂಹಳೀಯರ ನಾಡಲ್ಲಿ ಅಲ್ಲೋಲ-ಕಲ್ಲೋಲ: ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿದ ಶ್ರೀಲಂಕಾ

ಹೆಲ್ಮೆಟ್ ಮೇಲೆ ಕೋಪ, ಐಸಿಸಿ ಕ್ರಮ?

ಬಾಂಗ್ಲಾದೇಶದ ಮನವಿಯ ನಂತರ, ಮ್ಯಾಥ್ಯೂಸ್ ದೀರ್ಘಕಾಲದವರೆಗೆ ಅಂಪೈರ್ಗಳೊಂದಿಗೆ ಚರ್ಚೆ ನಡೆಸಿದರು. ಆದರೆ ಅಂಪೈರ್ ಒಪ್ಪಲಿಲ್ಲ. ನಂತರ ಮ್ಯಾಥ್ಯೂಸ್ ಬಾಂಗ್ಲಾದೇಶ ತಂಡದೊಂದಿಗೆ ಮಾತನಾಡಿದ್ದರು. ಆದರೆ ಆ ತಂಡವೂ ಒಪ್ಪಲಿಲ್ಲ. ಬಾಂಗ್ಲಾ ನಾಯಕ ಹಸನ್, ಐಸಿಸಿ ನಿಯಮಗಳ ಪ್ರಕಾರ ನಾವು ಮನವಿ ಮಾಡಿದ್ದೇವೆ ಎಂಬುದನ್ನು ಮ್ಯಾಥ್ಯೂಸ್ ಗಮನಕ್ಕೆ ತಂದರು. ಆ ಬಳಿಕ ಮೈದಾನದಿಂದ ಹೊರಹೋದ ಮ್ಯಾಥ್ಯೂಸ್ ಕೋಪದಿಂದ, ಬೌಂಡರಿ ದಾಟಿದ ತಕ್ಷಣ ತಮ್ಮ ಹೆಲ್ಮೆಟ್ ಅನ್ನು ನೆಲಕ್ಕೆ ಜೋರಾಗಿ ಎಸೆದರು. ಐಸಿಸಿ ನಿಯಮಗಳ ಪ್ರಕಾರ ಯಾವುದೇ ಆಟಗಾರ ಇಂತಹ ಕೆಲಸಗಳನ್ನು ಮಾಡುವಂತಿಲ್ಲ. ಅಂದರೆ ಅವರು ಈ ರೀತಿ ಕ್ರಿಕೆಟ್ ಸಾಮಗ್ರಿಗಳನ್ನು ಎಸೆಯುವಂತಿಲ್ಲ. ಒಂದು ವೇಳೆ ಆಟಗಾರ ಈ ರೀತಿಯಾಗಿ ನಿಯಮ ಉಲ್ಲಂಘನೆ ಮಾಡಿದರೆ, ಆತನಿಗೆ ಐಸಿಸಿ ಶಿಕ್ಷೆ ರೂಪದಲ್ಲಿ ದಂಡವನ್ನು ವಿಧಿಸುತ್ತದೆ. ಇದೀಗ ನಿಯಮ ಉಲ್ಲಂಘಿಸಿರುವ ಮ್ಯಾಥ್ಯೂಸ್ ಮೇಲೆ ಐಸಿಸಿ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

View this post on Instagram

A post shared by ICC (@icc)

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಬ್ಬ ಬ್ಯಾಟ್ಸ್‌ಮನ್‌ಗೆ ಟೈಮ್ ಔಟ್ ನೀಡಿದ ಮೊದಲ ಘಟನೆ ಇದಾಗಿದೆ. ಕ್ರಿಕೆಟ್ ನಲ್ಲಿ 10 ರೀತಿಯ ಔಟ್​ಗಳಿವೆ. ಇಲ್ಲಿಯವರೆಗೆ ಅನೇಕ ಬ್ಯಾಟ್ಸ್‌ಮನ್‌ಗಳು ಒಂಬತ್ತು ರೀತಿಯಲ್ಲಿ ಔಟಾಗಿದ್ದಾರೆ. ಆದರೆ ಯಾರೂ ಸಹ ಟೈಮ್ ಔಟ್ ಆಗಿರಲಿಲ್ಲ. ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ 2006-07ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಕೊಂಚ ತಡವಾಗಿ ಕ್ರೀಸ್​ಗೆ ಬಂದಿದ್ದರು. ಆದರೆ ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಗ್ರೇಮ್ ಸ್ಮಿತ್ ಅವರ ವಿರುದ್ಧ ಮೇಲ್ಮನವಿ ಸಲ್ಲಿಸಲಿಲ್ಲ, ಆದ್ದರಿಂದ ಅವರನ್ನು ಔಟ್ ನೀಡಲಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:34 pm, Mon, 6 November 23