‘ನಿಮಗೆ ನಾಚಿಕೆಯಾಗಬೇಕು’! ಪಾಕ್ ಮಾಜಿ ಆಟಗಾರನ ಮೋಸದಾಟದ ಆರೋಪಕ್ಕೆ ಶಮಿ ಖಡಕ್ ಉತ್ತರ
Mohammed Shami, ICC World Cup 2023: ವಾಸ್ತವವಾಗಿ ಟೀಂ ಇಂಡಿಯಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ರಾಝಾ, ಈ ಬಗ್ಗೆ ಐಸಿಸಿ ತನಿಖೆ ನಡೆಸಬೇಕು ಎಂದು ಹೇಳಿದ್ದರು. ಆದರೆ ರಾಝಾ ಅವರ ಈ ಆರೋಪಗಳನ್ನು ಹಲವು ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ.
ವಿಶ್ವಕಪ್‌ನಲ್ಲಿ (ICC World Cup 2023) ಭಾರತದ ಅಜೇಯ ಓಟವನ್ನು ನೋಡಿ ಪಾಕ್ ಮಾಜಿ ಕ್ರಿಕೆಟಿಗರ ನಿದ್ದೆ ಮಾಯವಾಗಿದೆ ಎಂದು ತೊರುತ್ತದೆ. ರೋಹಿತ್ ಪಡೆಯ ಈ ಯಶಸ್ಸನ್ನು ಸಹಿಸದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಝಾ (Hasan Raza) ಕೆಲವು ದಿನಗಳ ಹಿಂದೆ ಭಾರತದ ವಿರುದ್ಧ ಬೇರೆ ಬಾಲ್ ಬಳಸುವ ಆರೋಪಗಳನ್ನು ಮಾಡಿದ್ದು ಗೊತ್ತೇ ಇದೆ. ಟೀಂ ಇಂಡಿಯಾ ಬೌಲರ್‌ಗಳು ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಕಡಿಮೆ ಸ್ಕೋರ್‌ಗೆ ಆಲೌಟ್ ಮಾಡಿದ ಕುರಿತು ಟಿವಿ ವಾಹಿನಿಯೊಂದರಲ್ಲಿ ಮಾತನಾಡಿದ ರಾಝಾ, ಐಸಿಸಿ (ICC), ಬಿಸಿಸಿಐ (BCCI) ಮತ್ತು ಭಾರತೀಯ ಬೌಲರ್‌ಗಳು ಒಟ್ಟಾಗಿ ಪಿತೂರಿ ಮಾಡುತ್ತಿದ್ದಾರೆ ಎಂಬ ಅಸಂಬದ್ಧ ಹೇಳಿಕೆ ನೀಡಿದ್ದರು. ಅಲ್ಲದೆ ವಿಶ್ವಕಪ್‌ನಲ್ಲಿನ ಡಿಆರ್‌ಎಸ್ ನಿರ್ಧಾರಗಳು ಸಹ ಭಾರತ ತಂಡದ ಪರವಾಗಿ ಬರುತ್ತಿವೆ ಎಂಬುದು ಅವರ ಇನ್ನೊಂದು ಆರೋಪವಾಗಿತ್ತು. ಇದೀಗ ರಾಝಾ ಅವರ ಈ ಅರ್ಥವಿಲ್ಲದ ಆರೋಪಕ್ಕೆ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ (Mohammed Shami) ಖಡಕ್ ಉತ್ತರ ನೀಡಿ, ಪಾಕ್ ಮಾಜಿ ಕ್ರಿಕೆಟಿಗ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.
ನಮ್ಮ ಗೌರವವನ್ನು ಹಾಳುಮಾಡಬೇಡಿ
ವಾಸ್ತವವಾಗಿ ಮೇಲೆ ಹೇಳಿದಂತೆ ಈ ಎಲ್ಲಾ ಆರೋಪಗಳನ್ನು ಮಾಡಿದ್ದ ರಾಝಾ, ಈ ಬಗ್ಗೆ ಐಸಿಸಿ ತನಿಖೆ ನಡೆಸಬೇಕು ಎಂದು ಹೇಳಿದ್ದರು. ಆದರೆ ರಾಝಾ ಅವರ ಈ ಆರೋಪಗಳನ್ನು ಹಲವು ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. ಹಸನ್ ಅವರ ಹೇಳಿಕೆಗೆ ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ವಾಸಿಂ ಅಕ್ರಮ್ ಕೂಡ ಕೋಪಗೊಂಡಿದ್ದರು. ದಯವಿಟ್ಟು ನಮ್ಮ ಗೌರವವನ್ನು ಹಾಳುಮಾಡಬೇಡಿ ಎಂದು ಹಸನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
‘ಚೆನ್ನಾಗಿ ಆಡಿದರೆ ನಮ್ಮ ಭವಿಷ್ಯಕ್ಕೆ ಒಳ್ಳೆಯದು’: ಅಚ್ಚರಿಯ ಹೇಳಿಕೆ ನೀಡಿದ ಮೊಹಮ್ಮದ್ ಶಮಿ ಮಾಜಿ ಪತ್ನಿ
ನಿಮಗೆ ನಾಚಿಕೆಯಾಗಬೇಕು
ಇದೀಗ ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಪಾಕಿಸ್ತಾನಿ ಕ್ರಿಕೆಟಿಗನ ವಂಚನೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ಇಂತಹ ಆರೋಪಗಳನ್ನು ಮಾಡಲು ನಿಮಗೆ ನಾಚಿಕೆಯಾಗಬೇಕು. ಇನ್ಮುಂದೆ ಇಂತಹ ಸುಳ್ಳು ಮತ್ತು ಅಸಂಬದ್ಧ ಮಾತುಗಳನ್ನು ನಿಲ್ಲಿಸಿ. ಆಟದ ಮೇಲೆ ಕೇಂದ್ರೀಕರಿಸಿ. ಕೆಲವೊಮ್ಮೆ ಇತರರ ಯಶಸ್ಸನ್ನು ಆನಂದಿಸಿ. ಇದು ಐಸಿಸಿ ವಿಶ್ವಕಪ್. ನಿಮ್ಮ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲ. ನಿಮ್ಮ ತಂಡದ ಮಾಜಿ ಕ್ರಿಕೆಟಿಗ ವಾಸಿಂ ಭಾಯ್ (ವಾಸಿಂ ಅಕ್ರಮ್) ಹೇಳುವುದನ್ನು ಆಲಿಸಿ. ಕನಿಷ್ಠ ನಿಮ್ಮ ಆಟಗಾರರ ಮೇಲೆ ನಂಬಿಕೆ ಇಡಿ’ ಎಂದು ಶಮಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಗಳಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಮೊಹಮ್ಮದ್ ಶಮಿ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ. ಶಮಿ ಪಾಕಿಸ್ತಾನ ಕ್ರಿಕೆಟಿಗನಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಟೀಂ ಇಂಡಿಯಾ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಮೊಹಮ್ಮದ್ ಶಮಿ ವಿಶ್ವಕಪ್ ಪಯಣ
ವಿಶ್ವಕಪ್ ಆರಂಭಿಕ ಮೂರು ಪಂದ್ಯಗಳಲ್ಲಿ ತಂಡದಿಂದ ಹೊರಗುಳಿದಿದ್ಧ ಮೊಹಮ್ಮದ್ ಶಮಿ, ತಂಡಕ್ಕೆ ಆಯ್ಕೆಯಾದ ಬಳಿಕ ಎಲ್ಲರಿಗೂ ಅಚ್ಚರಿ ಮೂಡಿಸುವ ಪ್ರದರ್ಶನ ನೀಡುತ್ತಿದ್ದಾರೆ. ವಿಶ್ವಕಪ್‌ನಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ಶಮಿ ಬರೋಬ್ಬರಿ 16 ವಿಕೆಟ್ ಉರುಳಿಸಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಪ್ರಸ್ತುತ 4ನೇ ಸ್ಥಾನದಲ್ಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ