ಟೀಮ್ ಇಂಡಿಯಾದ (Team India) ಉಪನಾಯಕ ಕೆಎಲ್ ರಾಹುಲ್ (KL Rahul) ಇಂಗ್ಲೆಂಡ್ ವಿರುದ್ದದ ಸರಣಿಯಿಂದ ಹೊರಗುಳಿದಿದ್ದರು. ಸೌತ್ ಆಫ್ರಿಕಾ ವಿರುದ್ದದ ಸರಣಿಗೂ ಮುನ್ನ ತೊಡೆಸಂದು ಗಾಯದ ಸಮಸ್ಯೆಗೆ ಒಳಗಾಗಿದ್ದ ರಾಹುಲ್ ತಂಡದಿಂದ ಹೊರ ನಡೆದಿದ್ದರು. ಅಷ್ಟೇ ಅಲ್ಲದೆ ಗಾಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಲು ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಯನ್ನೂ ಸಹ ಮಾಡಿಸಿಕೊಂಡಿದ್ದಾರೆ. ಈಗಾಗಲೇ ಯಶಸ್ವಿ ಶಸ್ತ್ರಚಿಕಿತ್ಸೆ ಮುಗಿಸಿ ಬಂದಿದ್ದಾರೆ. ಇತ್ತ ಅಕ್ಟೋಬರ್-ನವೆಂಬರ್ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಇದರ ನಡುವೆ ನಡೆಯುವ ಸರಣಿಗಳು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಮಹತ್ವದ ಪಂದ್ಯಗಳಾಗಿವೆ. ಏಕೆಂದರೆ ಈ ಸರಣಿಗಳಲ್ಲಿನ ಪ್ರದರ್ಶನದ ಆಧಾರದ ಮೇಲೆ ಭಾರತ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಈಗಾಗಲೇ ಟೀಮ್ ಇಂಡಿಯಾ ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ.
ಆದರೆ ಅತ್ತ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ದದ ಸರಣಿಯಿಂದ ಹೊರಗುಳಿದಿರುವ ಕಾರಣ ಯಾವಾಗ ಕಂಬ್ಯಾಕ್ ಮಾಡುತ್ತಾರೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು. ಏಕೆಂದರೆ ಸರ್ಜರಿಯ ಬಳಿಕ ಕೆಎಲ್ ರಾಹುಲ್ ವಿಶ್ರಾಂತಿ ತೆಗೆದುಕೊಂಡಿದ್ದರು. ಇದೀಗ ಇಂಗ್ಲೆಂಡ್ ಸರಣಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇದಾದ ಬಳಿಕ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಭಾರತ-ವೆಸ್ಟ್ ಇಂಡೀಸ್ 5 ಟಿ20 ಪಂದ್ಯ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಜುಲೈ 22 ರಿಂದ ಈ ಸರಣಿ ಶುರುವಾಗಲಿದ್ದು, ಈ ವೇಳೆಗೆ ಕೆಎಲ್ ರಾಹುಲ್ ಚೇತರಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಹಾಗೆಯೇ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯು ಜುಲೈ 29 ರಿಂದ ಶುರುವಾಗಲಿದೆ. ಈ ಸರಣಿಯ ಮೂಲಕ ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಮೂಲಗಳು, ವಿಂಡೀಸ್ ಸರಣಿಗೆ ಆಯ್ಕೆಯಾಗಲಿರುವ ಟೀಮ್ ಇಂಡಿಯಾದಲ್ಲಿ ಕೆಎಲ್ ರಾಹುಲ್ ಹಾಗೂ ಕುಲ್ದೀಪ್ ಯಾದವ್ ಸ್ಥಾನ ಪಡೆಯುವುದು ಬಹುತೇಕ ಖಚಿತ ಎಂದಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯ ಮೂಲಕ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ವೈಭವವನ್ನು ಕಣ್ತುಂಬಿಕೊಳ್ಳಬಹುದು.
ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ವೇಳಾಪಟ್ಟಿ ಹೀಗಿದೆ: