IND vs AUS: ಆಸೀಸ್ ಸ್ಪಿನ್ ದಾಳಿಗೆ ತತ್ತರಿಸಿದ ಭಾರತ; 109 ರನ್ಗಳಿಗೆ ಆಲೌಟ್
IND vs AUS: ಇಂದೋರ್ನಲ್ಲಿ ಇಂದಿನಿಂದ ಆರಂಭವಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 109 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ.

ಇಂದೋರ್ನಲ್ಲಿ ಇಂದಿನಿಂದ ಆರಂಭವಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ (India Vs Australia) ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಕೇವಲ 109 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಟೀಂ ಇಂಡಿಯಾ ನಾಯಕನ ನಿರ್ಧಾರ ತಪ್ಪು ಎಂದು ಸಾಭೀತುಪಡಿಸಿದ ಆಸೀಸ್ ಬೌಲಿಂಗ್ ವಿಭಾಗ ರೋಹಿತ್ ಬಳಗವನ್ನು ಅಲ್ಪ ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಟೀಂ ಇಂಡಿಯಾ ಪರ ಉರುಳಿದ ಅಷ್ಟೂ ವಿಕೆಟ್ಗಳನ್ನು ಆಸೀಸ್ನ ಸ್ಪಿನ್ ವಿಭಾಗ ಕಬಳಿಸಿದ್ದಯ ವಿಶೇಷವಾಗಿತ್ತು. ಆಸೀಸ್ ಪರ ಮ್ಯಾಥ್ಯೂ ಕುಹ್ನೆಮನ್ 5 ವಿಕೆಟ್ ಪಡೆದರೆ, ನಾಥನ್ ಲಿಯಾನ್ 3 ವಿಕೆಟ್ ಹಾಗೂ ಟಾಡ್ ಮರ್ಫಿ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಭಾರತದ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಸ್ಫೋಟಕ ಆರಂಭ ನೀಡಲು ಮುಂದಾದರು. ಆದರೆ 27 ರನ್ಗಳಿಸುವುದರೊಳಗೆ ಈ ಜೋಡಿ ಬೇರ್ಪಟಿತು. ಬಿಗ್ ಶಾಟ್ ಆಡುವ ಯತ್ನದಲ್ಲಿ ನಾಯಕ ರೋಹಿತ್ ಸ್ಟಂಪ್ ಔಟ್ ಆದರು. ಬಳಿಕ ರನ್ ಖಾತೆಗೆ 7 ರನ್ ಸೇರಿಸುವುದರೊಳಗೆ ಮತ್ತೊಬ್ಬ ಆರಂಭಿಕ ಗಿಲ್ ಕೂಡ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಚೇತೇಶ್ವರ್ ಪೂಜಾರ ಕೂಡ ಕೇವಲ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
IND vs AUS: ಕನ್ನಡಿಗನನ್ನು ತಂಡದಿಂದ ಹೊರಗಿಟ್ಟರೂ ಬದಲಾಗಲಿಲ್ಲ ಭಾರತದ ಬ್ಯಾಟಿಂಗ್ ಹಣೆಬರಹ..!
50 ರನ್ ಒಳಗಾಗಿಯೇ ಪ್ರಮುಖ 5 ವಿಕೆಟ್
ಇನ್ನು ಬ್ಯಾಟಿಂಗ್ನಲ್ಲಿ ಮುಂಬಡ್ತಿ ಪಡೆದು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ರವೀಂದ್ರ ಜಡೇಜಾ ಕೂಡ ಒಂದು ಬೌಂಡರಿ ಬಾರಿಸಿದ ಬಳಿಕ ಬ್ಯಾಟ್ ಎತ್ತಿಟ್ಟರು. ಹೀಗಾಗಿ ಟೀಂ ಇಂಡಿಯಾ 50 ರನ್ ಒಳಗಾಗಿಯೇ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಜಡೇಜಾ ವಿಕೆಟ್ ಬಳಿಕ ಬಂದ ಶ್ರೇಯಸ್ ಅಯ್ಯರ್ ಕೂಡ ಖಾತೆ ತೆರೆಯದೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಒಂದೆಡೆ ವಿಕೆಟ್ ಉರುಳುತ್ತಿದ್ದರು ಕೊಂಚ ಪ್ರತಿರೋಧ ತೋರಿದ ವಿರಾಟ್ ಕೊಹ್ಲಿ ತಂಡದ ಪರ ಅತ್ಯಧಿಕ ರನ್ ಅಂದರೆ 22 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನು ಕೆಎಸ್ ಭರತ್ 17 ರನ್ಗಳಿಗೆ ಸುಸ್ತಾದರೆ, ಅಶ್ವಿನ್ 3 ರನ್ ಬಾರಿಸಿದರು. ಅಂತಿಮವಾಗಿ 2 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿ, ಸ್ಫೋಟಕ ಆಟಕ್ಕೆ ಮುಂದಾಗಿದ್ದ ಉಮೇಶ್ ಯಾದವ್ ಕೂಡ 17 ರನ್ಗೆ ಎಲ್ಬಿ ಬಲೆಗೆ ಬಿದ್ದರು. ಅಂತಿಮವಾಗಿ ರನ್ಔಟ್ ಆಗುವ ಮೂಲಕ ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Wed, 1 March 23
