
India vs Australia 3rd Test: ಇಂದೋರ್ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ (IND vs AUS) ನಡುವಣ 3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ನಾಯಕನ ನಿರೀಕ್ಷೆಯು 6ನೇ ಓವರ್ನಲ್ಲೇ ಅಂತ್ಯವಾಗಿತ್ತು. ಕೇವಲ 12 ರನ್ಗಳಿಸಿ ರೋಹಿತ್ ಶರ್ಮಾ ಮೊದಲಿಗರಾಗಿ ಹೊರನಡೆದರೆ, ಇದರ ಬೆನ್ನಲ್ಲೇ ಶುಭ್ಮನ್ ಗಿಲ್ (21) ಕೂಡ ಹೆಜ್ಜೆ ಹಾಕಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಚೇತೇಶ್ವರ ಪೂಜಾರ 1 ರನ್ಗಳಿಸಿ ನಾಥನ್ ಲಿಯಾನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಇದರ ನಡುವೆ ವಿರಾಟ್ ಕೊಹ್ಲಿ 52 ಎಸೆತಗಳನ್ನು ಎದುರಿಸಿ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ಮಾಡಿದರೂ, ಮರ್ಫಿ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ 22 ರನ್ಗಳೊಂದಿಗೆ ಹೊರನಡೆಯಬೇಕಾಯಿತು. ಆ ಬಳಿಕ ಬಂದ ರವೀಂದ್ರ ಜಡೇಜಾ (4), ಶ್ರೇಯಸ್ ಅಯ್ಯರ್ (0) ಕೂಡ ಹೋದ ವೇಗದಲ್ಲೇ ಪೆವಿಲಿಯನ್ಗೆ ಹಿಂತಿರುಗಿದ್ದರು.
ಇನ್ನು ಶ್ರೀಕರ್ ಭರತ್ 17 ರನ್ಗಳಿಸಿದರೆ, ಅಶ್ವಿನ್ 3 ರನ್ ಬಾರಿಸಿ ಔಟಾದರು. ಹಾಗೆಯೇ ಸಿರಾಜ್ ರನೌಟ್ ಆದರೆ, ಅಕ್ಷರ್ ಪಟೇಲ್ 12 ರನ್ಗಳಿಸಿ ಔಟಾಗದೆ ಉಳಿದರು. ಇದರ ನಡುವೆ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಉಮೇಶ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.
ಟೀಮ್ ಇಂಡಿಯಾ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಉಮೇಶ್ ಯಾದವ್ ಟಾಡ್ ಮರ್ಫಿ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ಗಳನ್ನು ಸಿಡಿಸಿದರು. ಅತ್ತ ಉಮೇಶ್ ಬ್ಯಾಟ್ನಿಂದ ಭರ್ಜರಿ ಸಿಕ್ಸ್ ಮೂಡಿ ಬರುತ್ತಿದ್ದಂತೆ ಇತ್ತ ವಿರಾಟ್ ಕೊಹ್ಲಿ ಡಗೌಟ್ನಲ್ಲಿ ಸಂಭ್ರಮಿಸುತ್ತಿರುವುದು ಕಂಡು ಬಂತು. ಇದೇ ವೇಳೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಚಿಂತಿತರಾದರು.
ಏಕೆಂದರೆ ಅಂತಿಮ ಹಂತದಲ್ಲಿ ಒಂದೆಡೆ ಅಕ್ಷರ್ ಪಟೇಲ್ ಕ್ರೀಸ್ನಲ್ಲಿದ್ದರೂ ಉಮೇಶ್ ಯಾದವ್ ಬಿರುಸಿನ ಬ್ಯಾಟಿಂಗ್ಗೆ ಮುಂದಾಗಿರುವುದು ದ್ರಾವಿಡ್ ಅವರ ಚಿಂತೆಗೆ ಕಾರಣವಾಗಿತ್ತು. ಆದರೆ ಯಾದವ್ ಭರ್ಜರಿ ಸಿಕ್ಸ್ ಸಿಡಿಸುತ್ತಿದ್ದಂತೆ ಕಿಂಗ್ ಕೊಹ್ಲಿ ಭರ್ಜರಿಯಾಗಿ ಸಂಭ್ರಮಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ವಿರಾಟ್ ಕೊಹ್ಲಿಗೆ ಚೆಲ್ಲಾಟವಾದರೆ, ದ್ರಾವಿಡ್ಗೆ ಪ್ರಾಣಸಂಕಟ ಎಂಬ ಟ್ಯಾಗ್ಲೈನ್ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
— javed ansari (@javedan00643948) March 1, 2023
ಇನ್ನು ರಾಹುಲ್ ದ್ರಾವಿಡ್ ಅವರ ನಿರೀಕ್ಷೆಯಂತೆ ಉಮೇಶ್ ಯಾದವ್ 2 ಸಿಕ್ಸ್ಗಳನ್ನು ಬಾರಿಸಿದ ಬಳಿಕ 13 ಎಸೆತಗಳಲ್ಲಿ 17 ರನ್ಗಳಿಸಿ ಔಟಾದರು. ಅಲ್ಲದೆ ಟೀಮ್ ಇಂಡಿಯಾ 109 ರನ್ಗೆ ಆಲೌಟ್ ಆಯಿತು. ಅತ್ತ 12 ರನ್ಗಳಿಸಿ ಕ್ರೀಸ್ ಕಚ್ಚಿ ನಿಂತಿದ್ದ ಅಕ್ಷರ್ ಪಟೇಲ್ ಅಜೇಯರಾಗಿ ಉಳಿದರು.
ಟೀಮ್ ಇಂಡಿಯಾ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಶುಭ್ಮನ್ ಗಿಲ್ , ಚೇತೇಶ್ವರ ಪೂಜಾರ , ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ , ರವೀಂದ್ರ ಜಡೇಜಾ , ಶ್ರೀಕರ್ ಭರತ್ ( ವಿಕೆಟ್ ಕೀಪರ್ ) , ಅಕ್ಷರ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಉಮೇಶ್ ಯಾದವ್ , ಮೊಹಮ್ಮದ್ ಸಿರಾಜ್
ಇದನ್ನೂ ಓದಿ: Ravindra Jadeja: 500 ವಿಕೆಟ್ ಕಬಳಿಸಿ ಮತ್ತೊಂದು ದಾಖಲೆ ಬರೆದ ರವೀಂದ್ರ ಜಡೇಜಾ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ , ಟ್ರಾವಿಸ್ ಹೆಡ್ , ಮಾರ್ನಸ್ ಲ್ಯಾಬುಶೇನ್ , ಸ್ಟೀವ್ ಸ್ಮಿತ್ (ನಾಯಕ) , ಪೀಟರ್ ಹ್ಯಾಂಡ್ಸ್ಕ್ಯಾಂಬ್ , ಕ್ಯಾಮರೋನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಟಾಡ್ ಮರ್ಫಿ , ಮ್ಯಾಥ್ಯೂ ಕುಹ್ನೆಮನ್.