IND vs AUS: ರಾಹುಲ್ಗೆ ಒಂದೇ ಓವರ್‌ನಲ್ಲಿ ಎರಡೆರಡು ಜೀವದಾನ! ವಿಡಿಯೋ ನೋಡಿ
KL Rahul: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಜೈಸ್ವಾಲ್ ಶೂನ್ಯಕ್ಕೆ ಔಟ್ ಆದರು. ಆದರೆ ಗಿಲ್ ಮತ್ತು ರಾಹುಲ್ ಅವರಿಂದ ತಂಡಕ್ಕೆ ಅರ್ಧಶತಕದ ಜೊತೆಯಾಟ ಸಿಕ್ಕಿತು. ಈ ವೇಳೆ ರಾಹುಲ್ಗೆ ಎರಡು ಬಾರಿ ಜೀವದಾನ ಸಿಕ್ಕಿತು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಅಡಿಲೇಡ್‌ನಲ್ಲಿ ಇಂದಿನಿಂದ ಆರಂಭವಾಗಿದೆ. ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದು ತಂಡಕ್ಕೆ ಆರಂಭಿಕ ಆಘಾತ ನೀಡಿತು. ಆದರೆ ಆ ಬಳಿಕ ಬಂದ ಶುಭ್ಮನ್ ಗಿಲ್ ಉತ್ತಮವಾಗಿ ಬ್ಯಾಟ್ ಬೀಸಿ ಬೌಂಡರಿ ಬಾರಿಸುವ ಮೂಲಕ ತಂಡದ ಖಾತೆ ತೆರೆದರು. ನಂತರದ 6 ಓವರ್ಗಳಲ್ಲಿ ರಾಹುಲ್ ಹಾಗೂ ಗಿಲ್ ನಡುವೆ ತಾಳ್ಮೆಯ ಜೊತೆಯಾಟ ಕಂಡುಬಂತು. ಆದರೆ 8ನೇ ಓವರ್‌ನಲ್ಲಿ ಟೀಂ ಇಂಡಿಯಾಕ್ಕೆ ಎರಡು ಬ್ಯಾಕ್ ಟು ಬ್ಯಾಕ್ ಆಘಾತ ಎದುರಾಗಿತ್ತು. ಆದರೆ ಆಸೀಸ್ ಆಟಗಾರರು ಮಾಡಿದ ಎಡವಟ್ಟು ಟೀಂ ಇಂಡಿಯಾ ಪಾಳವನ್ನು ನಿಟ್ಟುಸಿರು ಬಿಡುವಂತೆ ಮಾಡಿತು.
ರಾಹುಲ್ಗೆ 2 ಜೀವದಾನ
ರಾಹುಲ್ ಹಾಗೂ ಗಿಲ್ ಅವರ ಜೊತೆಯಾಟ ನಿಧಾನವಾಗಿ ಬೆಳೆಯುತ್ತಿರುವುದನ್ನು ಗಮನಿಸಿದ ಆಸೀಸ್ ನಾಯಕ ಕಮಿನ್ಸ್ ಬೌಲಿಂಗ್ನಲ್ಲಿ ಬದಲಾವಣೆ ಮಾಡಿ ಸ್ಕಾಟ್ ಬೋಲ್ಯಾಂಡ್ರನ್ನು ದಾಳಿಗಿಳಿಸಿದರು. ಬೋಲ್ಯಾಂಡ್ ಎಸೆದ ಈ ಎಂಟನೇ ಓವರ್‌ನಲ್ಲಿ ಕೆಎಲ್ ರಾಹುಲ್ಗೆ ಎರಡು ಎಸೆತಗಳಲ್ಲಿ ಎರಡು ಜೀವದಾನ ಸಿಕ್ಕಿತು. ಈ ಓವರ್‌ನ ಮೊದಲ ಎಸೆತದಲ್ಲೇ ರಾಹುಲ್ ವಿಕೆಟ್‌ಕೀಪರ್ ಕೈಗೆ ಕ್ಯಾಚ್ ನೀಡಿದ್ದರು. ಆಸೀಸ್ ಆಟಗಾರರು ವಿಕೆಟ್ ಸಿಕ್ಕ ಖುಷಿಯಲ್ಲಿದ್ದರು. ಇತ್ತ ರಾಹುಲ್ ಕೂಡ ಪೆವಿಲಿಯನತ್ತ ಹೆಜ್ಜೆ ಹಾಕಿದರೆ, ಅತ್ತ ವಿರಾಟ್ ಕೊಹ್ಲಿ ಕೂಡ ಡ್ರೆಸ್ಸಿಂಗ್ ರೂಮ್‌ನಿಂದ ಕ್ರೀಸ್ನತ್ತ ಹೆಜ್ಜೆ ಹಾಕಿದ್ದರು. ಆಗ ಮೈದಾನದಲ್ಲಿದ್ದ ಅಂಪೈರ್ ಏಕಾಏಕಿ ಇಬ್ಬರನ್ನೂ ತಡೆದು ನೋ ಬಾಲ್ ಎಂದು ತೀರ್ಪು ನೀಡಿದರು.
ಆಗ ರಾಹುಲ್ಗೆ ಖಾತೆ ತೆರೆಯಲೂ ಸಾಧ್ಯವಾಗಿರಲಿಲ್ಲ. ಅಚ್ಚರಿ ಎಂದರೆ ರಿವ್ಯೂವ್ನಲ್ಲಿ ನೋಡಿದಾಗ ಚೆಂಡು ಬ್ಯಾಟ್ಗೆ ತಾಗಿಲ್ಲ ಎಂಬುದು ಸ್ನೀಕೋಮೀಟರ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ರಾಹುಲ್ ಮಾತ್ರ ಡಿಆರ್ಎಸ್ ತೆಗೆದುಕೊಳ್ಳದೆ ಪೆವಿಲಿಯನತ್ತ ನಡೆಯ ತೊಡಗಿದ್ದರು. ಆ ಚೆಂಡು ನೋ ಬಾಲ್ ಆಗಿರದಿದ್ದರೆ ರಾಹುಲ್, ಉಚಿತವಾಗಿ ಆಸೀಸ್ಗೆ ವಿಕೆಟ್ ನೀಡಿದಂತ್ತಾಗುತ್ತಿತ್ತು.
'KL'ucky Rahul! 😮💨#ScottBoland’s dramatic start to the #PinkBallTest: No-ball dismissal of #KLRahul on the first delivery and a dropped catch on the fifth ball! 🏏🎭
Will he make it BIG now? 👀#AUSvINDOnStar 2nd Test 👉 LIVE NOW on Star Sports! #AUSvIND | #ToughestRivalry pic.twitter.com/dCYLDKv2Pd
— Star Sports (@StarSportsIndia) December 6, 2024
ಕ್ಯಾಚ್ ಬಿಟ್ಟ ಖವಾಜಾ
ಅದೇ ಓವರ್‌ನಲ್ಲಿ ರಾಹುಲ್ಗೆ ಎರಡನೇ ಬಾರಿಗೆ ಜೀವದಾನ ಸಿಕ್ಕಿತು. ಎಂಟನೇ ಓವರ್‌ನ ಐದನೇ ಎಸೆತದಲ್ಲಿ ಚೆಂಡು ಮತ್ತೊಮ್ಮೆ ರಾಹುಲ್ ಅವರ ಬ್ಯಾಟ್‌ನ ಅಂಚನ್ನು ತಾಗಿ ವಿಕೆಟ್ ಹಿಂದೆ ಸ್ಲಿಪ್‌ನಲ್ಲಿ ನಿಂತಿದ್ದ ಉಸ್ಮಾನ್ ಖವಾಜಾ ಕಡೆಗೆ ಹೋಯಿತು. ಖವಾಜಾ ಕೂಡ ಬಲಕ್ಕೆ ಡೈವ್ ಮಾಡುವ ಮೂಲಕ ಕ್ಯಾಚ್ ತೆಗೆದುಕೊಳ್ಳಲು ಪ್ರಯತ್ನಿಸಿದರು, ಆದರೆ ಚೆಂಡು ಅವರ ಕೈಯಿಂದ ಜಾರಿತು. ಈ ಮೂಲಕ ರಾಹುಲ್ ಐದು ಎಸೆತಗಳಲ್ಲಿ ಎರಡು ಜೀವದಾನ ಪಡೆದರು.
37 ರನ್ಗಳಿಗೆ ರಾಹುಲ್ ಔಟ್
ಶೂನ್ಯಕ್ಕೆ ಎರಡು ಜೀವದಾನ ಸಿಕ್ಕಿದ್ದನ್ನು ಬಿಗ್ ಇನ್ನಿಂಗ್ಸ್ ಆಗಿ ಬದಲಿಸಲು ರಾಹುಲ್ಗೆ ಸಾಧ್ಯವಾಗಲಿಲ್ಲ. 19ನೇ ಓವರ್‌ನ 4ನೇ ಎಸೆತದಲ್ಲಿ ರಾಹುಲ್, ಗಲ್ಲಿ ಫಿಲ್ಡರ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಆದಾಗ್ಯೂ ರಾಹುಲ್, ಗಿಲ್ ಜೊತೆಗೆ ಎರಡನೇ ವಿಕೆಟ್ಗೆ 69 ರನ್ಗಳ ಜೊತೆಯಾಟ ನೀಡಿದರು. ತಮ್ಮ ಇನ್ನಿಂಗ್ಸ್ನಲ್ಲಿ 64 ಎಸೆತಗಳನ್ನು ಎದುರಿಸಿದ ರಾಹುಲ್ 6 ಬೌಂಡರಿ ಸಹಿತ 37 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
