IND vs AUS: ‘ಅವರೇ ಹೇಳಬೇಕು’; ಶಮಿ ಆಗಮನದ ಬಗ್ಗೆ ರೋಹಿತ್ ಹೇಳಿದ್ದಿದು

|

Updated on: Dec 18, 2024 | 6:47 PM

IND vs AUS: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಮತ್ತೊಬ್ಬ ಅನುಭವಿ ವೇಗಿಯ ಕೊರತೆ ಸಾಕಷ್ಟು ಕಾಡುತ್ತಿದೆ. ಹೀಗಾಗಿ ಮೊಹಮ್ಮದ್ ಶಮಿ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಲಾಗುವುದು ಎಂಬ ವರದಿ ಇತ್ತು. ಆದರೆ ಈ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ ಅವರು ಎನ್‌ಸಿಎಯಿಂದ ಸ್ಪಷ್ಟ ಮಾಹಿತಿ ಬಂದ ನಂತರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

IND vs AUS: ‘ಅವರೇ ಹೇಳಬೇಕು’; ಶಮಿ ಆಗಮನದ ಬಗ್ಗೆ ರೋಹಿತ್ ಹೇಳಿದ್ದಿದು
ಮೊಹಮ್ಮದ್ ಶಮಿ, ರೋಹಿತ್ ಶರ್ಮಾ
Follow us on

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್‌ ವೈಫಲ್ಯವೇ ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ತಂಡದ ಯಾವೊಬ್ಬ ಬ್ಯಾಟರ್​ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಇದು ಆಡಳಿತ ಮಂಡಳಿಯ ನಿದ್ದೆಗೆಡಿಸಿದ್ದರೆ ಇನ್ನೊಂದೆಡೆ ತಂಡಕ್ಕೆ ಮತ್ತೊಬ್ಬ ಅನುಭವಿ ವೇಗಿಯ ಅನುಪಸ್ಥಿತಿ ಮೊದಲ ಟೆಸ್ಟ್​ನಿಂದಲೂ ಕಾಡುತ್ತಿದೆ. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾರನ್ನು ಬಿಟ್ಟರೆ ಉಳಿದವರಿಂದ ಸ್ಥಿರ ಪ್ರದರ್ಶನ ಕಂಡುಬರುತ್ತಿಲ್ಲ. ಬುಮ್ರಾ ಜೊತೆಗೆ ಮತ್ತೊಬ್ಬ ಅನುಭವಿಯಾಗಿ ಸಿರಾಜ್ ತಂಡದಲ್ಲಿ ಇದ್ದರಾದರೂ ಅವರು ಅವಶ್ಯಕ ಸಂದರ್ಭದಲ್ಲಿ ವಿಕೆಟ್ ಪಡೆಯುತ್ತಿಲ್ಲ. ಇದು ಬುಮ್ರಾ ಅವರ ಮೇಲೆ ಒತ್ತಡ ತರುತ್ತಿದೆ. ಹೀಗಾಗಿ ಬುಮ್ರಾಗೆ ಸಾಥ್ ನೀಡುವ ಮತ್ತೊಬ್ಬ ವೇಗಿ ಮೊಹಮ್ಮದ್ ಶಮಿಯನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳಬೇಕು ಎಂಬುದು ಅನುಭವಿಗಳ ಅಭಿಪ್ರಾಯವಾಗಿದೆ. ಇದೀಗ 3ನೇ ಟೆಸ್ಟ್ ಮುಗಿದ ಬಳಿಕ ಮಾತನಾಡಿರುವ ರೋಹಿತ್ ಶರ್ಮಾ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.

ಅವರೇ ಅಪ್‌ಡೇಟ್‌ ಕೊಡಬೇಕು

ಶಮಿ ಲಭ್ಯತೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ಶಮಿ ಅವರ ಸ್ಥಿತಿಯ ಬಗ್ಗೆ ಎನ್‌ಸಿಎ ಸ್ಪಷ್ಟ ಮಾಹಿತಿ ನೀಡುವವರೆಗೆ ಅವರನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳುವ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ. ಎನ್‌ಸಿಎಯಿಂದ ಯಾರಾದರೂ ಅವರ ಬಗ್ಗೆ ಮಾತನಾಡಬೇಕಾದ ಸಮಯ ಬಂದಿದೆ. ಅದು ನಮ್ಮ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ, ಅಲ್ಲಿ ಶಮಿ ಪುನರ್ವಸತಿಗೆ ಒಳಗಾಗಿದ್ದಾರೆ. ಹೀಗಾಗಿ ಎನ್​ಸಿಎಯಿಂದಲೇ ನಮಗೆ ಏನಾದರೂ ಅಪ್‌ಡೇಟ್‌ ಕೊಡಬೇಕು.

ಶಮಿ ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಆಡುತ್ತಿದ್ದಾರೆಂಬುದು ನನಗೆ ಗೊತ್ತು. ಆದರೆ ಅವರ ಮೊಣಕಾಲಿನಲ್ಲಿ ಸಮಸ್ಯೆ ಎಂದು ವರದಿಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಇಲ್ಲಿಗೆ ಕರೆಸಿಕೊಂಡು ಪಂದ್ಯದ ಮಧ್ಯದಲ್ಲಿ ತಂಡದಿಂದ ಹೊರಗೆ ಹೋಗುವುದನ್ನು ನೋಡಲು ನಾವು ಬಯಸುವುದಿಲ್ಲ. ಆದ್ದರಿಂದ ನಾವು ಅಂತಹ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಶಮಿ 100 ಪ್ರತಿಶತ ಫಿಟ್ ಆಗಿದ್ದಾರೆ ಎಂಬುದು ಖಚಿತವಾದ ಬಳಿಕಷ್ಟೇ ತಂಡದಲ್ಲಿ ಆಡಿಸುತ್ತೇವೆ ಎಂದಿದ್ದಾರೆ.

ಶಮಿ ಹೋಗುವುದು ಡೌಟ್

ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಶಮಿ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ವರದಿಯಾಗಿತ್ತು. ಆದರೆ ಶನಿವಾರದಿಂದ ಪ್ರಾರಂಭವಾಗುವ ವಿಜಯ್ ಹಜಾರೆ ಟ್ರೋಫಿಗೆ ಅವರನ್ನು ಬಂಗಾಳ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅಂದರೆ ಶಮಿ ಆಸ್ಟ್ರೇಲಿಯಾಕ್ಕೆ ಹೋಗುವುದಿಲ್ಲ ಎಂಬುದು ಸ್ಪಷ್ಟವಾದಂತ್ತಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Wed, 18 December 24