IND vs BAN: ರೋಚಕ ಪಂದ್ಯದಲ್ಲಿ ಬಾಂಗ್ಲಾ ಮಣಿಸಿದ ಟೀಂ ಇಂಡಿಯಾ..! ಸೇಮಿಸ್ ಹಾದಿ ಸುಗಮ
ICC Men T20 World Cup IND vs BAN Match Report: ಬುಧವಾರ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಮಳೆ ಪೀಡಿತ ಈ ರೋಚಕ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಐದು ರನ್‌ಗಳಿಂದ ಸೋಲಿಸಿತು.
ಬುಧವಾರ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಮಳೆ ಪೀಡಿತ ಈ ರೋಚಕ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು (india vs bangladesh) ಐದು ರನ್‌ಗಳಿಂದ ಸೋಲಿಸುವುದರೊಂದಿಗೆ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಟೀಂ ಇಂಡಿಯಾ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಉತ್ತರವಾಗಿ ಬಾಂಗ್ಲಾದೇಶ 145 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಪರ ಮತ್ತೊಮ್ಮೆ ವಿರಾಟ್ ಕೊಹ್ಲಿ ಬ್ಯಾಟ್ ಅಬ್ಬರಿಸಿತು. ಕಿಂಗ್ ಕೊಹ್ಲಿ ಈ ವಿಶ್ವಕಪ್‌ನಲ್ಲಿ ತಮ್ಮ ಮೂರನೇ ಅರ್ಧಶತಕ ಗಳಿಸಿದಲ್ಲದೆ 64 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರನ್ನು ಹೊರತುಪಡಿಸಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ತಮ್ಮ ಫಾರ್ಮ್‌ಗೆ ಮರಳಿದ್ದು, ಅವರೂ ಸಹ ಅರ್ಧಶತಕ ಬಾರಿಸಿದರು.
ಲಿಟನ್ ದಾಸ್ ಸ್ಫೋಟಕ ಬ್ಯಾಟಿಂಗ್
185 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡವು ಉತ್ತಮ ಆರಂಭವನ್ನು ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಲಿಟನ್ ದಾಸ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ ಇದುವರೆಗೂ ಬಾಂಗ್ಲಾದೇಶ ಪರ ಅದ್ಭುತ ಇನ್ನಿಂಗ್ಸ್ ಆಡಿದ್ದ ನಜ್ಮುಲ್ ಹಸನ್ ಶಾಂಟೊ ಮಾತ್ರ ಹೆಚ್ಚು ಅಬ್ಬರಿಸಲು ಆಗಲಿಲ್ಲ. ಶಾಂಟೊ ಎರಡಂಕಿ ದಾಟಲು ಸಾಧ್ಯವಾಗದ ಸಮಯದಲ್ಲಿ ಲಿಟನ್ ದಾಸ್ ಅರ್ಧಶತಕ ಸಿಡಿಸಿ ಮಿಂಚಿದರು. ಈ ನಡುವೆ ಬಾಂಗ್ಲಾ ಇನ್ನಿಂಗ್ಸ್ನ ಏಳು ಓವರ್‌ಗಳ ಆಟ ಮುಗಿದಾಗ ಮಳೆ ಬಂದಿದ್ದರಿಂದ ಪಂದ್ಯವನ್ನು ನಿಲ್ಲಿಸಲಾಯಿತು. ಈ ವೇಳೆ ದಾಸ್ 59 ರನ್ ಹಾಗೂ ಶಾಂಟೊ ಏಳು ರನ್ ಗಳಿಸಿದ್ದರು.
ಮತ್ತೆ ಪಂದ್ಯ ಆರಂಭವಾದಾಗ ಬಾಂಗ್ಲಾದೇಶಕ್ಕೆ 54 ಎಸೆತಗಳಲ್ಲಿ 85 ರನ್‌ಗಳ ಟಾರ್ಗೆಟ್ ನೀಡಲಾಯಿತು. ಬಂದ ಕೂಡಲೇ ರಾಹುಲ್ ಬಾಂಗ್ಲಾದೇಶಕ್ಕೆ ಹೊಡೆತ ನೀಡಿದರು. ತನ್ನ ಅದ್ಭುತ ಎಸೆತದ ಮೂಲಕ ದಾಸ್ ಅವರನ್ನು ರಾಹುಲ್ ರನ್ ಔಟ್ ಮಾಡಿದರು. ದಾಸ್ 27 ಎಸೆತಗಳಲ್ಲಿ 60 ರನ್ ಗಳಿಸಿ ರನೌಟ್ಗೆ ಬಲಿಯಾದರು. ಅವರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್ ಸಹ ಸೇರಿದ್ದವು.
ಆ ಬಳಿಕ ತತ್ತರಿಸಿದ ಬಾಂಗ್ಲಾ ತಂಡ
ದಾಸ್ ಔಟಾದ ಕೂಡಲೇ ಬಾಂಗ್ಲಾದೇಶದ ಇನ್ನಿಂಗ್ಸ್ ತತ್ತರಿಸಿತು. ಶಾಂಟೊ (21) ಅವರನ್ನು ಔಟ್ ಮಾಡುವ ಮೂಲಕ ಮೊಹಮ್ಮದ್ ಶಮಿ ಭಾರತಕ್ಕೆ ಎರಡನೇ ಪ್ರಗತಿ ನೀಡಿದರು. ಇದಾದ ಬಳಿಕ 12ನೇ ಓವರ್ ಎಸೆಯಲು ಬಂದ ಅರ್ಷದೀಪ್ ಎರಡು ವಿಕೆಟ್ ಪಡೆದು ಬಾಂಗ್ಲಾದೇಶವನ್ನು ಬ್ಯಾಕ್‌ಫೂಟ್‌ಗೆ ತಳ್ಳಿದರು. ಈ ಓವರ್‌ನಲ್ಲಿ ಅವರು ಅಫೀಫ್ ಹುಸೇನ್ (3) ಮತ್ತು ನಂತರ ನಾಯಕ ಶಕೀಬ್ ಅಲ್ ಹಸನ್ (13) ವಿಕೆಟ್ ಪಡೆದರು. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಯಾಸಿಲ್ ಅಲಿ (1) ಮತ್ತು ಮೊಸದ್ದೆಕ್ ಹೊಸೇನ್ (6) ಅವರನ್ನು ಪೆವಿಲಿಯನ್ಗೆ ಕಳುಹಿಸಿ ಭಾರತದ ಗೆಲುವನ್ನು ನಿರ್ಧರಿಸಿದರು.
ರೋಹಿತ್ ವಿಫಲ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪವರ್‌ಪ್ಲೇಯಲ್ಲಿ ಹೆಚ್ಚು ರನ್ ಗಳಿಸಲು ಬಾಂಗ್ಲಾದೇಶದ ಬೌಲರ್‌ಗಳು ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಲಿಲ್ಲ. ಭಾರತ ಮೊದಲ ಆರು ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿತು. ಎಂಟು ಎಸೆತಗಳನ್ನು ಎದುರಿಸಿದ ರೋಹಿತ್ ಕೇವಲ ಎರಡು ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು.
ರಾಹುಲ್- ಕೊಹ್ಲಿ ಜೊತೆಯಾಟ
ಆದರೆ ಈ ಬಳಿಕ ಜೊತೆಯಾದ ರಾಹುಲ್ ಮತ್ತು ಕೊಹ್ಲಿ ತಂಡವನ್ನು ಕೆಟ್ಟ ಆರಂಭದಿಂದ ಹೊರತಂದರು. ಇವರಿಬ್ಬರು ಎರಡನೇ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ನೀಡಿದರು. ಈ ವಿಶ್ವಕಪ್‌ನಲ್ಲಿ ತಮ್ಮ ಮೊದಲ ಅರ್ಧಶತಕ ಗಳಿಸಿದ ರಾಹುಲ್, ಅನಂತರ ತಮ್ಮ ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 32 ಎಸೆತಗಳನ್ನು ಎದುರಿಸಿದ ರಾಹುಲ್ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಸೂರ್ಯಕುಮಾರ್ ಯಾದವ್ ಕೂಡ ಚುರುಕಿನ ಇನಿಂಗ್ಸ್ ಆಡಿ, ಕೇವಲ 16 ಎಸೆತಗಳಲ್ಲಿ ನಾಲ್ಕು ಬೌಂಡರಿ ಸಹಿತ 30 ರನ್ ಗಳಿಸಿದರು. ಆದರೆ ಒಂದು ಬದಿಯಲ್ಲಿ ಭಾರತದ ಸ್ಕೋರ್ ಬೋರ್ಡ್ ಹೆಚ್ಚಿಸಲು ಆರಂಭಸಿದ ಕೊಹ್ಲಿ ಅಜೇಯರಾಗಿ ಉಳಿದು 44 ಎಸೆತಗಳನ್ನು ಎದುರಿಸಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 64 ರನ್ ಬಾರಿಸಿದರು. ಅವರೊಂದಿಗೆ ರವಿಚಂದ್ರನ್ ಅಶ್ವಿನ್ ಕೂಡ ಆರು ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 13 ರನ್ ಗಳಿಸಿ ಅಜೇಯರಾಗಿ ಉಳಿದರು.
ಬಾಂಗ್ಲಾದೇಶ ಪರ ಮಹಮೂದ್ ಮೂರು ವಿಕೆಟ್ ಪಡೆದರೆ, ನಾಯಕ ಶಕೀಬ್ ಎರಡು ವಿಕೆಟ್ ಪಡೆದರು. ಇವರಿಬ್ಬರನ್ನು ಬಿಟ್ಟರೆ ಬಾಂಗ್ಲಾದೇಶದ ಉಳಿದ ಮೂವರು ಬೌಲರ್‌ಗಳಿಗೆ ವಿಕೆಟ್ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
Published On - 5:46 pm, Wed, 2 November 22