Rishabh Pant Injury: ರಿಷಭ್ ಪಂತ್ ಫಿಟ್ ಆಗಿಲ್ಲದಿದ್ದರೂ ಧ್ರುವ್ ಜೂರೆಲ್ ಬ್ಯಾಟಿಂಗ್ ಮಾಡುವಂತಿಲ್ಲ: ಐಸಿಸಿ ನಿಯಮ ಇಲ್ಲಿದೆ ನೋಡಿ
India vs England 3rd Test Day 2: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಇನ್ನಿಂಗ್ಸ್‌ನ 34 ನೇ ಓವರ್ ಬೌಲ್ ಮಾಡಿದ ಸಂದರ್ಭ ರಿಷಭ್ ಪಂತ್ ಇಂಜುರಿಗೆ ತುತ್ತಾದರು. ಗಾಯದ ಪ್ರಮಾಣ ದೊಡ್ಡದಿದ್ದ ಕಾರಣ ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇವರ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡಲು ಮೈದಾನಕ್ಕೆ ಬಂದರು. ಆದರೆ, ಇವರು ಪಂತ್ ಬದಲು ಬ್ಯಾಟಿಂಗ್ ಮಾಡಲು ಅವಕಾಶ ಇದೆಯೇ?.

ಬೆಂಗಳೂರು (ಜು. 11): ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಇಂಜುರಿಗೆ ತುತ್ತಾದರು. ಜಸ್ಪ್ರೀತ್ ಬುಮ್ರಾ ಅವರ ಚೆಂಡನ್ನು ಲೆಗ್ ಸೈಡ್‌ನಲ್ಲಿ ಹಿಡಿಯಲು ಪ್ರಯತ್ನಿಸುವಾಗ ಅವರ ಬೆರಳಿಗೆ ಗಂಭೀರ ಗಾಯವಾಯಿತು. ಆ ಬಳಿಕ ಪಂತ್ ಕೀಪಿಂಗ್ ಮಾಡಲು ಸಾಕಷ್ಟು ತೊಂದರೆ ಅನುಭವಿಸಿದರು. ಹೀಗಾಗಿ 34 ನೇ ಓವರ್ ನಂತರ ಮೈದಾನ ತೊರೆದ ಪಂತ್, ಅವರ ಸ್ಥಾನದಲ್ಲಿ, ಧ್ರುವ್ ಜುರೆಲ್ 49 ಓವರ್‌ಗಳಿಗೆ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಪಂತ್ ಪಂದ್ಯದಲ್ಲಿ ಮುಂದುವರೆಯುತ್ತಾರೊ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪಂತ್ ಬದಲಿಗೆ ಜುರೆಲ್ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತದೆಯೇ?
2019 ರವರೆಗೆ ಕ್ರಿಕೆಟ್‌ನಲ್ಲಿ ಬದಲಿ ಆಟಗಾರನ ನಿಯಮವಿರಲಿಲ್ಲ. 2019 ರಲ್ಲಿ, ಐಸಿಸಿ ಕನ್ಕ್ಯುಶನ್ ಬದಲಿ ನಿಯಮವನ್ನು ತಂದಿತು. ಇದರಲ್ಲಿ, ಒಬ್ಬ ಆಟಗಾರನ ತಲೆಗೆ ಗಾಯವಾದರೆ, ಅವನ ಸ್ಥಾನದಲ್ಲಿ ಮತ್ತೊಬ್ಬ ಆಟಗಾರನನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳಬಹುದು. ತಂಡಕ್ಕೆ ಬರುವ ಆಟಗಾರನ ಪಾತ್ರವು ಆಟಗಾರ ಹೊರಹೋಗುವಂತೆಯೇ ಇರಬೇಕು. ತಂಡಗಳು ಕೋವಿಡ್ ಬದಲಿ ಆಟಗಾರನನ್ನು ಸಹ ಪಡೆಯಬಹುದು. ಆದಾಗ್ಯೂ, ರಿಷಭ್ ಪಂತ್ ಅವರ ತಲೆಗೆ ಗಾಯವಾಗಲಿ ಅಥವಾ ಕೋವಿಡ್ ಆಗಲಿ ಇಲ್ಲ. ಅವರ ಬೆರಳುಗಳಲ್ಲಿ ಗಾಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಧ್ರುವ್ ಜುರೆಲ್ ಅವರ ಸ್ಥಾನದಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಭಾರತೀಯ ತಂಡಕ್ಕೆ ಕೇವಲ 10 ಆಟಗಾರರು ಮಾತ್ರ ಬ್ಯಾಟಿಂಗ್ ಮಾಡಬಹುದು.
ಐಸಿಸಿಯ ಸೆಕ್ಷನ್ 24.1.2 ರ ಪ್ರಕಾರ, ‘ಯಾವುದೇ ಬದಲಿ ಆಟಗಾರ ಬೌಲಿಂಗ್ ಮಾಡಲು ಅಥವಾ ಬ್ಯಾಟಿಂಗ್ ಮಾಡಲು ಅಥವಾ ತಂಡವನ್ನು ಮುನ್ನಡೆಸಲು ಸಾಧ್ಯವಿಲ್ಲ ಮತ್ತು ಅಂಪೈರ್‌ಗಳ ಅನುಮತಿಯೊಂದಿಗೆ ಮಾತ್ರ ವಿಕೆಟ್ ಕೀಪರ್ ಪಾತ್ರವನ್ನು ನಿರ್ವಹಿಸಬಹುದು.’ 2017 ರವರೆಗೆ ಬದಲಿ ವಿಕೆಟ್ ಕೀಪರ್ ನಿಯಮವಿರಲಿಲ್ಲ. ನಂತರ ಎಂಸಿಸಿ ಗಂಭೀರ ಗಾಯ ಅಥವಾ ಅನಾರೋಗ್ಯದ ಸಂದರ್ಭದಲ್ಲಿ ಬದಲಿ ವಿಕೆಟ್ ಕೀಪರ್ ನಿಯಮವನ್ನು ತಂದಿತು ಆದರೆ ಇದಕ್ಕೆ ಅಂಪೈರ್ ಅನುಮತಿ ಅಗತ್ಯ.
IND vs ENG: ಇಂಗ್ಲೆಂಡ್ ಬ್ಯಾಟರ್ಗೆ ಓಪನ್ ಚಾಲೆಂಜ್ ಮಾಡಿದ ಜಡೇಜಾ: ಹೆದರಿದ ಜೋ ರೂಟ್: ವಿಡಿಯೋ
ಹೊಸ ನಿಯಮದ ಪ್ರಯೋಗ ಅಕ್ಟೋಬರ್‌ನಿಂದ ಪ್ರಾರಂಭವಾಗುತ್ತದೆ
ಗಂಭೀರವಾಗಿ ಗಾಯಗೊಂಡ ಆಟಗಾರರನ್ನು ಬದಲಾಯಿಸುವ ನಿಯಮವನ್ನು ತರುವ ಬಗ್ಗೆ ಐಸಿಸಿ ಈಗ ಕೆಲಸ ಮಾಡುತ್ತಿದೆ. ಐಸಿಸಿ ಅಕ್ಟೋಬರ್‌ನಿಂದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 6 ತಿಂಗಳ ಪ್ರಾಯೋಗಿಕ ಅವಧಿಯನ್ನು ಪ್ರಾರಂಭಿಸಲಿದೆ. ಇದರ ಫಲಿತಾಂಶವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದನ್ನು ಜಾರಿಗೆ ತರಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಪಂತ್ ಉಪಸ್ಥಿತಿ ಭಾರತಕ್ಕೆ ಮುಖ್ಯ:
ಈ ಸರಣಿಯಲ್ಲಿ ಪಂತ್ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಅವರು ಎರಡು ಶತಕ ಮತ್ತು ಒಂದು ಅರ್ಧಶತಕ ಗಳಿಸಿದ್ದಾರೆ. ಹೀಗೆ ಭರ್ಜರಿ ಫಾರ್ಮ್ನಲ್ಲಿರುವ ಪಂತ್ ಉಪಸ್ಥಿತಿ ತಂಡಕ್ಕೆ ಅಗತ್ಯವಿದೆ. ಆದರೆ, ಬಿಸಿಸಿಐ ಪಂತ್ ಗಾಯದ ಬಗ್ಗೆ ಮಾಹಿತಿ ನೀಡಿ, ‘‘ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಅವರ ಎಡಗೈ ತೋರುಬೆರಳಿಗೆ ಚೆಂಡು ತಗುಲಿದೆ. ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಧ್ರುವ್ ಜುರೆಲ್ ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ’’ ಎಂದು ಹೇಳಿದೆ.
ಇನ್ನು ಮೊದಲ ದಿನದಾಟ ಮುಗಿದ ನಂತರ, ಟೀಮ್ ಇಂಡಿಯಾದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಪತ್ರಿಕಾಗೋಷ್ಠಿಗೆ ಬಂದಾಗ ಅವರ ಬಳಿ ಪಂತ್ ಗಾಯದ ಬಗ್ಗೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, ‘‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಮೈದಾನದಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ ಮತ್ತು ಅವರ ಇಂಜುರಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ನಾಳೆ ಬೆಳಿಗ್ಗೆ (ಇಂದು) ವೇಳೆಗೆ ನಮಗೆ ಹೆಚ್ಚಿನ ಮಾಹಿತಿ ಸಿಗಬಹುದು’’ ಎಂದು ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Fri, 11 July 25