ಸಿರಾಜ್ನ ಬಿಟ್ಟು ಉಳಿದವರನ್ನು ಹೊಗಳಿದ ಜಯ್ ಶಾ: ಅಭಿಮಾನಿಗಳ ಆಕ್ರೋಶ
India vs England 2nd Test: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 7 ವಿಕೆಟ್ ಕಬಳಿಸಿ ಮಿಂಚಿದ್ದರು. ಅದರಲ್ಲೂ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ 180 ರನ್ಗಳ ಮುನ್ನಡೆ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಎಡ್ಜ್ಬಾಸ್ಟನ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಐತಿಹಾಸಿಕ ಗೆಲುವಿನ ರೂವಾರಿಗಳೆಂದರೆ ಶುಭ್ಮನ್ ಗಿಲ್, ಆಕಾಶ್ ದೀಪ್ ಹಾಗೂ ಮೊಹಮ್ಮದ್ ಸಿರಾಜ್. ಗಿಲ್ ಬ್ಯಾಟಿಂಗ್ ಮೂಲಕ ಭರ್ಜರಿ ಪ್ರದರ್ಶನ ನೀಡಿದರೆ, ಆಕಾಶ್ ದೀಪ್ ಹಾಗೂ ಸಿರಾಜ್ ಬೌಲಿಂಗ್ನಲ್ಲಿ ಪರಾಕ್ರಮ ಮರೆದಿದ್ದರು. ಈ ಮೂಲಕ ಟೀಮ್ ಇಂಡಿಯಾಗೆ 336 ರನ್ಗಳ ಅಮೋಘ ಗೆಲುವು ತಂದು ಕೊಟ್ಟರು.
ಈ ಐತಿಹಾಸಿಕ ವಿಜಯದ ಬೆನ್ನಲ್ಲೇ ಐಸಿಸಿ ಅಧ್ಯಕ್ಷ ಜಯ್ ಶಾ ಟೀಮ್ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಈ ವೇಳೆ ಅವರು ಮೊಹಮ್ಮದ್ ಸಿರಾಜ್ ಅವರ ಹೆಸರನ್ನು ಪ್ರಸ್ತಾಪಿಸದೇ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯ ಮೂಲಕ ಅಭಿನಂದನೆ ಸಲ್ಲಿಸಿದ ಜಯ್ ಶಾ ಅವರು, ಶುಭ್ಮನ್ ಗಿಲ್, ರಿಷಭ್ ಪಂತ್, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜಾ ಅವರ ಪ್ರದರ್ಶನವನ್ನು ಮಾತ್ರ ಹಾಡಿಹೊಗಳಿದ್ದಾರೆ.
ಅತ್ಯುತ್ತಮ ಟೆಸ್ಟ್ ಪಂದ್ಯ. ಈ ಪಂದ್ಯದ ಮೂಲಕ ನೀವು ಭಾರತೀಯ ಕ್ರಿಕೆಟ್ನ ಆಳ ಮತ್ತು ಸ್ಥಿರತೆಯನ್ನು ಪ್ರದರ್ಶಿಸಿದ್ದೀರಿ. ಶುಭ್ಮನ್ ಗಿಲ್ ಅವರಿಂದ 269 ಮತ್ತು 161 ರನ್ಗಳ ಗುಣಮಟ್ಟದ ಇನ್ನಿಂಗ್ಸ್ ಮೂಡಿಬಂದರೆ, ಆಕಾಶ್‌ದೀಪ್ ಅವರ 10 ವಿಕೆಟ್‌ಗಳ ಗೊಂಚಲು ಅದ್ಭುತ ಪ್ರದರ್ಶನವನ್ನು ಎತ್ತಿ ತೋರಿಸಿತು. ಇನ್ನು ರವೀಂದ್ರ ಜಡೇಜಾ ಹಾಗೂ ರಿಷಭ್ ಪಂತ್ ಕೂಡ ತಂಡ ಗೆಲುವಿನ ಕೊಡುಗೆ ನೀಡೀದ್ದೀರಿ. ಲಾರ್ಡ್ಸ್‌ನಲ್ಲಿ ನಡೆಯಲಿರುವ ಮುಂದಿನ ಸ್ಪರ್ಧೆಯನ್ನು ಎದುರು ನೋಡುತ್ತಿದ್ದೇನೆ ಎಂದು ಜಯ್ ಶಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಭಿಮಾನಿಗಳ ಆಕ್ರೋಶ:
ಜಯ್ ಶಾ ಅವರ ಈ ಪೋಸ್ಟ್ ನೋಡಿ ಇದೀಗ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ ಕಬಳಿಸಿ ಪಂದ್ಯವನ್ನು ಭಾರತದತ್ತ ವಾಲುವಂತೆ ಮಾಡಿದ ಸಿರಾಜ್ ಅವರ ಹೆಸರನ್ನು ಯಾಕೆ ಉಲ್ಲೇಖಿಸಿಲ್ಲ ಎಂದು ಅನೇಕರು ಪ್ರಶ್ನಿಸಿದ್ದಾರೆ.
ಇಲ್ಲಿ ರವೀಂದ್ರ ಜಡೇಜಾ ಹಾಗೂ ರಿಷಭ್ ಪಂತ್ಗಿಂತ ಮೊಹಮ್ಮದ್ ಸಿರಾಜ್ ಅವರ ಕೊಡುಗೆ ಅಪಾರ. ಅವರು ಈ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಕಬಳಿಸಿ ಮಿಂಚಿದ್ದರು. ಅದರಲ್ಲೂ ಮೊದಲ ಇನಿಂಗ್ಸ್ನಲ್ಲಿ ಭಾರತ ತಂಡ 180 ರನ್ಗಳ ಮುನ್ನಡೆ ಪಡೆಯಲು ಸಿರಾಜ್ ಕಾರಣ. ಇದಾಗ್ಯೂ ನೀವು ಟೀಮ್ ಇಂಡಿಯಾ ವೇಗಿಯ ಹೆಸರನ್ನು ಪ್ರಸ್ತಾಪಿಸದಿರುವುದು ನಿಜಕ್ಕೂ ಆಶ್ಚರ್ಯ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
Jadeja tak ka naam le liya par Siraj ka naam la liya gaya🥴
— Avishek Goyal (@AG_knocks) July 6, 2025
Siraj be like: Mujhe kyu chhoda??
— Rohit Jain (@rohitjain2021) July 7, 2025
Someone took 7-127
— Asaur 🚸 (@AsaurChaudhury) July 7, 2025
ಇದೀಗ ಜಯ್ ಶಾ ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳು ಈ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಐಸಿಸಿ ಅಧ್ಯಕ್ಷರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
