Sanju Samson: ಸಂಜು ಸ್ಯಾಮ್ಸನ್ಗೆ ಇಷ್ಟೊಂದು ಫ್ಯಾನ್ಸ್ ಇದ್ದಾರಾ? ಹಾರ್ದಿಕ್ ಪಾಂಡ್ಯ ಶಾಕ್..!
IND vs IRE: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನು ಒಳಗೊಂಡ ಮತ್ತೊಂದು ತಂಡ ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆ ತಂಡದಲ್ಲಿರುವ ಬಹುತೇಕ ಆಟಗಾರರು ಟೀಮ್ ಇಂಡಿಯಾ ಟಿ20 ತಂಡದ ಖಾಯಂ ಸದಸ್ಯರು ಎಂಬುದು ವಿಶೇಷ.
ಐರ್ಲೆಂಡ್ ವಿರುದ್ದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 4 ರನ್ಗಳಿಂದ ರೋಚಕ ಜಯ ಸಾಧಿಸಿತ್ತು. ಭಾರೀ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಟಾಸ್ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ ತಂಡದಲ್ಲಿನ ಬದಲಾವಣೆ ಬಗ್ಗೆ ಮಾತನಾಡಿದ್ದರು. ಈ ವೇಳೆ ರುತುರಾಜ್ ಗಾಯಕ್ವಾಡ್ ಬದಲಿಗೆ ಇಂದು ಸಂಜು ಸ್ಯಾಮ್ಸನ್ ಕಣಕ್ಕಿಳಿಯಲಿದ್ದಾರೆ ಎನ್ನುತ್ತಿದ್ದಂತೆ ಪ್ರೇಕ್ಷಕರ ಕಡೆಯಿಂದ ಸ್ಯಾಮ್ಸನ್ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಈ ಕಿರುಚಾಟ ಕೇಳಿ ಒಂದು ಕ್ಷಣ ಪಾಂಡ್ಯ ಅತ್ತ ತಿರುಗಿ ನೋಡಿದ್ದರು. ಅಷ್ಟೇ ಅಲ್ಲದೆ ತುಂಬಾ ಮಂದಿ ಆತನನ್ನು ಇಷ್ಟಪಡುತ್ತಿದ್ದಾರೆ ಎಂದು ಭಾವಿಸುತ್ತೇನೆ ಎಂದೇಳಿ ಹಾರ್ದಿಕ್ ಪಾಂಡ್ಯ ಮಾತು ಮುಂದುವರೆಸಿದ್ದರು.
ಇದೀಗ ಸಂಜು ಸ್ಯಾಮ್ಸನ್ ಅವರ ಕಂಬ್ಯಾಕ್ ಪಂದ್ಯಕ್ಕೂ ಮುನ್ನ ಅಭಿಮಾನಿಗಳು ಹರ್ಷೋದ್ಘಾರದೊಂದಿಗೆ ಸ್ವಾಗತಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಸ್ಯಾಮ್ಸನ್ ಯಾವುದೇ ಕ್ರಮಾಂಕದಲ್ಲೂ ಆಡಬಲ್ಲ ಆಟಗಾರ. ಇದಾಗ್ಯೂ ಆತನಿಗೆ ಕಳೆದ 7 ವರ್ಷಗಳಲ್ಲಿ ಅವಕಾಶ ನೀಡಿರುವುದು ಕೇವಲ 14 ಪಂದ್ಯಗಳಲ್ಲಿ ಮಾತ್ರ. ಇದೀಗ ಆರಂಭಿಕನಾಗಿ ಕಣಕ್ಕಿಳಿದ ಪಂದ್ಯದಲ್ಲೂ ಮಿಂಚಿದ್ದಾರೆ. ಐಪಿಎಲ್ ಮೂಲಕ ತಮ್ಮ ಸಾಮರ್ಥ್ಯವನ್ನು ತೆರೆದಿಡುತ್ತಾ ಬಂದಿದ್ದಾರೆ. ಇನ್ನು ಮೇಲೆಯಾದರೂ ಆತನಿಗೆ ತಂಡದಲ್ಲಿ ಅವಕಾಶ ನೀಡಿ ಎಂದು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
That’s the craze for Sanju ❤️?#SanjuSamson #INDvIRE pic.twitter.com/Bna6uIEPRO
— ROBIN op (@_r0binn_) June 28, 2022
ಇನ್ನು ಈ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದ ಸ್ಯಾಮ್ಸನ್ ಸ್ಪೋಟಕ ಇನಿಂಗ್ಸ್ ಆಡಿದ್ದರು. ವಿಶೇಷ ಎಂದರೆ 7 ವರ್ಷಗಳ ನಂತರ ಟಿ20 ಪಂದ್ಯವಾಡಿದ ಸ್ಯಾಮ್ಸನ್ ತಮ್ಮ ಮೊದಲ ಅರ್ಧಶತಕವನ್ನು ಕೂಡ ಬಾರಿಸಿದ್ದರು. 42 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡ 77 ರನ್ ಗಳಿಸಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.
ಈ ಅರ್ಧಶತಕದೊಂದಿಗೆ ಇದೀಗ ಸಂಜು ಸ್ಯಾಮ್ಸನ್ ಕೂಡ ಟಿ20 ವಿಶ್ವಕಪ್ ರೇಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಏಕೆಂದರೆ ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ದದ ಟಿ20 ಸರಣಿಗೆ ತಂಡವನ್ನು ಆಯ್ಕೆ ಮಾಡಲಿದ್ದು, ಈ ಸರಣಿಯಲ್ಲಿ ಆಯ್ಕೆಯಾಗುವ ಬಹುತೇಕ ಆಟಗಾರರೇ ಟಿ20 ವಿಶ್ವಕಪ್ನಲ್ಲೂ ಸ್ಥಾನ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ದ ಯಾರಿಗೆಲ್ಲಾ ಚಾನ್ಸ್ ಸಿಗಲಿದೆ ಎಂಬುದೇ ಈಗ ದೊಡ್ಡ ಪ್ರಶ್ನೆ. ಏಕೆಂದರೆ ಮೀಸಲು ಟೀಮ್ ಇಂಡಿಯಾದಲ್ಲಿ ದೀಪಕ್ ಹೂಡಾ ಹಾಗೂ ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ಹೀಗಾಗಿ ಈ ಇಬ್ಬರು ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ.
ಅತ್ತ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನು ಒಳಗೊಂಡ ಮತ್ತೊಂದು ತಂಡ ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆ ತಂಡದಲ್ಲಿರುವ ಬಹುತೇಕ ಆಟಗಾರರು ಟೀಮ್ ಇಂಡಿಯಾ ಟಿ20 ತಂಡದ ಖಾಯಂ ಸದಸ್ಯರು ಎಂಬುದು ವಿಶೇಷ. ಹೀಗಾಗಿ ಐರ್ಲೆಂಡ್ ವಿರುದ್ದ ಆಡಿದ ಯಾರಿಗೆಲ್ಲಾ ಇಂಗ್ಲೆಂಡ್ ವಿರುದ್ದ ಚಾನ್ಸ್ ಸಿಗಲಿದೆ ಕಾದು ನೋಡಬೇಕಿದೆ.