IND vs SA: ಕೇವಲ 240 ರನ್ಗಳ ಟಾರ್ಗೆಟ್: ಆದರೆ ದಕ್ಷಿಣ ಆಫ್ರಿಕಾಗೆ ಗೆಲುವು ಸುಲಭವಲ್ಲ..!
india vs south africa 2nd test: ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಇದೀಗ 240 ರನ್ಗಳ ಟಾರ್ಗೆಟ್ ಪಡೆದಿರುವ ದಕ್ಷಿಣ ಆಫ್ರಿಕಾ 2ನೇ ಇನಿಂಗ್ಸ್ ಆರಂಭಿಸಿದೆ. ಇದೀಗ 3ನೇ ದಿನದಾಟ ನಡೆಯುತ್ತಿದ್ದು, ಇನ್ನೂ ಕೂಡ 2 ದಿನಗಳ ಆಟ ಬಾಕಿಯಿದೆ.
ಭಾರತ-ದಕ್ಷಿಣ ಆಫ್ರಿಕಾ (India vs South Africa 2nd Test) ನಡುವಣ 2ನೇ ಟೆಸ್ಟ್ ಪಂದ್ಯವು ಕುತೂಹಲಘಟ್ಟದತ್ತ ಸಾಗುತ್ತಿದೆ. ಜೋಹಾನ್ಸ್ಬರ್ಗ್ನ ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಕೆಎಲ್ ರಾಹುಲ್ (KL Rahul) ಅವರ ಅರ್ಧಶತಕ ಹಾಗೂ ಅಶ್ವಿನ್ ಅವರ 46 ರನ್ಗಳ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 202 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಶಾರ್ದೂಲ್ ಠಾಕೂರ್ (7 ವಿಕೆಟ್) ಅವರ ಮಾರಕ ದಾಳಿಗೆ ತತ್ತರಿಸಿ 229 ರನ್ಗೆ ಸರ್ವಪತನ ಕಂಡಿತು. ಇದರ ಬೆನ್ನಲ್ಲೇ 2ನೇ ಇನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ (58), ಚೇತೇಶ್ವರ ಪೂಜಾರ (54) ತಂಡಕ್ಕೆ ಆಸರೆಯಾದರು. ಉಳಿದ ಆಟಗಾರರ ನೀರಸ ಪ್ರದರ್ಶನದ ಹೊರತಾಗಿಯೂ ಹನುಮ ವಿಹಾರಿ ಅವರ ರಕ್ಷಣಾತ್ಮಕ ಆಟದೊಂದಿಗೆ ಅಜೇಯ 40 ರನ್ಗಳಿಸಿ ತಂಡದ ಮೊತ್ತವನ್ನು 250 ರನ್ಗಳ ಗಡಿದಾಟಿಸಿದರು. ಕಗಿಸೊ ರಬಾಡ, ಲುಂಗಿ ಎನ್ಗಿಡಿ ಹಾಗೂ ಮಾರ್ಕೊ ಜಾನ್ಸನ್ ಅವರ ಮಾರಕ ದಾಳಿಯಿಂದಾಗಿ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್ ಅನ್ನು 266 ರನ್ಗಳಿಗೆ ಅಂತ್ಯಗೊಳಿಸಿತು.
ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಇದೀಗ 240 ರನ್ಗಳ ಟಾರ್ಗೆಟ್ ಪಡೆದಿರುವ ದಕ್ಷಿಣ ಆಫ್ರಿಕಾ 2ನೇ ಇನಿಂಗ್ಸ್ ಆರಂಭಿಸಿದೆ. ಇದೀಗ 3ನೇ ದಿನದಾಟ ನಡೆಯುತ್ತಿದ್ದು, ಇನ್ನೂ ಕೂಡ 2 ದಿನಗಳ ಆಟ ಬಾಕಿಯಿದೆ. ಹೀಗಾಗಿ ದಕ್ಷಿಣ ಆಫ್ರಿಕಾಗೆ ಗೆಲ್ಲುವ ಅವಕಾಶ ಹೆಚ್ಚಿದೆ. ಆದರೆ ವಾಂಡರರ್ಸ್ ಮೈದಾನದಲ್ಲಿ ಚೇಸ್ ಎಂಬುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದಕ್ಕೆ ಈ ಹಿಂದಿನ ಅಂಕಿ ಅಂಶಗಳೇ ಸಾಕ್ಷಿ.
ಏಕೆಂದರೆ ಈ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಇದುವರೆಗೆ ಮೂರು ಬಾರಿ ಮಾತ್ರ ಚೇಸ್ ಮಾಡಲಾಗಿದೆ. ಅದರಲ್ಲೂ 239 ರನ್ಗಿಂತ ಹೆಚ್ಚಿನ ರನ್ ಚೇಸ್ ಮಾಡಿರುವುದು ಕೇವಲ 2 ಬಾರಿ ಮಾತ್ರ. ಅದು ಕೂಡ ದಶಕಗಳ ಹಿಂದೆ. ಅಂದರೆ 2006 ರಲ್ಲಿ ಸೌತ್ ಆಫ್ರಿಕಾ ತಂಡವು ನ್ಯೂಜಿಲೆಂಡ್ ವಿರುದ್ದ 217 ರನ್ಗಳನ್ನು ಚೇಸ್ ಮಾಡಿ ಜಯಿಸಿತ್ತು. ಹಾಗೆಯೇ 2006 ರಲ್ಲಿ ಆಸ್ಟ್ರೇಲಿಯಾ ಸೌತ್ ಆಫ್ರಿಕಾ ನೀಡಿದ 292 ರನ್ಗಳನ್ನು ಬೆನ್ನತ್ತಿ ಗೆಲುವು ದಾಖಲಿಸಿತ್ತು. ಹಾಗೆಯೇ 2011 ರಲ್ಲಿ ಆಸ್ಟ್ರೇಲಿಯಾ ತಂಡವು ಸೌತ್ ಆಫ್ರಿಕಾ ವಿರುದ್ದ 310 ರನ್ಗಳನ್ನು ಚೇಸ್ ಮಾಡಿ ಜಯ ಸಾಧಿಸಿತ್ತು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಸೌತ್ ಆಫ್ರಿಕಾ ತಂಡವು ಈ ಮೈದಾನದಲ್ಲಿ 4ನೇ ಇನಿಂಗ್ಸ್ನಲ್ಲಿ ಚೇಸ್ ಮಾಡಿ ಗೆದ್ದಿರುವುದು ಕೇವಲ 1 ಬಾರಿ ಮಾತ್ರ. ಇದೀಗ ಮೊದಲ ಇನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ಕೇವಲ 229 ರನ್ಗಳಿಗೆ ಆಲೌಟ್ ಆಗಿದೆ. ಹೀಗಾಗಿ 240 ರನ್ಗಳ ಸುಲಭ ಗುರಿ ನೀಡಿದರೂ ಟೀಮ್ ಇಂಡಿಯಾ ಬೌಲರುಗಳು ಸೌತ್ ಆಫ್ರಿಕಾ ಬ್ಯಾಟರ್ಗಳನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Ravindra Jadeja: ಸ್ಟಾರ್ ಆಲ್ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(IND vs SA: Highest successful 4th innings chases at Wanderers)