
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಡಿಸೆಂಬರ್ 26 ರಿಂದ ಸೆಂಚುರಿಯನ್‌ನಲ್ಲಿ ಉಭಯ ತಂಡಗಳ ನಡುವೆ ಬಾಕ್ಸಿಂಗ್ ಡೇ ಟೆಸ್ಟ್ ನಡೆಯಲಿದೆ. ಈ ಸರಣಿಯು ಟೀಮ್ ಇಂಡಿಯಾಕ್ಕೆ ಬಹಳ ಮಹತ್ವದ್ದಾಗಿದೆ ಏಕೆಂದರೆ ಅದು ದಕ್ಷಿಣ ಆಫ್ರಿಕಾ ನೆಲದಲ್ಲಿ ಎಂದಿಗೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಮೇಲಕ್ಕೇರಲು ಭಾರತ ಪ್ರತಿಯೊಂದು ಪಂದ್ಯವನ್ನು ಗೆಲ್ಲಬೇಕಿದೆ.ಅಲ್ಲದೆ ಈ ಪ್ರವಾಸದಲ್ಲಿ ಭಾರತದ ಅನೇಕ ಆಟಗಾರರು ತಮ್ಮ ಖಾತೆಯಲ್ಲಿ ಹಲವು ದಾಖಲೆಗಳನ್ನು ಹಾಕಿಕೊಳ್ಳಲಿದ್ದಾರೆ. ನಾವೀಗ ನಿಮಗೆ ಅಂತಹವರ ಬಗ್ಗೆ ಹೇಳಲಿದ್ದೇವೆ.
ವಿರಾಟ್ ಕೊಹ್ಲಿ, ಪೂಜಾರ, ರಹಾನೆ ಅವರಂತಹ ದಿಗ್ಗಜರಿಂದ ಟೀಂ ಇಂಡಿಯಾ ಕೂಡ ದೊಡ್ಡ ನಿರೀಕ್ಷೆ ಹೊಂದಿದೆ. ಅಂದಹಾಗೆ, ಈ ಅನುಭವಿಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಕೆಲವು ವಿಶೇಷ ದಾಖಲೆಗಳನ್ನು ಸಾಧಿಸಲು ಅವಕಾಶವಿದೆ.
ವಿರಾಟ್ಗೆ 8000 ರನ್ ಪೂರೈಸುವ ಅವಕಾಶ
ವಿರಾಟ್ ಕೊಹ್ಲಿಯಿಂದ 71ನೇ ಅಂತರಾಷ್ಟ್ರೀಯ ಶತಕವನ್ನು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಅಲ್ಲದೆ ಭಾರತದ ಟೆಸ್ಟ್ ನಾಯಕ ತಮ್ಮ 8000 ಟೆಸ್ಟ್ ರನ್‌ಗಳಿಂದ ಕೇವಲ 199 ರನ್‌ಗಳ ಅಂತರದಲ್ಲಿದ್ದಾರೆ. ಕೊಹ್ಲಿ 97 ಟೆಸ್ಟ್‌ಗಳಲ್ಲಿ 7801 ರನ್ ಗಳಿಸಿದ್ದಾರೆ ಮತ್ತು ಈ ಅನುಭವಿ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಆಡಿದರೆ, ಅವರು ತಮ್ಮ ಹೆಸರಿಗೆ 100 ಟೆಸ್ಟ್‌ಗಳನ್ನು ಆಡಿದ ದಾಖಲೆಯನ್ನು ಮಾಡಲಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್ ಅಬ್ಬರಿಸಿದರೆ ಒಳಿತು. ವಿರಾಟ್ ದಕ್ಷಿಣ ಆಫ್ರಿಕಾ ನೆಲದಲ್ಲಿ 55.80 ಸರಾಸರಿಯಲ್ಲಿ 2 ಶತಕಗಳನ್ನು ಒಳಗೊಂಡಂತೆ 558 ರನ್ ಗಳಿಸಿದ್ದಾರೆ.
ಪೂಜಾರ-ರಹಾನೆ 1000 ರನ್ ಪೂರೈಸುತ್ತಾರಾ?
ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಉತ್ತಮ ಫಾರ್ಮ್‌ನಲ್ಲಿರದೆ ಇರಬಹುದು. ಆದರೆ ಈ ಇಬ್ಬರೂ ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ ವಿಶೇಷ ಮೈಲುಗಲನ್ನು ಸಾಧಿಸುವ ಅವಕಾಶವನ್ನು ಹೊಂದಿದ್ದಾರೆ. ಇಬ್ಬರೂ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧ 1000 ಟೆಸ್ಟ್ ರನ್ ಗಳಿಸುವ ಸನಿಹದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 14 ಟೆಸ್ಟ್‌ಗಳಲ್ಲಿ ಪೂಜಾರ 758 ರನ್ ಗಳಿಸಿದ್ದರೆ, ರಹಾನೆ 748 ರನ್ ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿಯೇ ಸ್ಟೇನ್ ದಾಖಲೆ ಮುರಿತಾರಾ ಅಶ್ವಿನ್?
ಆರ್ ಅಶ್ವಿನ್‌ಗೆ ಅನೇಕ ದಿಗ್ಗಜ ಬೌಲರ್‌ಗಳ ದಾಖಲೆ ಮುರಿಯುವ ಅವಕಾಶವೂ ಇದೆ. ಅಶ್ವಿನ್ ಟೆಸ್ಟ್ನಲ್ಲಿ 427 ವಿಕೆಟ್ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ಸಂದರ್ಭದಲ್ಲಿ, ಅಶ್ವಿನ್ ರಿಚರ್ಡ್ ಹೆಡ್ಲಿ, ರಂಗನಾ ಹೆರಾತ್ ಮತ್ತು ಕಪಿಲ್ ದೇವ್ ಅವರಂತಹ ದಿಗ್ಗಜರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ. ಅಷ್ಟೇ ಅಲ್ಲ, ಡೇಲ್ ಸ್ಟೇಯ್ನ್ ಅವರ 439 ವಿಕೆಟ್‌ಗಳ ದಾಖಲೆಯನ್ನು ಮುರಿಯಲಿದ್ದಾರೆ. ಅಶ್ವಿನ್ ಸರಣಿಯಲ್ಲಿ 13 ವಿಕೆಟ್ ಪಡೆದರೆ, ಸ್ಟೇನ್ ದಾಖಲೆ ಮುರಿಯಲಿದ್ದಾರೆ.
ಶಮಿ ದ್ವಿಶತಕ ಸಿಡಿಸುತ್ತಾರಾ?
ಮೊಹಮ್ಮದ್ ಶಮಿಗೆ ಟೆಸ್ಟ್ ವಿಕೆಟ್‌ಗಳ ದ್ವಿಶತಕ ಪೂರೈಸುವ ಅವಕಾಶವೂ ಇದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 195 ವಿಕೆಟ್ ಪಡೆದಿರುವ ಶಮಿ ದಕ್ಷಿಣ ಆಫ್ರಿಕಾ ನೆಲದಲ್ಲಿ 200 ಟೆಸ್ಟ್ ವಿಕೆಟ್‌ಗಳನ್ನು ಪೂರೈಸುವ ಅವಕಾಶ ಹೊಂದಿದ್ದಾರೆ. ಶಮಿ ದಕ್ಷಿಣ ಆಫ್ರಿಕಾ ನೆಲದಲ್ಲಿ 5 ಟೆಸ್ಟ್‌ಗಳಲ್ಲಿ 21 ವಿಕೆಟ್ ಪಡೆದಿದ್ದಾರೆ. ಈ ಅಂಕಿಅಂಶವನ್ನು ನೋಡಿದರೆ, ಈ ವೇಗದ ಬೌಲರ್ ಶೀಘ್ರದಲ್ಲೇ 200 ಟೆಸ್ಟ್ ವಿಕೆಟ್‌ಗಳ ಸಂಖ್ಯೆಯನ್ನು ತಲುಪಬಹುದು.
Published On - 8:31 am, Tue, 21 December 21