IND vs SL, 3rd ODI: ಐತಿಹಾಸಿಕ ಗೆಲುವು: ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾ
IND vs SL, 3rd ODI: ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ 95 ರನ್ಗಳ ಜೊತೆಯಾಟವಾಡಿದ್ದರು.

ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 317 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದಕ್ಕೂ ಮುನ್ನ ಮೊದಲ ಏಕದಿನ ಪಂದ್ಯದಲ್ಲಿ 67 ರನ್ಗಳಿಂದ ಭಾರತ ತಂಡ ಜಯ ಸಾಧಿಸಿತ್ತು. ಇನ್ನು 2ನೇ ಏಕದಿನ ಪಂದ್ಯದಲ್ಲಿ 4 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಇದೀಗ ಭರ್ಜರಿ ಜಯದೊಂದಿಗೆ ಟೀಮ್ ಇಂಡಿಯಾ ಸರಣಿ ಗೆದ್ದುಕೊಂಡಿದೆ. ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್ನಲ್ಲಿ 300 ಕ್ಕೂ ಅಧಿಕ ರನ್ಗಳಿಂದ ಗೆದ್ದ ಮೊದಲ ತಂಡ ಎಂಬ ಐತಿಹಾಸಿಕ ದಾಖಲೆಯನ್ನು ಟೀಮ್ ಇಂಡಿಯಾ ನಿರ್ಮಿಸಿದೆ.
ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ 95 ರನ್ಗಳ ಜೊತೆಯಾಟವಾಡಿದ್ದರು. ಈ ಹಂತದಲ್ಲಿ 42 ರನ್ ಬಾರಿಸಿದ್ದ ಹಿಟ್ಮ್ಯಾನ್ ಕ್ಯಾಚ್ ನೀಡಿ ಔಟಾದರು.
ಈ ವೇಳೆ ಜೊತೆಯಾದ ಗಿಲ್ ಹಾಗೂ ವಿರಾಟ್ ಕೊಹ್ಲಿ ಶತಕದ ಜೊತೆಯಾಟವಾಡಿದರು. ಇದರ ನಡುವೆ ಶುಭ್ಮನ್ ಗಿಲ್ ಆಕರ್ಷಕ ಶತಕ ಬಾರಿಸಿ ಬ್ಯಾಟ್ ಮೇಲೆತ್ತಿದರು. ಆದರೆ ಶತಕದ ಬಳಿಕ ಬಿರುಸಿನ ಆಟಕ್ಕೆ ಮುಂದಾದ ಗಿಲ್ 97 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 14 ಫೋರ್ನೊಂದಿಗೆ 116 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇತ್ತ ಆರ್ಭಟ ಶುರು ಮಾಡಿದ್ದ ವಿರಾಟ್ ಕೊಹ್ಲಿ 85 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಬಿರುಸಿನ ಶತಕದ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ನತ್ತ ಮುಖ ಮಾಡಿದ ಕಿಂಗ್ ಕೊಹ್ಲಿ ಲಂಕಾ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕೇವಲ 106 ಎಸೆತಗಳಲ್ಲಿ ಕೊಹ್ಲಿಯ ಸ್ಕೋರ್ 150 ರ ಗಡಿದಾಟಿತು. ಅಂತಿಮವಾಗಿ 110 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 13 ಫೋರ್ನೊಂದಿಗೆ ವಿರಾಟ್ ಕೊಹ್ಲಿ ಅಜೇಯ 166 ರನ್ ಕಲೆಹಾಕಿದರು. ಕೊಹ್ಲಿಯ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಕಲೆಹಾಕಿತು.
391 ರನ್ಗಳ ಕಠಿಣ ಗುರಿ ಪಡೆದ ಶ್ರೀಲಂಕಾ ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 22 ಆಗುವಷ್ಟರಲ್ಲಿ ಇಬ್ಬರನ್ನು ಮೊಹಮ್ಮದ್ ಸಿರಾಜ್ ಪೆವಿಲಿಯನ್ಗೆ ಕಳುಹಿಸಿದ್ದರು. ಇದರ ಬೆನ್ನಲ್ಲೇ ಅಸಲಂಕಾ (1) ರನ್ನು ಶಮಿ ಔಟ್ ಮಾಡಿದರು. ಇನ್ನು ಸಿರಾಜ್ ಎಸೆತದಲ್ಲಿ ನುವಾನಿಡು (19) ಹಾಗೂ ವನಿಂದು ಹಸರಂಗ (1) ಕೂಡ ಕ್ಲೀನ್ ಬೌಲ್ಡ್ ಆದರು.
ಇದರ ಬೆನ್ನಲ್ಲೇ ಚಮಿಕಾ ಕರುಣರತ್ನೆಯನ್ನು ರನೌಟ್ ಮಾಡುವ ಮೂಲಕ ಸಿರಾಜ್ ಟೀಮ್ ಇಂಡಿಯಾಗೆ ಮತ್ತೊಂದು ಯಶಸ್ಸು ತಂದುಕೊಟ್ಟರು. ಇತ್ತ ಆರಂಭಿಕ ಆಘಾತದಿಂದ ತತ್ತರಿಸಿದ ಶ್ರೀಲಂಕಾಗೆ ನಾಯಕ ದಸುನ್ ಶಾನಕ ಆಸರೆಯಾಗುವ ನಿರೀಕ್ಷೆಯಿತ್ತು. ಆದರೆ ಕುಲ್ದೀಪ್ ಯಾದವ್ ಎಸೆದ ಗೂಗ್ಲಿಗೆ ಶಾನಕ (11) ಕೂಡ ಬೌಲ್ಡ್ ಆದರು. ಅಂದರೆ ಕೇವಲ 50 ರನ್ಗಳಿಗೆ ಶ್ರೀಲಂಕಾ ತಂಡವು 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಶಮಿ ದುನಿತ್ ವಿಕೆಟ್ ಪಡೆದರು. ಹಾಗೆಯೇ ಲಹಿರು ಕುಮಾರ ಕುಲ್ದೀಪ್ ಯಾದವ್ ಎಸೆತದಲ್ಲಿ ಬೌಲ್ಡ್ ಆದರು. ಇನ್ನು ಗಾಯಗೊಂಡಿದ್ದ ಕಾರಣ ಅಶುನ್ ಭಂಡಾರ ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿರಲಿಲ್ಲ. ಇದರೊಂದಿಗೆ ಟೀಮ್ ಇಂಡಿಯಾ 317 ರನ್ಗಳ ಭರ್ಜರಿ ಜಯ ಸಾಧಿಸಿತು.
ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು.
ಭಾರತ- 390/5 (50)
ಶ್ರೀಲಂಕಾ- 73 (22)
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಅವಿಷ್ಕಾ ಫೆರ್ನಾಂಡೊ, ನುವಾನಿಡು ಫೆರ್ನಾಂಡೊ, ಕುಸಲ್ ಮೆಂಡಿಸ್, ಅಶೆನ್ ಬಂಡಾರ, ಚರಿತ್ ಅಸಲಂಕಾ, ದಸುನ್ ಶಾನಕ (ನಾಯಕ), ವನಿಂದು ಹಸರಂಗ, ಜೆಫ್ರಿ ವಾಂಡರ್ಸೆ, ಚಾಮಿಕಾ ಕರುಣಾರತ್ನೆ, ಕಸುನ್ ರಜಿತಾ, ಲಹಿರು ಕುಮಾರ
Published On - 7:46 pm, Sun, 15 January 23




