IND vs SL: ಮೊದಲು 7 ನೋ ಬಾಲ್, ಈಗ 11 ವೈಡ್; ವೇಗಿಗಳು ಎಚ್ಚೆತ್ತುಕೊಳ್ಳುವುದು ಯಾವಾಗ?

| Updated By: ಪೃಥ್ವಿಶಂಕರ

Updated on: Jan 08, 2023 | 11:57 AM

IND vs SL: ವಾಸ್ತವವಾಗಿ ಆ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಒಟ್ಟು 7 ನೋ ಬಾಲ್‌ಗಳನ್ನು ಎಸೆದಿದ್ದರು. ಇದರಿಂದ ಲಂಕಾ ಪಡೆ 30 ಕ್ಕೂ ಹೆಚ್ಚು ರನ್​ಗಳನ್ನು ಅಧಿಕವಾಗಿ ಪಡೆಯಿತು.

IND vs SL: ಮೊದಲು 7 ನೋ ಬಾಲ್, ಈಗ 11 ವೈಡ್; ವೇಗಿಗಳು ಎಚ್ಚೆತ್ತುಕೊಳ್ಳುವುದು ಯಾವಾಗ?
ಹಾರ್ದಿಕ್- ಅರ್ಷದೀಪ್
Follow us on

ಟಿ20 ಸರಣಿಯನ್ನು ಗೆದ್ದು ಬೀಗುವುದರೊಂದಿಗೆ 2023ರ ವರ್ಷವನ್ನು ಶುಭಾರಂಭ ಮಾಡಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಗೆ ತಯಾರಿ ಆರಂಭಿಸಿದೆ. ನಿನ್ನೆ, ಅಂದರೆ ಜ.7ರಂದು ನಡೆದ ಶ್ರೀಲಂಕಾ ( India and Sri Lanka) ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯವನ್ನು ಗೆಲ್ಲುವುದರೊಂದಿಗೆ ಹಾರ್ದಿಕ್ (Hardik Pandya) ಪಡೆ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ರಾಜ್‌ಕೋಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಪ್ರದರ್ಶನ ಪ್ರತಿಯೊಂದು ರಂಗದಲ್ಲೂ ಅದ್ಭುತವಾಗಿತ್ತು. ಮೊದಲು ಬ್ಯಾಟಿಂಗ್​ನಲ್ಲಿ ಬ್ಯಾಟ್ಸ್‌ಮನ್‌ಗಳು 228 ರನ್‌ಗಳ ದೊಡ್ಡ ಸ್ಕೋರ್ ಗಳಿಸಿದರೆ, ನಂತರ ಬೌಲರ್‌ಗಳು ಶ್ರೀಲಂಕಾವನ್ನು 137 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಆದರೆ ಅದೇನೇ ಇದ್ದರೂ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಮಾತ್ರ ತನ್ನ ಹಳೆಯ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಗೋಜಿಗೆ ಹೊದಂತೆ ತೋರುತ್ತಿಲ್ಲ. ಪಂದ್ಯದಿಂದ ಪಂದ್ಯಕ್ಕೆ ತಪ್ಪುಗಳ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕಾದ ವೇಗಿಗಳು ಯಾವುದೇ ಬದಲಾವಣೆಗೆ ಮನಸ್ಸು ಮಾಡಿದಂತೆ ತೋರುತ್ತಿಲ್ಲ. ಇದು ನಾಯಕ ಹಾರ್ದಿಕ್ ಹಾಗೂ ಕೋಚ್ ದ್ರಾವಿಡ್​ಗೆ ಸಂಕಷ್ಟ ತಂದೊಡ್ಡಿದೆ.

7 ನೋಬಾಲ್​ಗಳು

ಪುಣೆಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳ ಎದುರು ಭಾರತದ ಬೌಲರ್‌ಗಳು ಸಂಪೂರ್ಣ ವಿಫಲರಾಗಿದ್ದರು. ಇದರೊಂದಿಗೆ ಬರೋಬ್ಬರಿ 206 ರನ್ ಬಿಟ್ಟುಕೊಟ್ಟಿದ್ದ ವೇಗಿಗಳು ಟೀಂ ಇಂಡಿಯಾದ ಸೋಲಿಗೆ ಪ್ರಮುಖ ಕಾರಣರಾಗಿದ್ದರು. ಸೋಲಿನ ನಂತರ ಮಾತನಾಡಿದ್ದ ಕ್ಯಾಪ್ಟನ್ ಹಾರ್ದಿಕ್ ಕೂಡ ಬೌಲರ್​ಗಳು ದಾರಳವಾಗಿ ರನ್​ ಬಿಟ್ಟುಕೊಟ್ಟಿದ್ದರ ಬಗ್ಗೆ ಮಾತನಾಡದೆ, ಅದೊಂದು ವಿಚಾರದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಬೌಲರ್​ಗಳ ಈ ನಡೆ ಮಹಾಪರಾಧ ಎಂದಿದ್ದರು. ವಾಸ್ತವವಾಗಿ ಆ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಒಟ್ಟು 7 ನೋ ಬಾಲ್‌ಗಳನ್ನು ಎಸೆದಿದ್ದರು. ಇದರಿಂದ ಲಂಕಾ ಪಡೆ 30 ಕ್ಕೂ ಹೆಚ್ಚು ರನ್​ಗಳನ್ನು ಅಧಿಕವಾಗಿ ಪಡೆಯಿತು. ಕೇವಲ ಅರ್ಷದೀಪ್ ಸಿಂಗ್ ಒಬ್ಬರೇ 5 ನೋ ಬಾಲ್‌ಗಳನ್ನು ಎಸೆದು ಪಾಂಡ್ಯ ಕೆಂಗಣ್ಣಿಗೆ ಗುರಿಯಾಗಿದ್ದರು.

ನೋ ಬಾಲ್ ನಂತರ ವೈಡ್‌ಗಳ ಸರಣಿ

ಇದರ ಹೊರತಾಗಿಯೂ, ರಾಜ್‌ಕೋಟ್ ಪಂದ್ಯಕ್ಕೆ ಟೀಂ ಇಂಡಿಯಾದ ಆಡುವ ಇಲೆವೆನ್‌ನಲ್ಲಿ ಯಾವುದೇ ಬದಲಾವಣೆ ಮಾಡದೆ ಬೌಲರ್​ಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ನಾಯಕ ಹಾಗೂ ಕೋಚ್ ಮಾಡಿದ್ದರು. ಆದರೆ ಈ ಬಾರಿ ಕೇವಲ ಒಂದೇ ಒಂದು ನೋ ಬಾಲ್ ಬೌಲ್ ಮಾಡಿದ ವೇಗಿಗಳು, ನೋ ಬಾಲ್ ಬದಲಿಗೆ ಸಾಕಷ್ಟು ವೈಡ್‌ಗಳನ್ನು ಎಸೆದು ಸಾಕಷ್ಟು ದುಬಾರಿ ಎನಿಸಿಕೊಂಡರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಒಟ್ಟು 11 ವೈಡ್ ಎಸೆದಿತ್ತು.

IND vs SL: ಟೀಂ ಇಂಡಿಯಾದ ಪ್ರಯೋಗ ಫಲಿಸಲಿಲ್ಲ; ರಾಹುಲ್-ಹಾರ್ದಿಕ್ ಪರಿಹಾರ ಕಂಡುಕೊಳ್ಳುವುದು ಹೇಗೆ?

ಇದರಲ್ಲಿ 3 ವೈಡ್‌ಗಳನ್ನು ಅರ್ಷದೀಪ್ (ಒಟ್ಟು 4) ಮೊದಲ ಓವರ್‌ನಲ್ಲಿ ಹಾಕಿ, ಮತ್ತೊಮ್ಮೆ ದುಬಾರಿ ಎನಿಸಿಕೊಂಡಿರು. ಕಳೆದ ಪಂದ್ಯದಲ್ಲಿ ಹೇಗೆ ನೋ-ಬಾಲ್‌ಗಳ ಹ್ಯಾಟ್ರಿಕ್ ಬಾರಿಸಿದ್ದರೋ, ಈ ಪಂದ್ಯದಲ್ಲೂ ವೈಡ್​ಗಳ ಓವರ್ ಹ್ಯಾಟ್ರಿಕ್ ಮಾಡಿದರು.

ಅರ್ಷದೀಪ್​ಗೆ ಸಾಥ್ ನೀಡಿದ ಉಮ್ರಾನ್-ಪಾಂಡ್ಯ

ಆದರೆ, ರಾಜ್‌ಕೋಟ್‌ನಲ್ಲಿ ಅರ್ಷದೀಪ್ ಮಾತ್ರವಲ್ಲ, ಸ್ವತಃ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಸಾಕಷ್ಟು ವೈಡ್ ಎಸೆದರು. ಒಂದೇ ಓವರ್‌ನಲ್ಲಿ ಎರಡು ವೈಡ್ ಬಾಲ್‌ಗಳನ್ನು ಪಾಂಡ್ಯ ಎಸೆದರೆ, ಉಮ್ರಾನ್ ಮಲಿಕ್ ಕೂಡ 4 ಓವರ್‌ಗಳಲ್ಲಿ 3 ಬಾರಿ ಈ ತಪ್ಪನ್ನು ಮಾಡಿದರು. ನೋ ಬಾಲ್ ನಷ್ಟು ವೈಡ್ ಬಾಲ್ ನಷ್ಟ ಉಂಟು ಮಾಡದಿದ್ದರೂ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಅವರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಆದಷ್ಟು ಬೇಗ ಟೀಂ ಇಂಡಿಯಾ ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಏಕೆಂದರೆ ಈ ಸರಣಿಯ ನಂತರ ಭಾರತ ತಂಡ ದೊಡ್ಡ ದೊಡ್ಡ ಟೂರ್ನಿಗಳನ್ನು ಆಡಬೇಕಿದ್ದು, ಇದರ ಭಾರವನ್ನು ಹೊರಬೇಕಾಗಬಹುದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:57 am, Sun, 8 January 23