IND vs SL: ‘ಖಂಡಿತ ನಿರಾಶೆಗೊಳ್ಳುತ್ತಿದ್ದೆ’! ಸೂರ್ಯನ ಆಟಕ್ಕೆ ಫಿದಾ ಆಗಿರುವ ಪಾಂಡ್ಯ ಹೇಳಿದ್ದೇನು ಗೊತ್ತಾ?
IND vs SL: ‘ಸೂರ್ಯ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದ್ದಾರೆ. ಅವರ ಆಟವನ್ನು ನೋಡುತ್ತಿದ್ದರೆ ಬ್ಯಾಟಿಂಗ್ ಮಾಡುವುದು ತುಂಬಾ ಸುಲಭ ಎಂದು ಭಾಸವಾಗುತ್ತದೆ. ನಾನು ಬೌಲರ್ ಆಗಿದ್ದರೆ ಅವರು ಆಡಿದ ಹೊಡೆತಗಳಿಂದ ನಾನು ಖಂಡಿತ ನಿರಾಶೆಗೊಳ್ಳುತ್ತಿದ್ದೆ ಎಂದು ಪಾಂಡ್ಯ ಹೇಳಿದ್ದಾರೆ.
ಮೂರನೇ ಟಿ20 ಪಂದ್ಯದಲ್ಲಿ ಶ್ರೀಲಂಕಾವನ್ನು 91 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ( India and Sri Lanka) 2-1 ರಿಂದ ಸರಣಿಯನ್ನು ಗೆದ್ದುಕೊಂಡಿದೆ. 51 ಎಸೆತಗಳಲ್ಲಿ ಅಜೇಯ 112 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ (Suryakumar Yadav) ಭಾರತದ ಗೆಲುವಿನ ಹೀರೋ ಎನಿಸಿಕೊಂಡರು. ತಮ್ಮ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಚಚ್ಚಿದ ಸೂರ್ಯ, ಟೀಂ ಇಂಡಿಯಾ (Team India) ಬೃಹತ್ ಟಾರ್ಗೆಟ್ ಸೆಟ್ ಮಾಡುವಲ್ಲಿ ಪ್ರಮುಖ ರೂವಾರಿ ಎನಿಸಿಕೊಂಡರು. ಕೇವಲ 45 ಎಸೆತಗಳಲ್ಲಿ ಶತಕ ಪೂರೈಸಿದ್ದ ಸೂರ್ಯ, ಒಂದರ ಹಿಂದೆ ಒಂದರಂತೆ ಭಿನ್ನ ವಿಭಿನ್ನ ಶಾಟ್ಗಳನ್ನು ಬಾರಿಸುವ ಮೂಲಕ ಕ್ರೀಡಾಂಗಣದಲ್ಲಿ ನೆರಿದಿದ್ದ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಸೂರ್ಯನ 360 ಡಿಗ್ರಿ ಆಟದಿಂದ ಬೆರಗಾಗಿರುವ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಕೂಡ ಗೆಲುವಿನ ನಂತರ ಸೂರ್ಯನನ್ನು ಹಾಡಿ ಹೊಗಳಿದ್ದಾರೆ.
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಪಾಂಡ್ಯ, ‘ಸೂರ್ಯ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದ್ದಾರೆ. ಅವರ ಆಟವನ್ನು ನೋಡುತ್ತಿದ್ದರೆ ಬ್ಯಾಟಿಂಗ್ ಮಾಡುವುದು ತುಂಬಾ ಸುಲಭ ಎಂದು ಭಾಸವಾಗುತ್ತದೆ. ನಾನು ಬೌಲರ್ ಆಗಿದ್ದರೆ ಅವರು ಆಡಿದ ಹೊಡೆತಗಳಿಂದ ನಾನು ಖಂಡಿತ ನಿರಾಶೆಗೊಳ್ಳುತ್ತಿದ್ದೆ. ಒಂದರ ಹಿಂದೆ ಒಂದರಂತೆ ಸೂರ್ಯ ಮನಬಂದಂತೆ ಬ್ಯಾಟಿಂಗ್ ಮಾಡಿದರು. ಸೂರ್ಯನ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ’ ಎಂದು ಸೂರ್ಯಕುಮಾರ್ನನ್ನು ಮನಸಾರೆ ಹೊಗಳಿದ್ದಾರೆ.
IND vs SL: ಸತತ 40 ವರ್ಷಗಳ ವೈಫಲ್ಯ; ಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ಸೃಷ್ಟಿಸಿದ 8 ದಾಖಲೆಗಳಿವು!
ಆಟಗಾರರನ್ನು ಬೆಂಬಲಿಸುವುದು ನನ್ನ ಗುರಿ
ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಅಕ್ಷರ್ ಪಟೇಲ್ ಆಟಕ್ಕೂ ಫಿದಾ ಆದ ಪಾಂಡ್ಯ, ‘ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಈ ಸರಣಿಯಿಂದ ಅವರು ಹೆಚ್ಚಿನ ಆತ್ಮವಿಶ್ವಾಸವನ್ನು ಪಡೆಯಲಿದ್ದಾರೆ. ಆಟಗಾರರನ್ನು ಬೆಂಬಲಿಸುವುದು ನನ್ನ ಗುರಿ. ಅಲ್ಲದೆ ಅಕ್ಷರ್ ಟಿ20 ಮಾದರಿಯಲ್ಲಿ ಅತ್ಯುತ್ತಮ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ಅವರು ಆಡಿದ ರೀತಿ ನನಗೆ ತುಂಬಾ ಖುಷಿ ತಂದಿದೆ’ ಎಂದಿದ್ದಾರೆ.
ಸೂರ್ಯ ಶತಕ, ಗಿಲ್ ಸಾಥ್
ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದ ಕುರಿತು ಮಾತನಾಡುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್‌ನಲ್ಲಿ 5 ವಿಕೆಟ್‌ಗೆ 228 ರನ್ ಗಳಿಸಿತು. ಸೂರ್ಯ ಹೊರತಾಗಿ ಆರಂಭಿಕ ಆಟಗಾರ ಶುಭಮನ್ ಗಿಲ್ 46 ರನ್ ಹಾಗೂ ರಾಹುಲ್ ತ್ರಿಪಾಠಿ 16 ಎಸೆತಗಳಲ್ಲಿ 35 ರನ್ ಗಳಿಸಿದರು. ಅಕ್ಷರ್ ಪಟೇಲ್ ಕೂಡ 9 ಎಸೆತಗಳಲ್ಲಿ 21 ರನ್ ಗಳಿಸಿ ಅಜೇಯರಾಗಿ ಉಳಿದರು.
ಲಂಕಾಗೆ ಸಂಪೂರ್ಣ ಓವರ್ ಆಡಲು ಸಾಧ್ಯವಾಗಲಿಲ್ಲ
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡದ ಇನ್ನಿಂಗ್ಸ್ ಅನ್ನು 16.4 ಓವರ್‌ನಲ್ಲಿ ಭಾರತದ ಬೌಲರ್‌ಗಳು ಮುಕ್ತಾಯಗೊಳಿಸಿದರು. ಹೀಗಾಗಿ ಇಡೀ ತಂಡ ಕೇವಲ 137 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅರ್ಷದೀಪ್ ಸಿಂಗ್ 20 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಹಾರ್ದಿಕ್ ಪಾಂಡ್ಯ, ಉಮ್ರಾನ್ ಮಲಿಕ್ ಮತ್ತು ಯುಜ್ವೇಂದ್ರ ಚಾಹಲ್ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇನ್ನುಳಿದಂತೆ ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರೆ, ಈ ಸಂಪೂರ್ಣ ಸರಣಿಯಲ್ಲಿ ಅಕ್ಷರ್ ಒಟ್ಟು 117 ರನ್ ಗಳಿಸಿ 3 ವಿಕೆಟ್ ಪಡೆಯುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:59 am, Sun, 8 January 23