Hardik Pandya: ‘ಒಂದೆರಡು ಮ್ಯಾಚ್ ಸೋತರೂ ಪರವಾಗಿಲ್ಲ’; ಕೊನೆಯ ಓವರ್​ ಬಗ್ಗೆ ಹಾರ್ದಿಕ್ ಅಚ್ಚರಿಯ ಹೇಳಿಕೆ

| Updated By: Digi Tech Desk

Updated on: Jan 04, 2023 | 11:39 AM

IND vs SL: ನನ್ನ ಈ ರೀತಿಯ ನಿರ್ಧಾರಗಳಿಂದ ಒಂದೆರಡು ಪಂದ್ಯಗಳನ್ನು ಸೋತರು ಪರವಾಗಿಲ್ಲ. ಆದರೆ ಎಲ್ಲ ಒತ್ತಡದ ಸಂದರ್ಭಗಳಲ್ಲಿ ಆಡುವಂತೆ ನಮ್ಮ ತಂಡವನ್ನು ಸಿದ್ಧಪಡಿಸುವುದೆ ನನ್ನ ಗುರಿಯಾಗಿದೆ ಎಂದಿದ್ದಾರೆ.

Hardik Pandya: ‘ಒಂದೆರಡು ಮ್ಯಾಚ್ ಸೋತರೂ ಪರವಾಗಿಲ್ಲ’; ಕೊನೆಯ ಓವರ್​ ಬಗ್ಗೆ ಹಾರ್ದಿಕ್ ಅಚ್ಚರಿಯ ಹೇಳಿಕೆ
ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ
Follow us on

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಚಕ ಗೆಲುವಿನೊಂದಿಗೆ ಟೀಂ ಇಂಡಿಯಾ (India Vs Sri Lanka) ಹೊಸ ವರ್ಷವನ್ನು ಆರಂಭಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಪಡೆ ಲಂಕಾ ಎದುರು 2 ರನ್​ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ (Team India) ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 160 ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ 2 ರನ್​ಗಳ ಸೋಲು ಕಂಡಿತು. ಬ್ಯಾಟಿಂಗ್​ನಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ ದೀಪಕ್ ಹೂಡಾ ಹಾಗೂ ಬೌಲಿಂಗ್​ನಲ್ಲಿ ಮಿಂಚಿದ ಶಿವಂ ಮಾವಿ ಹಾಗೂ ಉಮ್ರಾನ್ ಮಲಿಕ್ ಗೆಲುವಿನ ಹೀರೋ ಎನಿಸಿಕೊಂಡರು. ಆದರೆ ಕೊನೆಯ ಓವರ್​ನಲ್ಲಿ ಸ್ಪಿನ್ನರ್​ಗೆ ಬೌಲಿಂಗ್​ ನೀಡಿದ ಹಾರ್ದಿಕ್ ಪಾಂಡ್ಯ (Hardik Pandya) ಅವರ ನಡೆ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

ವಾಸ್ತವವಾಗಿ ಕೊನೆಯ ಓವರ್​ನಲ್ಲಿ ಲಂಕಾ ಗೆಲುವಿಗೆ 13 ರನ್‌ಗಳ ಅಗತ್ಯವಿತ್ತು. ಟೀಂ ಇಂಡಿಯಾ ಪಾಳಯದಲ್ಲಿ 3 ಬೌಲಿಂಗ್ ಆಯ್ಕೆಗಳಿದ್ದವು. ಇದರಲ್ಲಿ ನಾಯಕ ಪಾಂಡ್ಯ ಅವರ ಒಂದು ಓವರ್ ಬೌಲಿಂಗ್ ಕೋಟವೂ ಸೇರಿತ್ತು. ಹಾಗೆಯೇ ಯುಜ್ವೇಂದ್ರ ಚಹಾಲ್‌ಗೆ ಎರಡು ಓವರ್‌ಗಳಿದ್ದರೆ, ಅಕ್ಷರ್ ಪಟೇಲ್ ಅವರಿಗೂ ಎರಡು ಓವರ್‌ಗಳು ಉಳಿದಿದ್ದವು. ಸಾಮಾನ್ಯವಾಗಿ ಕೊನೆಯ ಓವರ್​ ಆಗಿದ್ದಿದ್ದರಿಂದ ಪಾಂಡ್ಯ ಅವರೇ ಕೊನೆಯ ಓವರ್ ಮಾಡಲಿದ್ದಾರೆ ಎಂದು ಎಲ್ಲ ಭಾವಿಸಿದ್ದರು. ಆದರೆ ಎಲ್ಲರಿಗಿಂತ ವಿಭಿನ್ನವಾಗಿ ಚಿಂತಿಸಿದ ಪಾಂಡ್ಯ ಚೆಂಡನ್ನು ಅಕ್ಷರ್ ಕೈಗೆ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದರು.

Hardik Pandya: ನಾಯಕನಾದ ಬಳಿಕ ಹಾರ್ದಿಕ್​ ಪಾಂಡ್ಯಗೆ ಟ್ವಿಟರ್​ನಿಂದ ಸಿಕ್ತು ‘ಗೋಲ್ಡ್‌’ ಗಿಫ್ಟ್!

ಎಲ್ಲರಲ್ಲೂ ಅಚ್ಚರಿ ಮೂಡಿಸಿದ ಪಾಂಡ್ಯ

ಗೆಲುವಿಗೆ ಕೊನೆಯ ಓವರೇ ನಿರ್ಣಾಯಕವಾಗಿದ್ದರಿಂದ ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ವೇಗಿಗಳೇ ಬೌಲಿಂಗ್ ಮಾಡುವುದು ಸಹಜ. ಅಲ್ಲದೆ ಲಂಕಾ ಪಾಳಯದ ಬಾಲಂಗೋಚಿಗಳು ಬ್ಯಾಟಿಂಗ್ ಮಾಡುತ್ತಿದ್ದರಿಂದ ಅವರಿಗೆ ವೇಗಿಗಳನ್ನು ಎದುರಿಸುವುದು ಕಷ್ಟಕರವಾಗುತ್ತಿತ್ತು. ಆದರೆ ಅಕ್ಷರ್ ಪಟೇಲ್‌ಗೆ ಚೆಂಡನ್ನು ಹಸ್ತಾಂತರಿಸುವ ಮೂಲಕ ಪಾಂಡ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಅದರಲ್ಲೂ ಈ ಪಂದ್ಯದಲ್ಲಿ ಕೇವಲ 2 ಓವರ್ ಎಸೆದಿದ್ದ ಅಕ್ಷರ್ ಪಟೇಲ್ 21 ರನ್‌ ನೀಡಿ ದುಬಾರಿಯಾಗಿದ್ದಲ್ಲದೆ, ವಿಕೆಟ್ ಕೂಡ ತೆಗೆದಿರಲಿಲ್ಲ. ಹೀಗಾಗಿ ಪಾಂಡ್ಯ ನಿರ್ಧಾರದ ಬಗ್ಗೆ ಒಂದು ಕ್ಷಣ ಎಲ್ಲರೂ ಶಾಕ್ ಆಗಿದ್ದಂತೂ ನಿಜ.

ಆದರೆ ನಾಯಕನ ನಿರ್ಧಾರವನ್ನು ಸರಿ ಎಂದು ಸಾಭೀತುಪಡಿಸಿದ ಅಕ್ಷರ್ ಪಟೇಲ್ ಕೊನೆಯ ಓವರ್​ನಲ್ಲಿ ಕೇವಲ 10 ರನ್​ ನೀಡಿ, ಭಾರತಕ್ಕೆ 2 ರನ್​ಗಳ ಜಯ ತಂದುಕೊಟ್ಟರು. ಹೀಗಾಗಿ ಪಂದ್ಯ ಮುಗಿದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಬಳಿ ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಹಾರ್ದಿಕ್, ತನ್ನ ಉತ್ತರದಿಂದ ಭವಿಷ್ಯದ ಟೀಂ ಇಂಡಿಯಾದ ಟಿ20 ತಂಡಕ್ಕೆ ಇವರೇ ಸೂಕ್ತ ನಾಯಕ ಎಂಬುದನ್ನು ಸಾಭೀತುಪಡಿಸಿದರು.

ಕೆಲವು ಪಂದ್ಯಗಳನ್ನು ಸೋತರು ಪರವಾಗಿಲ್ಲ

ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ ಪಾಂಡ್ಯ, ‘ನನ್ನ ಈ ರೀತಿಯ ನಿರ್ಧಾರಗಳಿಂದ ಒಂದೆರಡು ಪಂದ್ಯಗಳನ್ನು ಸೋತರು ಪರವಾಗಿಲ್ಲ. ಆದರೆ ಎಲ್ಲ ಒತ್ತಡದ ಸಂದರ್ಭಗಳಲ್ಲಿ ಆಡುವಂತೆ ನಮ್ಮ ತಂಡವನ್ನು ಸಿದ್ಧಪಡಿಸುವುದೆ ನನ್ನ ಗುರಿಯಾಗಿದೆ. ಇಂತಹ ಪಂದ್ಯಗಳಲ್ಲಿ ಈ ರೀತಿಯ ಸಂದರ್ಭಗಳನ್ನು ಎದುರಿಸುವುದು ನಮಗೆ ಮುಂದೆ ದೊಡ್ಡ ಪಂದ್ಯಗಳಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಮುಂದಿನ ಬಿಗ್ ಈವೆಂಟ್​ಗಳಲ್ಲಿ ಸಿದ್ದರಾಗಲು ದ್ವಿಪಕ್ಷಿಯ ಸರಣಿಗಳು ಉತ್ತಮ ಅವಕಾಶವಾಗಿವೆ. ಹೀಗಾಗಿ ಇಲ್ಲಿ ಕೆಲವು ಪಂದ್ಯಗಳನ್ನು ಸೋತರು ಪರವಾಗಿಲ್ಲ. ನಮಗೆ ಮುಂದಿನ ದೊಡ್ಡ ಪಂದ್ಯಾವಳಿಗಳಿಗೆ ಸಿದ್ಧವಾಗುವುದು ಮುಖ್ಯ ಎಂದಿದ್ದಾರೆ’.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:35 am, Wed, 4 January 23