IND vs WI 3rd ODI: ಭಾರತ-ವಿಂಡೀಸ್ ನಡುವಣ ಮೂರನೇ ಏಕದಿನ ಪಂದ್ಯ ನಡೆಯುವುದು ಅನುಮಾನ
IND vs WI 3rd ODI Weather Report: ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾಗೆ ಮೂರನೇ ಪಂದ್ಯ ಔಪಚಾರಿಕ ಎಂಬುದು ಇಲ್ಲಿ ವಿಶೇಷ. ಏಕೆಂದರೆ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಮೊದಲ 2 ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ.
ಭಾರತ-ವೆಸ್ಟ್ ಇಂಡೀಸ್ (IND vs WI 3rd ODI) ನಡುವಣ 3ನೇ ಏಕದಿನ ಪಂದ್ಯವು ಇಂದು ನಡೆಯಬೇಕಿದೆ. ಶಿಖರ್ ಧವನ್ ನಾಯಕತ್ವದಲ್ಲಿ ಭಾರತ ತಂಡವು 3 ಪಂದ್ಯಗಳ ಸರಣಿಯ ಮೊದಲ ಎರಡು ಮ್ಯಾಚ್ಗಳನ್ನು ಗೆಲ್ಲುವ ಮೂಲಕ 2-0 ಮುನ್ನಡೆ ಸಾಧಿಸಿದೆ. ಇದೀಗ ಮೂರನೇ ಪಂದ್ಯವನ್ನೂ ಗೆಲ್ಲುವ ಮೂಲಕ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ. ಆದರೆ, ಮೂರನೇ ಏಕದಿನ ಪಂದ್ಯದ ವೇಳೆ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ವರುಣನು ಟೀಮ್ ಇಂಡಿಯಾದ ಕ್ಲೀನ್ ಸ್ವೀಪ್ ಕನಸಿಗೆ ಅಡ್ಡಿಯಾಗಬಹುದು.
ಮೂರನೇ ಪಂದ್ಯ ನಡೆಯಲಿರುವ ಪೋರ್ಟ್ ಆಫ್ ಸ್ಪೇನ್ನ ಹವಾಮಾನ ಪರಿಸ್ಥಿತಿ ಬಗ್ಗೆ ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಇನ್ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯಂತೆ ಮೂರನೇ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ರವೀಂದ್ರ ಜಡೇಜಾ ಕ್ರೀಡಾಂಗಣದ ವೀಡಿಯೊವನ್ನು ಹಂಚಿಕೊಂಡಿದ್ದು, ಜೋರಾಗಿ ಮಳೆಯಾಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಅಷ್ಟೇ ಅಲ್ಲದೆ ಮೈದಾನವನ್ನು ಸಂಪೂರ್ಣವಾಗಿ ಕವರ್‌ಗಳಿಂದ ಮುಚ್ಚಲಾಗಿದೆ. ಇದರಿಂದಾಗಿ ಭಾರತ ತಂಡದ ನೆಟ್ ಸೆಷನ್ ಸಹ ರದ್ದಾಗಿದೆ. ಹೀಗಾಗಿ ಮೂರನೇ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಅಭ್ಯಾಸ ನಡೆಸಲಾಗಲಿಲ್ಲ. ಅಂದರೆ ಬಿಡುವಿಲ್ಲದೆ ಮಳೆಯಾಗುತ್ತಿದೆ ಎಂಬುದನ್ನು ರವೀಂದ್ರ ಜಡೇಜಾ ತಿಳಿಸಿದ್ದಾರೆ. ಹೀಗಾಗಿಯೇ 3ನೇ ಏಕದಿನ ಪಂದ್ಯವು ಮಳೆಯ ಕಾರಣ ರದ್ದಾಗುವ ಸಾಧ್ಯತೆಯಿದೆ. ಹಾಗೆಯೇ ಟಿ20 ಸರಣಿಗಾಗಿ ಟ್ರಿನಿಡಾಟ್ ತಲುಪಿರುವ ಕುಲ್ದೀಪ್ ಯಾದವ್ ಕೂಡ ಹೊಟೇಲ್ ಕೊಠಡಿಯಿಂದ ವಿಡಿಯೋ ಹಂಚಿಕೊಂಡಿದ್ದು, ಈ ವಿಡಿಯೋದಲ್ಲೂ ಭಾರೀ ಮಳೆಯಾಗುತ್ತಿರುವುದು ಕಾಣಬಹುದು.
ಇನ್ನು ಅಕ್ಯುವೆದರ್ ವರದಿಯ ಪ್ರಕಾರ, ಬುಧವಾರದಂದು ಪೋರ್ಟ್ ಆಫ್ ಸ್ಪೇನ್‌ನಲ್ಲಿ ಮಳೆ ಸಾಧ್ಯತೆ ಶೇಕಡಾ 80 ಕ್ಕಿಂತ ಹೆಚ್ಚಿದೆ. ಅಂದರೆ 5 ಮಿ.ಮೀ ಗಿಂತ ಹೆಚ್ಚು ಮಳೆಯಾಗಬಹುದು ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲದೆ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗಲಿದೆ ಎಂದು ವರದಿ ಹೇಳಿದೆ. ಹೀಗಾಗಿ ಪಂದ್ಯ ನಡೆಯುವ ನಿರೀಕ್ಷೆ ಕಡಿಮೆ. ಇದಾಗ್ಯೂ ಮಳೆಯ ಅಡ್ಡಿಯ ನಡುವೆ ಓವರ್ ಕಡಿತದೊಂದಿಗೆ ಪಂದ್ಯ ನಡೆದರೆ ಬೌಲರ್ಗಳಿಗೆ ಹೆಚ್ಚಿನ ಸಹಕಾರಿಯಾಗಲಿದೆ.
ಮತ್ತೊಂದೆಡೆ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾಗೆ ಮೂರನೇ ಪಂದ್ಯ ಔಪಚಾರಿಕ ಎಂಬುದು ಇಲ್ಲಿ ವಿಶೇಷ. ಏಕೆಂದರೆ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಮೊದಲ 2 ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ. ಹೀಗಾಗಿ ಮೂರನೇ ಪಂದ್ಯವು ಮಳೆಯ ಕಾರಣ ರದ್ದಾದರೂ ಸರಣಿ ಟೀಮ್ ಇಂಡಿಯಾ ಪಾಲಾಗಲಿದೆ.
ಭಾರತ ಏಕದಿನ ತಂಡ ಹೀಗಿದೆ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ವೆಸ್ಟ್ ಇಂಡೀಸ್ ಏಕದಿನ ತಂಡ ಹೀಗಿದೆ: ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಮ್ರಾ ಬ್ರೂಕ್ಸ್, ಕೆಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೈಯರ್ಸ್, ಗುಡಕೇಶ್ ಮೋತಿ, ಕೀಮೋ ಪಾಲ್, ರೋವ್‌ಮನ್ ಪೊವೆಲ್ ಮತ್ತು ಜೇಡನ್ ಸೀಲ್ಸ್.
ಮೀಸಲು ಆಟಗಾರರು: ರೊಮಾರಿಯೊ ಶೆಫರ್ಡ್, ಹೇಡನ್ ವಾಲ್ಷ್ ಜೂನಿಯರ್.