KL Rahul: ಅಮೆರಿಕದಲ್ಲಿ ಕಣಕ್ಕಿಳಿಯಲಿದ್ದಾರಾ ಕೆಎಲ್ ರಾಹುಲ್..?
Team India T20 Squad: ಟಿ20 ಸರಣಿಗೆ ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್.
ಟೀಮ್ ಇಂಡಿಯಾದ (Team India) ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ತಂಡಕ್ಕೆ ಕಂಬ್ಯಾಕ್ ಮಾಡುವುದು ಯಾವಾಗ ಎಂಬುದೇ ಈಗ ದೊಡ್ಡ ಪ್ರಶ್ನೆ. ಏಕೆಂದರೆ ಸೌತ್ ಆಫ್ರಿಕಾ ವಿರುದ್ದದ ಸರಣಿಯ ವೇಳೆ ತೊಡೆ ಸಂದು ಗಾಯದ ಸಮಸ್ಯೆಯ ಕಾರಣ ಕೆಎಲ್ಆರ್ ಹೊರಗುಳಿದಿದ್ದರು. ಇದರೊಂದಿಗೆ ಟಿ20 ತಂಡದ ನಾಯಕರಾಗಿ ಪಾದರ್ಪಣೆ ಮಾಡುವ ಅವಕಾಶ ಕೂಡ ಕೈತಪ್ಪಿತ್ತು. ಆ ಬಳಿಕ ಗಾಯದ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ಜರ್ಮನಿಗೆ ತೆರಳಿದ್ದರು. ಅಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಾರಣ ಇಂಗ್ಲೆಂಡ್ ವಿರುದ್ದದ ಸರಣಿಯಿಂದ ಹೊರಗುಳಿಯಬೇಕಾಯಿತು.
ಇದಾದ ಬಳಿಕ ವಿಶ್ರಾಂತಿ ಕಾರಣ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಿಂದ ಹೊರಗುಳಿದ್ದರು. ಇದಾಗ್ಯೂ ವಿಂಡೀಸ್ ವಿರುದ್ದದ ಟಿ20 ಸರಣಿಗೆ ಕೆಎಲ್ ರಾಹುಲ್ ಆಯ್ಕೆಯಾಗಿದ್ದರು. ಆದರೆ ಅದಕ್ಕೂ ಮುನ್ನ ಫಿಟ್ನೆಸ್ ಸಾಬೀತುಪಡಿಸುವಂತೆ ಬಿಸಿಸಿಐ ಆಯ್ಕೆ ಸಮಿತಿ ತಿಳಿಸಿತ್ತು. ಹೀಗಾಗಿಯೇ ಕಳೆದ ಒಂದು ವಾರದಿಂದ ಕೆಎಲ್ ರಾಹುಲ್ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು.
ಇನ್ನೇನು ಫಿಟ್ನೆಸ್ ಸಾಬೀತುಪಡಿಸಿ ವೆಸ್ಟ್ ಇಂಡೀಸ್ಗೆ ಪ್ರಯಾಣ ಬೆಳೆಸಲಿದ್ದಾರೆ ಅನ್ನುವಷ್ಟರಲ್ಲಿ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಐಸೋಲೇಷನ್ಗೆ ಒಳಗಾಗಬೇಕಾಯಿತು. ಅದರಂತೆ ಇಂದು ಕೆಎಲ್ ರಾಹುಲ್ ಅವರ ಐಸೋಲೇಷನ್ ಅವಧಿ ಮುಗಿಯಲಿದೆ. ಆದರೆ ಮತ್ತೊಂದೆಡೆ ವೆಸ್ಟ್ ಇಂಡೀಸ್ ವಿರುದ್ದದದ ಟಿ20 ಸರಣಿ ಜುಲೈ 29 ರಿಂದ ಶುರುವಾಗಲಿದೆ.
ಅಂದರೆ ಐಸೋಲೇಷನ್ನಿಂದ ಹೊರಬಂದರೂ ಕೆಎಲ್ ರಾಹುಲ್ ಫಿಟ್ನೆಸ್ ಸಾಬೀತುಪಡಿಸುವಷ್ಟರಲ್ಲಿ ಮೊದಲ ಎರಡು ಪಂದ್ಯಗಳು ಮುಗಿದಿರಲಿದೆ. ಇನ್ನು ಮೂರನೇ ಪಂದ್ಯದ ವೇಳೆ ತಂಡವನ್ನು ಕೂಡಿಕೊಂಡರೂ ಆಡುವುದು ಅನುಮಾನ. ಹೀಗಾಗಿ ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.
ಇನ್ನು ಕೊನೆಯ 2 ಪಂದ್ಯಗಳಲ್ಲಿ ಆಡಲಿದ್ದಾರಾ ಎಂಬುದು ಇಂದು ನಿರ್ಧಾರವಾಗಲಿದೆ. ಒಂದು ವೇಳೆ ಕೊರೋನಾ ಟೆಸ್ಟ್ನಲ್ಲಿ ನೆಗೆಟಿವ್ ಬಂದರೆ ಮಾತ್ರ ಬಿಸಿಸಿಐ ಅಂತಿಮ 2 ಪಂದ್ಯಗಳಲ್ಲಿ ಅವಕಾಶ ನೀಡಲಿದೆ. ಹೀಗೆ ಅವಕಾಶ ಸಿಕ್ಕರೆ ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ಬದಲಿಗೆ ಅಮೆರಿಕಗೆ ತೆರಳಲಿದ್ದಾರೆ. ಏಕೆಂದರೆ ವಿಂಡೀಸ್ ವಿರುದ್ದದ ಅಂತಿಮ 2 ಟಿ20 ಪಂದ್ಯಗಳು ಯುಎಸ್ಎನಲ್ಲಿ ನಡೆಯಲಿದೆ.
ಮೊದಲ ಮೂರು ಟಿ20 ಪಂದ್ಯಗಳನ್ನು ವೆಸ್ಟ್ ಇಂಡೀಸ್ನ ಟ್ರಿನಿಡಾಡ್ ಮತ್ತು ಸೇಂಟ್ ಕಿಟ್ಸ್‌ನಲ್ಲಿ ಆಡಲಾಗುತ್ತದೆ. ಇದಾದ ಬಳಿಕ ಸರಣಿಯ ಕೊನೆಯ ಎರಡು ಟಿ20 ಪಂದ್ಯಗಳು ಅಮೆರಿಕದ ಫ್ಲೋರಿಡಾದ ಲೌಡರ್ಹಿಲ್ನಲ್ಲಿ ನಡೆಯಲಿದೆ. ಅದರಂತೆ ಕೆಎಲ್ ರಾಹುಲ್ ಅಂತಿಮ 2 ಪಂದ್ಯವಾಡಲು ಅಮೆರಿಕಗೆ ತೆರಳುವ ಸಾಧ್ಯತೆಯಿದೆ.
ಇಲ್ಲಿ ಮತ್ತೊಂದು ಇಂಟ್ರೆಷ್ಟಿಂಗ್ ವಿಷಯ ಎಂದರೆ ಕೆಎಲ್ ರಾಹುಲ್ ಈ ಹಿಂದೆ ಲೌಡರ್ಹಿಲ್ ಮೈದಾನದಲ್ಲಿ ಅಬ್ಬರಿಸಿ ಬೊಬ್ಬರಿದಿದ್ದಾರೆ ಎನ್ನುವುದು. ಅಂದರೆ 2016 ರಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ದ ಅಮೆರಿಕದ ಲೌಡರ್ಹಿಲ್ನಲ್ಲಿ ಕೇವಲ 51 ಎಸೆತಗಳಲ್ಲಿ 5 ಸಿಕ್ಸ್, 11 ಫೋರ್ಗಳೊಂದಿಗೆ ಅಜೇಯ 110 ರನ್ ಚಚ್ಚಿದ್ದರು. ಇದಾಗ್ಯೂ ವೆಸ್ಟ್ ಇಂಡೀಸ್ ನೀಡಿದ 245 ರನ್ಗಳ ಟಾರ್ಗೆಟ್ ಬೆನ್ನತ್ತಿ ಟೀಮ್ ಇಂಡಿಯಾ ಕೇವಲ 1 ರನ್ಗಳಿಂದ ಸೋಲೊಪ್ಪಿಕೊಂಡಿತ್ತು. ಇದೀಗ ಶತಕ ಸಿಡಿಸಿ ಮಿಂಚಿದ್ದ ಅದೇ ಮೈದಾನದ ಮೂಲಕ ಕೆಎಲ್ ರಾಹುಲ್ ಮತ್ತೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ.
ಟಿ20 ಸರಣಿಗೆ ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಕೆಎಲ್ ರಾಹುಲ್, ದಿನೇಶ್ ಕುಮಾರ್, ಕೆಎಲ್ ರಾಹುಲ್ , ರಿಷಬ್ ಪಂತ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಹರ್ಷಲ್ ಪಟೇಲ್.
ಟಿ20 ಸರಣಿ ವೇಳಾಪಟ್ಟಿ:
- ಜುಲೈ 29 – ಮೊದಲ ಟಿ20 ಪಂದ್ಯ (ಲಾರಾ ಕ್ರಿಕೆಟ್ ಸ್ಟೇಡಿಯಂ)
- ಆಗಸ್ಟ್ 1- 2ನೇ ಟಿ20 ಪಂದ್ಯ (ವಾರ್ನರ್ ಪಾರ್ಕ್ ಸ್ಟೇಡಿಯಂ)
- ಆಗಸ್ಟ್ 2- 3ನೇ ಟಿ20 ಪಂದ್ಯ (ವಾರ್ನರ್ ಪಾರ್ಕ್)
- ಆಗಸ್ಟ್ 6- 4ನೇ ಟಿ20 ಪಂದ್ಯ (ಲೌಡರ್ಹಿಲ್ ಸ್ಟೇಡಿಯಂ)
- ಆಗಸ್ಟ್ 7- 5ನೇ ಟಿ20 ಪಂದ್ಯ (ಲೌಡರ್ಹಿಲ್ ಸ್ಟೇಡಿಯಂ)