ಆರಂಭವಾಗದ ಭಾರತ- ವಿಂಡೀಸ್ ಪಂದ್ಯ; 5 ಓವರ್ಗಳ ಪಂದ್ಯಕ್ಕೆ ಕಟ್ಆಫ್ ಸಮಯ ಎಷ್ಟು?
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಭಾರತ-ವೆಸ್ಟ್ ಇಂಡೀಸ್ T20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಟಾಸ್ ವಿಳಂಬವಾಗಿದೆ. ಪಂದ್ಯದ ಆರಂಭ ಅನಿಶ್ಚಿತವಾಗಿದ್ದು, ಓವರ್ಗಳನ್ನು ಕಡಿತಗೊಳಿಸಿ ಪಂದ್ಯ ನಡೆಸುವ ಸಾಧ್ಯತೆ ಇದೆ. ಫಲಿತಾಂಶ ನಿರ್ಧಾರಕ್ಕೆ ಕನಿಷ್ಠ 5 ಓವರ್ಗಳ ಆಟ ಅನಿವಾರ್ಯ. ರಾತ್ರಿ 9:41ರೊಳಗೆ ಪಂದ್ಯ ಆರಂಭವಾಗದಿದ್ದರೆ ರದ್ದಾಗುವ ಸಾಧ್ಯತೆಯಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂತಿಮ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಇದರಿಂದಾಗಿ ಟಾಸ್ ಕೂಡ ವಿಳಂಬವಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಾಗಿರುವ ಈ ಪಂದ್ಯ ನಿಗದಿತ ಸಮಯದ ಪ್ರಕಾರ, ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಮಳೆಯಿಂದಾಗಿ ಇದುವರೆಗೂ ಪಂದ್ಯದ ಟಾಸ್ ಕೂಡ ನಡೆದಿಲ್ಲ. ಹೀಗಾಗಿ ಪಂದ್ಯ ನಡೆಯುವುದು ಅನುಮಾನ ಎನ್ನಬಹುದು. ಆದಾಗ್ಯೂ ಮಳೆ ನಿಂತು ಆಟಕ್ಕೆ ಅನುವು ಮಾಡಿಕೊಟ್ಟರೆ, ಓವರ್ಗಳನ್ನು ಕಡಿಮೆ ಮಾಡಿ ಪಂದ್ಯವನ್ನು ಆಯೋಜಿಸಬಹುದು. ಹಾಗಿದ್ದರೆ, ಈ ಪಂದ್ಯದ ಫಲಿತಾಂಶ ಹೊರಬೀಳಲು ಉಭಯ ತಂಡಗಳು ಕನಿಷ್ಠ ಎಷ್ಟು ಓವರ್ಗಳ ಆಟವನ್ನು ಆಡಬೇಕು? ಆ ಓವರ್ಗಳ ಕಟ್ ಆಫ್ ಸಮಯ ಎಷ್ಟು? ಎಂಬುದರ ವಿವರವನ್ನು ನೋಡುವುದಾದರೆ..
ಓವರ್ಗಳ ಕಡಿತ ಆರಂಭ
ಪ್ರಸ್ತುತ ಬೆಂಗಳೂರಿನಲ್ಲಿ ಮಳೆ ಮುಂದುವರಿದಿದ್ದು, ಪಂದ್ಯವು ಸರಿಯಾದ ಸಮಯಕ್ಕೆ ಪ್ರಾರಂಭವಾಗಿಲ್ಲ. ಹೀಗಾಗಿ ಪಂದ್ಯ ಆರಂಭದ ನಿಗದಿತ ಸಮಯಕ್ಕಿಂತ ಅರ್ಧ ಗಂಟೆಯ ನಂತರ, ಅಂದರೆ ಸಂಜೆ 7:30 ರಿಂದ ಓವರ್ಗಳನ್ನು ಕಡಿಮೆ ಮಾಡಲಾಗುವುದು. ಇದರರ್ಥ ಪಂದ್ಯವು ಸಂಜೆ 7:30 ರ ನಂತರ ಪ್ರಾರಂಭವಾದರೆ ಪೂರ್ಣ 20 ಓವರ್ಗಳ ಪಂದ್ಯದ ಬದಲು ಪಂದ್ಯ ಆರಂಭವಾದ ಸಮಯಕ್ಕೆ ಅನುಗುಣವಾಗಿ ಓವರ್ಗಳನ್ನು ಕಡಿತಗೊಳಿಸಿ ಪಂದ್ಯವನ್ನು ನಡೆಸಲಾಗುತ್ತದೆ.
ಕನಿಷ್ಠ ಐದು ಓವರ್ಗಳ ಆಟ
ಅಲ್ಲದೆ ಟಿ20 ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಉಭಯ ತಂಡಗಳು ಕನಿಷ್ಠ ಐದು ಓವರ್ಗಳ ಆಟವನ್ನಾದರೂ ಆಡಬೇಕು. ಇದಕ್ಕೆ ಮಳೆ ಅನುವು ಮಾಡಿಕೊಟ್ಟರೆ, ಪಂದ್ಯದ ಫಲಿತಾಂಶ ಖಚಿತವಾಗಿ ಹೊರಬೀಳಲಿದೆ. ಆದರೆ ಮಳೆ ಇದಕ್ಕೂ ಅಡ್ಡಿಪಡಿಸಿದರೆ, ಪಂದ್ಯವನ್ನು ರದ್ದಾಗೊಳಿಸಲಾಗುತ್ತದೆ. ಇನ್ನು ಕನಿಷ್ಠ ಐದು ಓವರ್ಗಳ ಪಂದ್ಯವನ್ನು ಆಡಿಸಲು ಕಟ್-ಆಫ್ ಸಮಯ ರಾತ್ರಿ 9:41 ಆಗಿದೆ. ಇದರರ್ಥ ಪಂದ್ಯವು ಈ ಸಮಯದೊಳಗೆ ಪ್ರಾರಂಭವಾಗಬೇಕು. ಇದು ಸಾಧ್ಯವಾಗದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ.
ಇದನ್ನೂ ಓದಿ: ಭಾರತ- ವಿಂಡೀಸ್ 5ನೇ ಟಿ20 ಪಂದ್ಯ ರದ್ದಾದರೆ ಯಾರಿಗೆ ಸರಣಿ ವಿಜೇತ ಪಟ್ಟ?
ಮುಖಾಮುಖಿ ದಾಖಲೆ
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇಲ್ಲಿಯವರೆಗೆ 35 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಇವುಗಳಲ್ಲಿ ಭಾರತ 22 ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್ 12 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಎರಡೂ ತಂಡಗಳು ಭಾರತದಲ್ಲಿ 15 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಭಾರತ 11 ಮತ್ತು ವೆಸ್ಟ್ ಇಂಡೀಸ್ 4 ಪಂದ್ಯಗಳನ್ನು ಗೆದ್ದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 pm, Sat, 17 October 26




