
ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದ ಹೊರತಾಗಿಯೂ ಈ ಪಂದ್ಯ ಸುದ್ದಿಯಲ್ಲಿರುವುದು ಟೀಮ್ ಇಂಡಿಯಾದ ಉಪನಾಯಕ ತಿಲಕ್ ವರ್ಮಾ ಅವರ ಬೇಜವಾಬ್ದಾರಿತನದ ರನೌಟ್ನಿಂದ. ಅಂದರೆ ಈ ಪಂದ್ಯದಲ್ಲಿ ತಿಲಕ್ ವರ್ಮಾ ಮೈಮರೆತು ವಿಕೆಟ್ ಒಪ್ಪಿಸುವ ಮೂಲಕ ಪೆವಿಲಿಯನ್ ಸೇರಿದ್ದರು.
ಭಾರತದ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ ವೆಸ್ಟ್ ಇಂಡೀಸ್ ಸ್ಪಿನ್ನರ್ ಗುಡಕೇಶ್ ಮೋಟಿ ಎಸೆದ ಲೋ-ಫುಲ್ ಟಾಸ್ ಚೆಂಡನ್ನು ಅಕ್ಷರ್ ಪಟೇಲ್ ಲೆಗ್ ಸೈಡ್‌ನತ್ತ ಬಲವಾಗಿ ಫ್ಲಿಕ್ ಮಾಡಿದರು.
ಚೆಂಡು ಬೌಂಡರಿ ಲೈನ್ನತ್ತ ವೇಗವಾಗಿ ಹೋದದ್ದನ್ನು ನೋಡಿ, ಅದು ಬೌಂಡರಿ ಲೈನ್ ದಾಟಿದೆ ಎಂದು ಇಬ್ಬರೂ ಬ್ಯಾಟರ್‌ಗಳು ಭಾವಿಸಿದರು. ಆ ಬಳಿಕ ಚೆಂಡನ್ನು ಗಮನಿಸುವುದನ್ನು ಬಿಟ್ಟು ತಿಲಕ್ ವರ್ಮಾ ಮತ್ತು ಅಕ್ಷರ್ ಪಟೇಲ್ ಪಿಚ್‌ನ ಮಧ್ಯದಲ್ಲೇ ಭೇಟಿಯಾಗಿ, ಪರಸ್ಪರ ಗ್ಲೌಸ್ ಪಂಚ್ ಮಾಡಿ ಕ್ರೀಸ್ಗೆ ಹಿಂತಿರುಗಿದರು.
ಆದರೆ ಅಲ್ಲಿ ನಡೆದಿದ್ದೇ ಬೇರೆ. ಬೌಂಡರಿ ಲೈನ್ ಬಳಿ ಇದ್ದ ಫೀಲ್ಡರ್ ಕಮಿಲ್ ಪೂರನ್ ಅದ್ಭುತವಾಗಿ ಡೈವ್ ಮಾಡಿ ಚೆಂಡನ್ನು ಬೌಂಡರಿ ಗೆರೆ ದಾಟದಂತೆ ತಡೆದಿದ್ದರು.
ಇದನ್ನು ತಡವಾಗಿ ಗಮನಿಸಿದ ಅಕ್ಷರ್ ಪಟೇಲ್ ಹೇಗೋ ಓಡಿ ಬಂದು ತಮ್ಮ ಕ್ರೀಸ್ ತಲುಪಿದರು. ಆದರೆ ತಿಲಕ್ ವರ್ಮಾಗೆ ತಾವು ಕ್ರೀಸ್‌ನಿಂದ ಹೊರಗಿದ್ದೇವೆ ಎಂಬ ಅರಿವೇ ಇರಲಿಲ್ಲ. ಅಷ್ಟರಲ್ಲೇ ಕೀಪರ್ ಶಾಯ್ ಹೋಪ್ ಕಳುಹಿಸಿದ ಥ್ರೋ ಅನ್ನು ಪಡೆದ ಬೌಲರ್ ಮೋಟಿ ಬೆಲ್ಸ್ ಹಾರಿಸಿದರು.
ಟಿವಿ ಅಂಪೈರ್ ಪರಿಶೀಲಿಸಿದಾಗ ಕಮಿಲ್ ಪೂರನ್ ಅವರ ಫೀಲ್ಡಿಂಗ್ ಕ್ಲೀನ್ ಆಗಿರುವುದು ಮತ್ತು ತಿಲಕ್ ವರ್ಮಾ ಕ್ರೀಸ್‌ನಿಂದ ಬಹಳ ದೂರ ಇರುವುದು ಸ್ಪಷ್ಟವಾಗಿ ಕಂಡುಬಂದಿದ್ದರಿಂದ ಅವರನ್ನು ಔಟ್ ಎಂದು ಘೋಷಿಸಲಾಯಿತು. ಇದೀಗ ಈ ರನೌಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
𝐖𝐀𝐈𝐓, 𝐖𝐇𝐀𝐓 𝐉𝐔𝐒𝐓 𝐇𝐀𝐏𝐏𝐄𝐍𝐄𝐃?! 🤯
A near-boundary save turns into a run-out as the West Indies catch Tilak Varma short of his crease!
#INDvWI 3rd T20I | LIVE NOW 👉 https://t.co/GmwwFjql5J https://t.co/plCeyKV5SE
— Star Sports (@StarSportsIndia) October 11, 2026
ಇದನ್ನೂ ಓದಿ: ನಮ್ಮ ಸೋಲಿಗೆ ಹವಾಮಾನ ಕೂಡ ಒಂದು ಕಾರಣ: ಶಾಯ್ ಹೋಪ್!
ತಿಲಕ್ ವರ್ಮಾ ಅವರ ಈ ಎಡವಟ್ಟಿನ ಹೊರತಾಗಿಯೂ, ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಸ್ಫೋಟಕ 69 ರನ್ (30 ಎಸೆತ) ಗಳ ನೆರವಿನಿಂದ ಭಾರತ ತಂಡ 20 ಓವರ್‌ಗಳಲ್ಲಿ 223 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಬಳಿಕ ಶಿಸ್ತುಬದ್ಧ ದಾಳಿ ನಡೆಸಿದ ಭಾರತೀಯ ಬೌಲರ್‌ಗಳು, ವೆಸ್ಟ್ ಇಂಡೀಸ್ ತಂಡವನ್ನು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 209 ರನ್‌ಗಳಿಗೆ ನಿಯಂತ್ರಿಸಿದರು. ಈ ಮೂಲಕ ಟೀಮ್ ಇಂಡಿಯಾ 14 ರನ್‌ಗಳ ರೋಚಕ ಜಯ ಸಾಧಿಸಿತು.