IND vs ZIM: ಗಂಭೀರ್ ಅಲ್ಲ…; ಈ ಸರಣಿಗೆ ಲಕ್ಷ್ಮಣ್ ಟೀಂ ಇಂಡಿಯಾದ ಹೆಡ್ ಕೋಚ್
IND vs ZIM: ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದ ಮುಖ್ಯ ಕೋಚ್ ಪಾತ್ರದಲ್ಲಿ ವಿವಿಎಸ್ ಲಕ್ಷ್ಮಣ್ ಕಾಣಿಸಿಕೊಳ್ಳಲಿದ್ದಾರೆ. ಗಂಭೀರ್ ಕೋಚ್ ಆಗಿ ಶ್ರೀಲಂಕಾ ಪ್ರವಾಸದ ಮೂಲಕ ತಮ್ಮ ಕಾರ್ಯಾರಂಭ ಮಾಡಲಿದ್ದಾರೆ. ಭಾರತದ ಶ್ರೀಲಂಕಾ ಪ್ರವಾಸವು ಜುಲೈ 27 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ ಮೊದಲ ವಾರದವರೆಗೆ ಮುಂದುವರಿಯುವ ಸಾಧ್ಯತೆಯಿದೆ.

ಟಿ20 ವಿಶ್ವಕಪ್ (T20 World Cup 2024) ಮುಕ್ತಾಯದೊಂದಿಗೆ ಪ್ರಸ್ತುತ ಟೀಂ ಇಂಡಿಯಾದ (Team India) ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಅಧಿಕಾರಾವಧಿಯು ಕೊನೆಗೊಳ್ಳುತ್ತಿದೆ. ವರದಿಯ ಪ್ರಕಾರ, ಮುಖ್ಯ ಕೋಚ್ ರೇಸ್‌ನಲ್ಲಿ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ಹೆಸರು ಮುಂಚೂಣಿಯಲ್ಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗಂಭೀರ್ ಅವರ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡಿದ್ದು, ಅವರನ್ನೇ ಮುಂದಿನ ಮುಖ್ಯ ಕೋಚ್ ಆಗಿ ಆಯ್ಕೆ ಮಾಡುವುದು ಬಹುತೇಕ ಖಚಿತಗೊಂಡಿದೆ. ಆದರೆ ಈ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಸಿಕ್ಕಿರುವ ಮಾಹಿತಿ ಪ್ರಕಾರ ಭಾರತದ ಜಿಂಬಾಬ್ವೆ ಪ್ರವಾಸಕ್ಕೆ ಗಂಭೀರ್ ತಂಡದೊಂದಿಗೆ ತೆರಳುವ ಸಾಧ್ಯತೆ ಕಡಿಮೆ ಇದ್ದು, ವಿವಿಎಸ್ ಲಕ್ಷ್ಮಣ್ (VVS Laxman) ಈ ಪ್ರವಾಸದಲ್ಲಿ ತಂಡದ ಮುಖ್ಯ ಕೋಚ್ ಆಗಿರಲಿದ್ದಾರೆ ಎಂದು ವರದಿ ಇದೆ.
ಗಂಭೀರ್ ಸಾರಥ್ಯ ಯಾವಾಗ?
ವಾಸ್ತವವಾಗಿ ಭಾರತದ ಜಿಂಬಾಬ್ವೆ ಪ್ರವಾಸ ಜುಲೈ 6 ರಿಂದ ಆರಂಭವಾಗಲಿದ್ದು, ಉಭಯ ದೇಶಗಳ ನಡುವೆ ಐದು ಟಿ20 ಪಂದ್ಯಗಳು ನಡೆಯಲಿವೆ. ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದ ಮುಖ್ಯ ಕೋಚ್ ಪಾತ್ರದಲ್ಲಿ ವಿವಿಎಸ್ ಲಕ್ಷ್ಮಣ್ ಕಾಣಿಸಿಕೊಳ್ಳಲಿದ್ದಾರೆ. ಗಂಭೀರ್ ಕೋಚ್ ಆಗಿ ಶ್ರೀಲಂಕಾ ಪ್ರವಾಸದ ಮೂಲಕ ತಮ್ಮ ಕಾರ್ಯಾರಂಭ ಮಾಡಲಿದ್ದಾರೆ. ಭಾರತದ ಶ್ರೀಲಂಕಾ ಪ್ರವಾಸವು ಜುಲೈ 27 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ ಮೊದಲ ವಾರದವರೆಗೆ ಮುಂದುವರಿಯುವ ಸಾಧ್ಯತೆಯಿದೆ.
ಈ ಹಿಂದೆಯೂ ಇದೇ ಸಂಭವಿಸಿತ್ತು
ರಾಹುಲ್ ದ್ರಾವಿಡ್ ವಿರಾಮ ತೆಗೆದುಕೊಂಡಾಗಲೆಲ್ಲಾ ಲಕ್ಷ್ಮಣ್ ಯಾವಾಗಲೂ ಉಸ್ತುವಾರಿ ವಹಿಸುತ್ತಾರೆ. ಹೀಗಾಗಿ ಟಿ20 ವಿಶ್ವಕಪ್ ನಂತರ ತಕ್ಷಣವೇ ನಡೆಯಲಿರುವ ಜಿಂಬಾಬ್ವೆಯಲ್ಲಿ ಅದೇ ಮುಂದುವರಿಯುವ ನಿರೀಕ್ಷೆಯಿದೆ. ವಿವಿಎಸ್ ಲಕ್ಷ್ಮಣ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ನಿರ್ಗಮಿತ ನಿರ್ದೇಶಕರಾಗಿದ್ದಾರೆ. ಅಷ್ಟೇ ಅಲ್ಲ, 19 ವರ್ಷದೊಳಗಿನವರ ಪುರುಷರ ತಂಡದ ಮುಖ್ಯ ಕೋಚ್ ಕೂಡ ಆಗಿದ್ದಾರೆ. 2022 ರ ಅಂಡರ್-19 ವಿಶ್ವಕಪ್ ಅನ್ನು ವಿವಿಎಸ್ ಲಕ್ಷ್ಮಣ್ ಅವರ ಕೋಚಿಂಗ್‌ನಲ್ಲಿ ಯಶ್ ಧುಲ್ ಪಡೆ ಗೆದ್ದಿದೆ.
ವಿವಿಎಸ್ ಲಕ್ಷ್ಮಣ್ ತಮ್ಮ ಎನ್‌ಸಿಎ ಸಿಬ್ಬಂದಿಯೊಂದಿಗೆ ಜಿಂಬಾಬ್ವೆಯಲ್ಲಿ ನಡೆಯಲಿರುವ ಟಿ20 ಸರಣಿಗೆ ಭಾರತ ತಂಡವನ್ನು ಅಂತಿಮಗೊಳಿಸಲಿದ್ದಾರೆ. ಬಿಸಿಸಿಐ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡವನ್ನು ಈ ವಾರದ ಕೊನೆಯಲ್ಲಿ ಪ್ರಕಟಿಸಬಹುದು. ಬಲಗೈ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅಥವಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಈ ಸರಣಿಯಲ್ಲಿ ಮೆನ್ ಇನ್ ಬ್ಲೂ ತಂಡವನ್ನು ಮುನ್ನಡೆಸಬಹುದು.
ಭಾರತದ ಜಿಂಬಾಬ್ವೆ ಪ್ರವಾಸದ ವೇಳಾಪಟ್ಟಿ
- ಜುಲೈ 6 – 1ನೇ ಟಿ20, ಹರಾರೆ
- 7 ಜುಲೈ – 2 ನೇ ಟಿ20, ಹರಾರೆ
- ಜುಲೈ 10 – 3ನೇ ಟಿ20, ಹರಾರೆ
- ಜುಲೈ 13 – 4ನೇ ಟಿ20, ಹರಾರೆ
- ಜುಲೈ 14 – 5 ನೇ ಟಿ20, ಹರಾರೆ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:40 pm, Sat, 22 June 24
