IND vs AFG: ಅಫ್ಘನ್ ಎ ವಿರುದ್ಧ 101 ರನ್​ಗಳಿಂದ ಗೆದ್ದು ಫೈನಲ್​ಗೇರಿದ ಭಾರತ ಎ

India A vs Afghanistan A: ಶ್ರೀಲಂಕಾದ ದಂಬಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ಎ ತಂಡವು ಅಫ್ಘಾನಿಸ್ತಾನ ಎ ತಂಡವನ್ನು 101 ರನ್​ಗಳಿಂದ ಸೋಲಿಸಿತು. ಸತತ ಸೋಲುಗಳ ನಂತರ ಈ ಗೆಲುವು ಭಾರತ ಎ ತಂಡಕ್ಕೆ ಅತಿ ಮುಖ್ಯವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ 319 ರನ್ ಗಳಿಸಿದರೆ, ಅಫ್ಘಾನ್ ಎ 218 ರನ್​ಗಳಿಗೆ ಆಲೌಟ್ ಆಯಿತು. ಈ ಭರ್ಜರಿ ಜಯದೊಂದಿಗೆ ಭಾರತ ಎ ತಂಡ ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ.

IND vs AFG: ಅಫ್ಘನ್ ಎ ವಿರುದ್ಧ 101 ರನ್​ಗಳಿಂದ ಗೆದ್ದು ಫೈನಲ್​ಗೇರಿದ ಭಾರತ ಎ
Ind A Vs Afg A
Image Credit source: BCCI X

Updated on: Jun 17, 2026 | 6:24 PM

ಶ್ರೀಲಂಕಾದ ದಂಬಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ಹಾಗೂ ಭಾರತ ಎ (India A vs Afghanistan A) ತಂಡಗಳು ಮುಖಾಮುಖಿಯಾಗಿದ್ದವು. ಫೈನಲ್​ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಉಭಯ ತಂಡಗಳಿಗೆ ಈ ಪಂದ್ಯದಲ್ಲಿನ ಗೆಲುವು ಅತ್ಯವಶ್ಯಕವಾಗಿತ್ತು. ಅದರಲ್ಲೂ ಸತತ ಎರಡು ಪಂದ್ಯಗಳನ್ನು ಸೋತಿದ್ದ ಭಾರತ ಎ ತಂಡ ಫೈನಲ್ ರೇಸ್​ನಲ್ಲಿ ಉಳಿಯಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಅದರಂತೆ ಈ ನಿರ್ಣಾಯಕ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ಎ ತಂಡ 101 ರನ್​ಗಳಿಂದ ಅಫ್ಘಾನಿಸ್ತಾನ ಎ ತಂಡವನ್ನು ಸೋಲಿಸುವ ಮೂಲಕ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿದ್ದಲ್ಲದೆ ಅಧಿಕೃತವಾಗಿ ಫೈನಲ್​ಗೂ ಟಿಕೆಟ್ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಎ 319 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘನ್ ಎ ಕೇವಲ218 ರನ್​ಗಳಿಗೆ ಆಲೌಟ್ ಆಯಿತು.

ಭಾರತ ಎ ತಂಡಕ್ಕೆ ಭರ್ಜರಿ ಆರಂಭ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ ಭರ್ಜರಿ ಆರಂಭ ಪಡೆಯಿತು. ಯುವ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 58 ರನ್ ಮತ್ತು ವೈಭವ್ ಸೂರ್ಯವಂಶಿ 38 ರನ್ ಬಾರಿಸುವ ಮೂಲಕ ಮೊದಲ ವಿಕೆಟ್‌ಗೆ ಕೇವಲ ಎಂಟು ಓವರ್‌ಗಳಲ್ಲಿ 75 ರನ್‌ಗಳ ಭರ್ಜರಿ ಆರಂಭಿಕ ಪಾಲುದಾರಿಕೆಯನ್ನು ನೀಡಿದರು. ಪ್ರಿಯಾಂಶ್ ತಮ್ಮ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ನಂತರ ನಾಯಕ ತಿಲಕ್ ವರ್ಮಾ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕುಮಾರ್ ಕುಶಾಗ್ರ ಇನ್ನಿಂಗ್ಸ್ ಜವಾಬ್ದಾರಿ ವಹಿಸಿಕೊಂಡು ನಾಲ್ಕನೇ ವಿಕೆಟ್‌ಗೆ 104 ರನ್‌ಗಳ ಅದ್ಭುತ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ವೇಳೆ ತಿಲಕ್ ವರ್ಮಾ 59 ರನ್‌ಗಳ ಕೊಡುಗೆ ನೀಡಿದರೆ, ಕುಮಾರ್ ಕುಶಾಗ್ರ 58 ರನ್‌ಗಳ ಇನ್ನಿಂಗ್ಸ್ ಆಡಿದರು.

ಕೊನೆಯ ಓವರ್‌ಗಳಲ್ಲಿ, ವಿಪ್ರರಾಜ್ ನಿಗಮ್ 20 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 30 ರನ್ ಕಲೆಹಾಕಿದರು. ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ 319 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಇತ್ತ ಅಫ್ಘಾನಿಸ್ತಾನ ಎ ಪರ ಫರಿದೂನ್ ದಾವೂದ್‌ಜೈ, ಅಬ್ದುಲ್ಲಾ ಅಹ್ಮದ್‌ಜೈ ಮತ್ತು ಫರ್ಮಾನುಲ್ಲಾ ಸಫಿ ತಲಾ ಎರಡು ವಿಕೆಟ್ ಪಡೆದರು.

4 ವಿಕೆಟ್ ಪಡೆದ ನಿಶಾಂತ್ ಸಿಂಧು

320 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ‘ಎ’ ತಂಡ ಕಳಪೆ ಆರಂಭ ಪಡೆಯಿತು. ಮೂರನೇ ಓವರ್‌ನಲ್ಲಿ ಯಶ್ ಠಾಕೂರ್ ಭಾರತಕ್ಕೆ ಮೊದಲ ಬ್ರೇಕ್‌ಗ್ರೌಟ್ ನೀಡಿ, ಹಸನ್ ಇಸಾಖಿಲ್ (14) ಅವರನ್ನು ಔಟ್ ಮಾಡಿದರು. ನಂತರ ನಾಯಕ ಇಮ್ರಾನ್ ಮಿರ್ (32) ಮತ್ತು ಖಾಲಿದ್ ತನಿವಾಲ್ (13) ಕೂಡ ಬೇಗನೇ ಔಟ್ ಆದರು. ಈ ಹಂತದಲ್ಲಿ ಜೊತೆಯಾದ ಬಹೀರ್ ಶಾ (57) ಮತ್ತು ಫೈಸಲ್ ಶಿನೋಜಾದಾ (46) ನಾಲ್ಕನೇ ವಿಕೆಟ್‌ಗೆ 87 ರನ್‌ಗಳ ಜೊತೆಯಾಟ ಕಟ್ಟುವ ಮೂಲಕ ಅಫ್ಘಾನಿಸ್ತಾನವನ್ನು ಮತ್ತೆ ಪಂದ್ಯಕ್ಕೆ ಕರೆತರಲು ಪ್ರಯತ್ನಿಸಿದರು.

ತ್ರಿಕೋನ ಸರಣಿಯ 2ನೇ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ; ಎದುರಾಳಿ ಯಾರು? ಪಂದ್ಯ ಎಷ್ಟು ಗಂಟೆಗೆ ಆರಂಭ?

ಆದರೆ ವಿಪ್ರರಾಜ್ ನಿಗಮ್ ಬಹೀರ್ ಶಾ ಅವರನ್ನು ಔಟ್ ಮಾಡುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು. ಈ ವಿಕೆಟ್ ಪತನದ ನಂತರ ಅಫ್ಘಾನ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಭಾರತದ ಯುವ ಸ್ಪಿನ್ನರ್ ನಿಶಾಂತ್ ಸಿಂಧು ಮಾರಕ ಬೌಲಿಂಗ್​ಗೆ ಬೆದರಿದ ಕೆಳ ಕ್ರಮಾಂಕ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿತು. ಅಂತಿಮವಾಗಿ ಅಫ್ಘಾನಿಸ್ತಾನ 36.5 ಓವರ್‌ಗಳಲ್ಲಿ ಕೇವಲ 218 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ನಿಶಾಂತ್ ಸಿಂಧು 6.5 ಓವರ್‌ಗಳಲ್ಲಿ 31 ರನ್‌ಗಳಿಗೆ 4 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Wed, 17 June 26

Follow Us