3ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 3 ಬದಲಾವಣೆ; ವೈಭವ್​ಗೆ ಸಿಗುತ್ತಾ ಅವಕಾಶ?

ಭಾರತ vs ಅಫ್ಘಾನಿಸ್ತಾನ ಮೂರನೇ T20 ಪಂದ್ಯ ಇಂದು ನಡೆಯಲಿದೆ. ಸರಣಿಯನ್ನು ಈಗಾಗಲೇ ಗೆದ್ದಿರುವ ಭಾರತ, ವೈಟ್‌ವಾಶ್ ಸಾಧಿಸಲು ಸಜ್ಜಾಗಿದೆ. ನಾಯಕ ಶ್ರೇಯಸ್ ಅಯ್ಯರ್ ತಂಡದಲ್ಲಿ ಬದಲಾವಣೆಗಳನ್ನು ಸೂಚಿಸಿದ್ದು, ವೈಭವ್ ಸೂರ್ಯವಂಶಿ, ವಾಷಿಂಗ್ಟನ್ ಸುಂದರ್ ಮತ್ತು ಯಶ್ ಠಾಕೂರ್‌ಗೆ ಅಂತಿಮ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಭಾರತದ ಅಂತಿಮ ಪ್ಲೇಯಿಂಗ್ XI ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

3ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 3 ಬದಲಾವಣೆ; ವೈಭವ್​ಗೆ ಸಿಗುತ್ತಾ ಅವಕಾಶ?
ಟೀಂ ಇಂಡಿಯಾ
Image Credit source: BCCI X

Updated on: Sep 17, 2026 | 4:22 PM

2026 ರ ಏಷ್ಯನ್ ಕ್ರೀಡಾಕೂಟಕ್ಕಾಗಿ ಜಪಾನ್‌ಗೆ ತೆರಳುವ ಮೊದಲು ಭಾರತ ತಂಡ ಅಫ್ಘಾನಿಸ್ತಾನ್ ವಿರುದ್ಧ ತನ್ನ ಕೊನೆಯ ಟಿ20 ಪಂದ್ಯವನ್ನು ಇಂದು ಆಡಲಿದೆ. ಶ್ರೇಯಸ್ ಅಯ್ಯರ್ ಪಡೆ, ಈಗಾಗಲೇ ಸತತ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ಕೊನೆಯ ಪಂದ್ಯವನ್ನು ಗೆದ್ದು ಆತಿಥೇಯ ಅಫ್ಘಾನಿಸ್ತಾನ್ ತಂಡವನ್ನು ವೈಟ್ ವಾಶ್ ಮಾಡಲು ನೋಡಲಿದೆ. ಇದರ ಜೊತೆಗೆ ಈಗಾಗಲೇ ಸರಣಿ ಗೆದ್ದಿರುವ ಕಾರಣ, ಮೊದಲೆರಡು ಪಂದ್ಯಗಳಲ್ಲಿ ಬೆಂಚಾ ಕಾದಿದ್ದ ಆಟಗಾರರಿಗೆ ಮೂರನೇ ಟಿ20 ಪಂದ್ಯದಲ್ಲಿ ಆಡುವ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಅದರಲ್ಲೂ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಾದರೂ ಬ್ಯಾಟ್ ಬೀಸುತ್ತಾರಾ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ.

ಬದಲಾವಣೆಯ ಸುಳಿವು ನೀಡಿದ ನಾಯಕ

ಫೈನಲ್ ಪಂದ್ಯಕ್ಕೂ ಮುನ್ನ ತಂಡದಲ್ಲಾಗುವ ಬದಲಾವಣೆಗಳ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿರುವ ಅಯ್ಯರ್, ತಂಡದಲ್ಲಿರುವ ಉಳಿದ ಆಟಗಾರರಿಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ. ಇದರರ್ಥ, ಮೂರನೇ ಟಿ20 ಪಂದ್ಯಕ್ಕೆ ತಂಡದಲ್ಲಿ ಬದಲಾವಣೆಗಳಾಗುವುದು ಖಚಿತವಾದಂತ್ತಾಗಿದೆ. ಆದಾಗ್ಯೂ ತಂಡದಲ್ಲಿ ಎಷ್ಟು ಬದಲಾವಣೆಗಳಿರುತ್ತವೆ, ಯಾರನ್ನು ಹೊರಗಿಡಲಾಗುತ್ತದೆ ಮತ್ತು ಯಾರಿಗೆ ಅವಕಾಶ ಸಿಗುತ್ತದೆ? ಎಂಬುದು ಪ್ರಶ್ನೆಯಾಗಿದೆ.

ಎರಡನೇ ಟಿ20 ಪಂದ್ಯದ ಆಡುವ XI ನೋಡಿದರೆ ಮೂರನೇ ಪಂದ್ಯಕ್ಕೆ ತಂಡದಲ್ಲಿ ಕನಿಷ್ಠ ಮೂರು ಬದಲಾವಣೆಗಳು ಖಚಿತವೆಂದು ತೋರುತ್ತದೆ. ಅದರಲ್ಲೂ ವೈಭವ್ ಸೂರ್ಯವಂಶಿಗೆ ಎರಡೂ ಪಂದ್ಯಗಳಲ್ಲಿ ಅವಕಾಶ ಸಿಗಲಿಲ್ಲ. ಹೀಗಾಗಿ ವೈಭವ್, ಸಂಜು ಸ್ಯಾಮ್ಸನ್ ಅಥವಾ ಅಭಿಷೇಕ್ ಶರ್ಮಾ ಈ ಇಬ್ಬರಲ್ಲಿ ಯಾರ ಬದಲಿಗೆ ತಂಡದಲ್ಲಿ ಆಡುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. ಎಡ ಬಲ ಸಂಯೋಜನೆಯನ್ನು ಕಣಕ್ಕಿಳಿಸಲು ಬಿಸಿಸಿಐ ಬಯಸಿದರೆ, ಸ್ಯಾಮ್ಸನ್ ಮತ್ತು ಸೂರ್ಯವಂಶಿ ಆರಂಭಿಕರಾಗಿ ಆಡಬಹುದು. ಇದರರ್ಥ ಅಭಿಷೇಕ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಬೌಲಿಂಗ್‌ನಲ್ಲಿ ಈ ಬದಲಾವಣೆ ಸಾಧ್ಯ

ವೈಭವ್ ಜೊತೆಗೆ, ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ತಂಡದಲ್ಲಿ ಸ್ಥಾನ ಪಡೆಯಬಹುದು. ಇದು ಸಾಧ್ಯವಾದರೆ, ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಗಾಯಗೊಂಡಿದ್ದ ಸುಂದರ್ ಎರಡು ತಿಂಗಳ ನಂತರ ಮತ್ತೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗದಿದ್ದರೂ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದ ಶಿವಂ ದುಬೆ ಬದಲಿಗೆ ಸುಂದರ್ ಆಡಬಹುದು.

ವೇಗದ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಬದಲಿಗೆ ಯಶ್ ಠಾಕೂರ್ ಅವರನ್ನು ಆಯ್ಕೆ ಮಾಡಬಹುದು. ಅಲ್ಲದೆ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಆಯ್ಕೆಯೂ ಇದೆಯಾದರೂ ಎರಡು ತಿಂಗಳ ನಂತರ ತಂಡವನ್ನು ಕೂಡಿಕೊಂಡಿರುವ ಬುಮ್ರಾಗೆ ಮತ್ತೆ ವಿಶ್ರಾಂತಿ ನೀಡುವ ಸಾಧ್ಯತೆಗಳಿಲ್ಲ. ಈ ಪರಿಸ್ಥಿತಿಯಲ್ಲಿ, ಬುಮ್ರಾ ಮತ್ತು ಯಶ್ ಠಾಕೂರ್ ಮೂರನೇ ಪಂದ್ಯದಲ್ಲಿ ವೇಗದ ದಾಳಿಯನ್ನು ಹಂಚಿಕೊಳ್ಳಬಹುದು.

ನಾಯಕನಾಗಿ ಭಾರತದಲ್ಲಿ ಚೊಚ್ಚಲ ಟಿ20 ಸರಣಿ ಗೆದ್ದ ಶ್ರೇಯಸ್ ಅಯ್ಯರ್

ಭಾರತದ ಸಂಭಾವ್ಯ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ/ ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ/ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ (ವರುಣ್ ಚಕ್ರವರ್ತಿ ಬದಲಿಗೆ), ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್/ ಯಶ್ ಠಾಕೂರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Thu, 17 September 26

Loading...
Unable to load recommendations.
Follow Us