ದಕ್ಷಿಣ ಆಫ್ರಿಕಾದ ಬ್ಲೋಮ್‌ಫಾಂಟೈನ್‌ನಲ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವಿನ ಅಂಡರ್ 19 ವಿಶ್ವಕಪ್ (U19 World Cup 2024) ಮೊದಲ ಪಂದ್ಯದಲ್ಲಿ ಉದಯ್ ಸಹರಾನ್ (Uday Saharan) ನೇತೃತ್ವದ ಟೀಂ ಇಂಡಿಯಾ ಬಾಂಗ್ಲಾದೇಶ ತಂಡವನ್ನು ಬರೋಬ್ಬರಿ 84 ರನ್ಗಳಿಂದ ಮಣಿಸಿ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆದರ್ಶ್ ಸಿಂಗ್ ಸಿಡಿಸಿದ 76 ರನ್ ಹಾಗೂ ನಾಯಕ ಉದಯ್ ಸಹರಾನ್ ಅವರ 64 ರನ್‌ಗಳ ಕೊಡುಗೆಯಿಂದಾಗಿ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 251 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಪೂರ್ಣ 50 ಓವರ್ಗಳನ್ನು ಆಡಲಾಗದೆ 45.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆರಂಭಿಕ ಆದರ್ಶ್ ಸಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಅರ್ಶಿನ್ ಕುಲಕರ್ಣಿ 7 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮುಶೀರ್ ಖಾನ್ ಕೂಡ 3 ರನ್‌ಗಳಿಗೆ ಸುಸ್ತಾದರು. ಆದರೆ ಮತ್ತೊಬ್ಬ ಆರಂಭಿಕ ಆದರ್ಶ್ ಸಿಂಗ್ ಜೊತೆಯಾದ ನಾಯಕ ಉದಯ್ ಸಹರಾನ್ ತಂಡದ ಇನ್ನಿಂಗ್ಸ್ ಕೈಗೆತ್ತಿಕೊಂಡರು. ಇಬ್ಬರೂ ಸೇರಿ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸಿ ಭಾರತವನ್ನು ಗೌರವಾನ್ವಿತ ಸ್ಕೋರ್‌ಗೆ ಕೊಂಡೊಯ್ದರು.
ಟೀಂ ಇಂಡಿಯಾ ನಾಯಕನ ಜೊತೆ ಕಾಲ್ಕೆರೆದು ಜಗಳಕ್ಕೆ ಬಂದ ಬಾಂಗ್ಲಾ ಆಟಗಾರರು; ವಿಡಿಯೋ ನೋಡಿ
ಕೆಳಕ್ರಮಾಂಕದಲ್ಲಿ ಪ್ರಿಯಾಂಶು ಮೊಲಿಯಾ ಹಾಗೂ ಅರವಳ್ಳಿ ಅವನೀಶ್ ರಾವ್ ತಲಾ 23 ರನ್‌ಗಳ ಕೊಡುಗೆ ನೀಡಿದರು. ಸಚಿನ್ ದಾಸ್ 26 ರನ್‌ಗಳ ಇನ್ನಿಂಗ್ಸ್ನಿಂದಾಗಿ ತಂಡ 251 ರನ್‌ಗಳ ಗೌರವಾನ್ವಿತ ಮೊತ್ತ ಕಲೆಹಾಕಿತು. ಬಾಂಗ್ಲಾದೇಶ ಪರ ಬೌಲಿಂಗ್ನಲ್ಲಿ ಮಿಂಚಿದ ಮರುಫ್ ಅತ್ಯಧಿಕ 5 ವಿಕೆಟ್ ಪಡೆದ ಸಾಧನೆ ಮಾಡಿದರು.
ಟೀಂ ಇಂಡಿಯಾ ನೀಡಿದ 253 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ 45.5 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ತಂಡದ ಪರ ಅರಿಫುಲ್ ಇಸ್ಲಾಂ 41 ರನ್‌ಗಳ ಇನ್ನಿಂಗ್ಸ್ ಆಡಿದರೆ, ಮೊಹಮ್ಮದ್ ಶಿಹಾಬ್ ಜೇಮ್ಸ್ 54 ರನ್‌ಗಳ ಹೋರಾಟದ ಇನ್ನಿಂಗ್ಸ್ ಕಟ್ಟಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಭಾರತದ ಪರ ಬೌಲಿಂಗ್ನಲ್ಲಿ ಮಿಂಚಿದ ಸೌಮ್ಯ ಪಾಂಡೆ 9.5 ಓವರ್‌ಗಳಲ್ಲಿ 24 ರನ್ ನೀಡಿ 4 ವಿಕೆಟ್ ಪಡೆದರು. ಇವರೊಂದಿಗೆ ಮುಶೀರ್ ಖಾನ್ 10 ಓವರ್‌ಗಳಲ್ಲಿ 35 ರನ್ ನೀಡಿ ಎರಡು ಪ್ರಮುಖ ವಿಕೆಟ್ ಪಡೆದರು. ಇನ್ನು ಪಾಯಿಂಟ್ಸ್ ಟೇಬಲ್ ಬಗ್ಗೆ ಮಾತನಾಡುವುದಾದರೆ, ಟೀಂ ಇಂಡಿಯಾ ಈ ಗೆಲುವಿನೊಂದಿಗೆ ಎರಡು ಪಾಯಿಂಟ್ ಮತ್ತು 1.68 ನೆಟ್ ರನ್ ರೇಟ್‌ನೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:07 pm, Sat, 20 January 24