ಪಾಕ್ಗೆ ಬರದಿದ್ದರೆ, ಟೀಮ್ ಇಂಡಿಯಾ ನರಕಕ್ಕೆ ಹೋಗಲಿ: ನಾಲಿಗೆ ಹರಿಬಿಟ್ಟ ಮಿಯಾಂದಾದ್
India vs Pakistan: ಈ ಹಿಂದೆ ಪಾಕಿಸ್ತಾನ್ನಲ್ಲಿ ಏಷ್ಯಾಕಪ್ ಆಯೋಜಿಸಿದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿತ್ತು. ಹೀಗಾಗಿ ತಟಸ್ಥ ಸ್ಥಳದಲ್ಲಿ ಟೂರ್ನಿಯನ್ನು ಆಯೋಜಿಸುವಂತೆ ಪಾಕ್ ಕ್ರಿಕೆಟ್ ಮಂಡಳಿಗೆ ತಿಳಿಸಲಾಗಿತ್ತು.
2023 ರ ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡದಿರುವ ಬಗ್ಗೆ ಕಠಿಣ ನಿಲುವು ಹೊಂದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (BCCI) ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಕಟುವಾಗಿ ಟೀಕಿಸಿದ್ದಾರೆ. ಟೀಮ್ ಇಂಡಿಯಾ ಪಾಕಿಸ್ತಾನದಲ್ಲಿ ಆಡಲು ಬರದಿದ್ದರೆ, ನರಕಕ್ಕೆ ಹೋಗುವುದು ಉತ್ತಮ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಿಯಾಂದಾದ್, ಭಾರತ ತಂಡವು ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಡಲು ಬರುತ್ತಿಲ್ಲ ಎಂದು ಹೇಳುತ್ತಾರೆ. ನಮ್ಮಲ್ಲಿಗೆ ಬರದೇ ಅವರು ನರಕಕ್ಕೆ ಹೋಗಬಹುದು ಎಂದು ಬಿಸಿಸಿಐ ತೀರ್ಮಾನವನ್ನು ವ್ಯಂಗ್ಯವಾಡಿದ್ದಾರೆ.
ನಾನು ಯಾವಾಗಲೂ ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ. ನಮ್ಮಲ್ಲಿ ಟೂರ್ನಿ ನಡೆಸಿದರೆ ಭಾರತ ಬರುವಂತೆ ಮಾಡುವುದು ಐಸಿಸಿ ಕೆಲಸ. ಐಸಿಸಿ ಇದನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಆಡಳಿತ ಮಂಡಳಿಯಿಂದ ಯಾವುದೇ ಪ್ರಯೋಜನವಿಲ್ಲ. ಅವರು ಪ್ರತಿ ತಂಡಕ್ಕೂ ಒಂದೇ ರೀತಿಯ ನಿಯಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಒಂದು ದೇಶಕ್ಕೆ ಆಡಲು ಹೋಗುವುದಿಲ್ಲ ಎನ್ನುವ ತಂಡಗಳನ್ನು ಐಸಿಸಿ ಪಟ್ಟಿಯಿಂದ ತೆಗೆದುಹಾಕಬೇಕೆಂದು ಜಾವೇದ್ ಮಿಯಾಂದಾದ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಪಾಕಿಸ್ತಾನ್ ವಿರುದ್ಧ ಆಡೋಕೆ ಭಾರತ ಹೆದರುತ್ತಿರುವುದು ಯಾಕೆ ಎಂದು ಮಿಯಾಂದಾದ್ ಪ್ರಶ್ನಿಸಿದ್ದಾರೆ. ಅವರಿಗೆ ಪಾಕ್ ವಿರುದ್ಧ ಸೋತರೆ ಅಭಿಮಾನಿಗಳು ಟೀಕಿಸುತ್ತಾರೆ ಎಂದು ಚೆನ್ನಾಗಿ ಗೊತ್ತಿದೆ. ಹೀಗಾಗಿ ಪಾಕ್ಗೆ ಕ್ರಿಕೆಟ್ ಆಡಲು ಬರುತ್ತಿಲ್ಲ. ಅವರು ಇಲ್ಲಿಗೆ ಬರದಿದ್ದರೆ ಬೇಡ, ನರಕಕ್ಕೆ ಹೋಗಲಿ. ಪಾಕಿಸ್ತಾನದ ಉಳಿವಿಗೆ ಭಾರತದ ಅಗತ್ಯತೆಯಿಲ್ಲ ಎಂದು ಜಾವೇದ್ ಮಿಯಾಂದ್ ಹೇಳಿದ್ದಾರೆ.
ಈ ಹಿಂದೆ ಪಾಕಿಸ್ತಾನ್ನಲ್ಲಿ ಏಷ್ಯಾಕಪ್ ಆಯೋಜಿಸಿದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿತ್ತು. ಹೀಗಾಗಿ ತಟಸ್ಥ ಸ್ಥಳದಲ್ಲಿ ಟೂರ್ನಿಯನ್ನು ಆಯೋಜಿಸುವಂತೆ ಪಾಕ್ ಕ್ರಿಕೆಟ್ ಮಂಡಳಿಗೆ ತಿಳಿಸಲಾಗಿತ್ತು. ಇದಾಗ್ಯೂ ಪಾಕ್ನಲ್ಲೇ ಟೂರ್ನಿ ಆಯೋಜಿಸಲು ಪಿಸಿಬಿ ಬಯಸಿದೆ. ಆದರೆ ಫೆಬ್ರವರಿ 4, ಶನಿವಾರದಂದು ಬಹ್ರೇನ್‌ನಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯ ನಂತರ ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ಆಯೋಜನೆಯ ಬಗ್ಗೆ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಪಾಕಿಸ್ತಾನ್ನಲ್ಲಿ ಏಷ್ಯಾಕಪ್ ಆಯೋಜಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಅಲ್ಲದೆ ಮಾರ್ಚ್ನಲ್ಲಿ ಮತ್ತೊಂದು ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಟೂರ್ನಿಯು ತಟಸ್ಥ ಸ್ಥಳದಲ್ಲಿ ನಡೆಯುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.
ಇದನ್ನೂ ಓದಿ: Heinrich Klaasen: ಬಡವರ ಧೋನಿ, RCB ಆಟಗಾರ…ಯಾರು ಈ ಹೆನ್ರಿಕ್ ಕ್ಲಾಸೆನ್..?
ಪ್ರಸ್ತುತ ಮಾಹಿತಿ ಪ್ರಕಾರ, 2023ರ ಏಷ್ಯಾಕಪ್ ಯುಎಇನಲ್ಲಿ ನಡೆಯುವ ಸಾಧ್ಯತೆ ಹೆಚ್ಚು. ಕಳೆದ ಬಾರಿ ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಟೂರ್ನಿಯನ್ನು ರಾಜಕೀಯ ಬಿಕ್ಕಿಟ್ಟಿನ ಕಾರಣ ಯುಎಇನಲ್ಲಿ ಆಯೋಜಿಸಲಾಗಿತ್ತು. ಅದರಂತೆ ಈ ಬಾರಿ ಕೂಡ ಅರಬರ ನಾಡಿನಲ್ಲಿ ಏಷ್ಯಾಕಪ್ 2023 ನಡೆಯುವ ಸಾಧ್ಯತೆಯಿದೆ. ಇದರಿಂದ ಆಕ್ರೋಶಗೊಂಡಿರುವ ಜಾವೇದ್ ಮಿಯಾಂದ್ ನಾಲಿಗೆ ಹರಿಬಿಟ್ಟಿದ್ದಾರೆ.
Published On - 6:32 pm, Tue, 7 February 23