AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PM XI: ಮಿಂಚಿದ ಯುವ ಆಟಗಾರರು; ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್​​ಗಳ ಸುಲಭ ಜಯ

IND vs PM XI: ಭಾರತ ತಂಡವು ಪ್ರಧಾನಮಂತ್ರಿ XI ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದೆ. ಯುವ ಆಟಗಾರರಾದ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾದ ಸ್ಯಾಮ್ ಕಾನ್‌ಸ್ಟಂಟ್ಸ್ ಶತಕ ಸಿಡಿಸಿದರೂ, ಭಾರತ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು. ಅಡಿಲೇಡ್ ಟೆಸ್ಟ್ ಪಂದ್ಯಕ್ಕೆ ಇದು ಉತ್ತಮ ಸಿದ್ಧತೆಯಾಗಿದೆ.

IND vs PM XI: ಮಿಂಚಿದ ಯುವ ಆಟಗಾರರು; ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್​​ಗಳ ಸುಲಭ ಜಯ
ಅಭ್ಯಾಸ ಪಂದ್ಯ
ಪೃಥ್ವಿಶಂಕರ
|

Updated on:Dec 01, 2024 | 5:18 PM

Share

ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಡಿಸೆಂಬರ್ 6 ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ಪ್ರೈಮ್‌ಮಿನಿಸ್ಟರ್ ಇಲೆವೆನ್ ತಂಡದ ವಿರುದ್ಧ 2 ದಿನಗಳ ಅಭ್ಯಾಸ ಪಂದ್ಯವನ್ನು ಆಡಿತ್ತು. ಗುಲಾಬಿ ಚೆಂಡಿನೊಂದಿಗೆ ನಡೆದ ಈ ಹಗಲು-ರಾತ್ರಿ ಪಂದ್ಯದಲ್ಲಿ ಟೀಂ ಇಂಡಿಯಾ ಸುಲಭವಾಗಿ ಗೆಲುವು ಸಾಧಿಸಿದೆ. ಭಾರತ ತಂಡದ ಯುವ ಆಟಗಾರರು ಈ ಪಂದ್ಯದಲ್ಲಿ ಅತ್ಯಂತ ದಿಟ್ಟ ಪ್ರದರ್ಶನ ತೋರಿದ್ದು, ಮಹತ್ವದ ಪಂದ್ಯಕ್ಕೂ ಮುನ್ನ ತಮ್ಮ ಸಿದ್ಧತೆಯನ್ನು ಬಲಗೊಳಿಸಿದ್ದಾರೆ. ಬೌಲಿಂಗ್‌ನಲ್ಲಿ ಹರ್ಷಿತ್ ರಾಣಾ ಮಿಂಚಿದರೆ, ಬ್ಯಾಟಿಂಗ್‌ನಲ್ಲಿ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಮ್ಮ ಛಾಪು ಮೂಡಿಸಿದರು.

ಭಾರತಕ್ಕೆ ಸುಲಭ ಜಯ

ಟೀಂ ಇಂಡಿಯಾ ಮತ್ತು ಪ್ರೈಮ್ ಮಿನಿಸ್ಟರ್ ಇಲೆವೆನ್ ತಂಡಗಳ ನಡುವಿನ ಈ ಪಂದ್ಯದ ಮೊದಲ ದಿನ ಮಳೆಯಿಂದಾಗಿ ರದ್ದಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಎರಡನೇ ದಿನದ ಆಟದಲ್ಲಿ ತಲಾ 50 ಓವರ್‌ಗಳ ಪಂದ್ಯವನ್ನು ನಡೆಸಲು ನಿರ್ಧರಿಸಲಾಯಿತು. ಆದರೆ ಎರಡನೇ ದಿನವೂ ಮಳೆಯಿಂದ ಆಟಕ್ಕೆ ಅಡ್ಡಿಯಾಯಿತು, ನಂತರ ಪಂದ್ಯವನ್ನು ತಲಾ 46 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಪ್ರೈಮ್ ಮಿನಿಸ್ಟರ್ ಇಲೆವೆನ್ ಕೇವಲ 43.2 ರನ್​ಗಳಲ್ಲಿ 240 ರನ್ ಗಳಿಸಿ ಆಲೌಟ್ ಆಯಿತು.

ಸ್ಯಾಮ್ ಕೊನ್ಸ್​​ಟಾಸ್ ಶತಕ

ಆಸ್ಟ್ರೇಲಿಯಾ ತಂಡದ ಪರ 19 ವರ್ಷದ ಯುವ ಬ್ಯಾಟ್ಸ್‌ಮನ್ ಸ್ಯಾಮ್ ಕೊನ್ಸ್​​ಟಾಸ್ ಶತಕದ ಇನ್ನಿಂಗ್ಸ್‌ ಆಡಿದರು. ಅವರು 97 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 107 ರನ್ ಗಳಿಸಿದರು. ಇತ್ತ ಟೀಂ ಇಂಡಿಯಾ ಪರ ಮಿಂಚಿದ ಹರ್ಷಿತ್ ರಾಣಾ 6 ಓವರ್‌ಗಳಲ್ಲಿ 44 ರನ್ ನೀಡಿ 4 ವಿಕೆಟ್ ಪಡೆದರು. ಈ ವೇಳೆ ಹರ್ಷಿತ್ ರಾಣಾ 6 ಎಸೆತಗಳ ಅಂತರದಲ್ಲಿ ಈ 4 ವಿಕೆಟ್ ಪಡೆದಿದ್ದು ವಿಶೇಷವಾಗಿತ್ತು. ಇವರಲ್ಲದೆ ಆಕಾಶ್ ದೀಪ್​ಗೆ 2 ವಿಕೆಟ್​ ಸಿಕ್ಕರೆ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಸುಲಭವಾಗಿ ಗುರಿ ಬೆನ್ನಟ್ಟಿದ ಭಾರತ

ಗೆಲುವಿಗೆ 241 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಿದ್ದು, ಉಭಯ ಆಟಗಾರರಿಂದ ಉತ್ತಮ ಆಟ ಕಂಡು ಬಂತು. ರಾಹುಲ್ 44 ಎಸೆತಗಳಲ್ಲಿ 27 ರನ್ ಗಳಿಸಿ ನಿವೃತ್ತರಾದರೆ, ಯಶಸ್ವಿ ಜೈಸ್ವಾಲ್ 59 ಎಸೆತಗಳಲ್ಲಿ 45 ರನ್ ಗಳಿಸಿ ಔಟಾದರು. ಇದರ ನಂತರ, ಗಾಯದಿಂದ ಚೇತರಿಸಿಕೊಂಡು ಅಖಾಡಕ್ಕಿಳಿದಿದ್ದ ಶುಭ್​ಮನ್ ಗಿಲ್ 62 ಎಸೆತಗಳಲ್ಲಿ 50 ರನ್ ಗಳಿಸಿದರು. ಇವರ ಜೊತೆಗೆ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಅವರಿಂದ ತಲಾ 42 ರನ್​​ಗಳ ಸ್ಫೋಟಕ ಇನ್ನಿಂಗ್ಸ್ ಕಂಡುಬಂದಿತು. ಇವರಲ್ಲದೆ ರನ್ ಚೇಸ್​ನಲ್ಲಿ ರವೀಂದ್ರ ಜಡೇಜಾ ಕೂಡ ಕೊಡುಗೆ ನೀಡಿದ್ದರಿಂದ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Sun, 1 December 24