Ravi Shastri: ಟಿ-20 ವಿಶ್ವಕಪ್ ಬಳಿಕ ಕೋಚ್ ಹುದ್ದೆಗೆ ರಾಜೀನಾಮೆ: ಸುಳಿವು ನೀಡಿದ ರವಿಶಾಸ್ತ್ರಿ
'ನಾನು ಏನು ಅಂದುಕೊಂಡಿದ್ದೆನೊ ಅದದನ್ನೆಲ್ಲಾ ಸಾಧಿಸಿದ್ದೇನೆ' ಟೀಮ್ ಇಂಡಿಯಾ ಮುಖ್ಯ ತರಬೇತುದಾರನ ಹುದ್ದೆಯನ್ನು ತೊರೆಯುವ ಬಗ್ಗೆ ಸೂಚನೆ ನೀಡಿದ ರವಿಶಾಸ್ತ್ರಿ.
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಅವರು ಐಸಿಸಿ ಟಿ-20 ವಿಶ್ವಕಪ್ (ICC T20 World Cup) ಮುಕ್ತಾಯದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತವಾಗಿದೆ. ಸ್ವತಃ ರವಿಶಾಸ್ತ್ರಿಯವರೇ ಖುದ್ದಾಗಿ ಮುಖ್ಯ ತರಬೇತುದಾರನ ಹುದ್ದೆಯನ್ನು ತೊರೆಯುವ ಬಗ್ಗೆ ಸೂಚನೆ ನೀಡಿದ್ದಾರೆ. 2017 ರಿಂದ 2019 ರ ವರೆಗೆ ಟೀಮ್ ಇಂಡಿಯಾದ ಕೋಚ್ (Team India Coach) ಆಗಿ ಸೇವೆ ಸಲ್ಲಿಸಿದ್ದ ರವಿಶಾಸ್ತ್ರಿ ಅವರನ್ನು ಐಸಿಸಿ ಟಿ-20 ವಿಶ್ವಕಪ್ ಮುಕ್ತಾಯದವರೆಗೆ ಕೋಚ್ ಆಗಿ ಮುಂದುವರೆಸಲಾಗಿತ್ತು. ಇದೀಗ ಈ ಅವಧಿ ಮುಕ್ತಾಯವಾಗುವ ಹಂತಕ್ಕೆ ಬಂದಿದ್ದು ಕೋಚ್ ಹುದ್ದೆ ತೊರೆಯಲಿದ್ದಾರೆ.
ಈ ಕುರಿತು ಮಾತನಾಡಿರುವ ರವಿಶಾಸ್ತ್ರಿ, ‘ಸಿಕ್ಕಿರುವ ಸ್ವಾಗತವನ್ನು ಮೀರಿ ತಂಗಬಾರದು’ ಎಂದು ಹೇಳಿದ್ದಾರೆ. ‘ನಾನು ಏನು ಅಂದುಕೊಂಡಿದ್ದೆನೊ ಅದದನ್ನೆಲ್ಲಾ ಸಾಧಿಸಿದ್ದೇನೆ. ಕಳೆದ ಐದು ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸ್ಥಾನ, ಆಸ್ಟ್ರೇಲಿಯಾದಲ್ಲಿ ಎರಡು ಬಾರಿ ಸರಣಿ ಗೆಲುವು, ಇಂಗ್ಲೆಂಡ್‌ನಲ್ಲಿ ಸರಣಿ ಗೆಲುವು. ನನ್ನ ಪಾಲಿಗಿದು ಕಟ್ಟಕಡೆಯ ಗುರಿಯಾಗಿತ್ತು’ ಎಂದು ಹೇಳಿದ್ದಾರೆ.
‘ಆಸ್ಟ್ರೇಲಿಯಾ ವಿರುದ್ಧ ಗೆಲುವು ಮತ್ತು ಕೋವಿಡ್ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ಗೆಲುವು. ನಾವದನ್ನು ಸಾಧಿಸಿದ್ದೇವೆ. ಇಂಗ್ಲೆಂಡ್ ವಿರುದ್ಧ 2-1ರ ಅಂತರದ ಮುನ್ನಡೆ ಗಳಿಸಿದ್ದೇವೆ. ಲಾರ್ಡ್ಸ್ ಹಾಗೂ ಓವಲ್ ಗೆಲುವು ನನ್ನ ಪಾಲಿಗೆ ತುಂಬಾನೆ ವಿಶೇಷವಾಗಿತ್ತು’ ಎಂಬುದು ಶಾಸ್ತ್ರಿ ಮಾತು.
‘ಪ್ರಮುಖವಾಗಿ ನಾವು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಜಗತ್ತಿನ ಎಲ್ಲ ತಂಡಗಳನ್ನು ಅವರದ್ದೇ ನೆಲದಲ್ಲಿ ಮಣಿಸಿದ್ದೇವೆ. ಟಿ-20 ವಿಶ್ವಕಪ್ ಗೆದ್ದರೆ ಇನ್ನೂ ಮಧುರವಾಗಲಿದೆ. ಇದಕ್ಕಿಂತಲೂ ಮಿಗಿಲಾಗಿ ಬೇರೆ ಏನು ಇಲ್ಲ. ನಾನು ಒಂದು ವಿಷಯದಲ್ಲಿ ನಂಬಿಕೆಯಿಟ್ಟಿದ್ದೇನೆ. ನಮಗೆ ಲಭಿಸಿರುವ ಸ್ವಾಗತವನ್ನು ಮೀರಬಾರದು. ನಾನದನ್ನು ಹೇಳಲು ಬಯಸುತ್ತೇನೆ. ಈ ತಂಡದಿಂದ ನಾನೇನು ಸಾಧಿಸಲು ಬಯಸಿದ್ದೆನೋ ಅದನ್ನು ನಿರೀಕ್ಷೆಗಿಂತಲೂ ಹೆಚ್ಚು ಸಾಧನೆ ಮಾಡಿದ್ದೇನೆ. ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನೆಲದಲ್ಲಿ ಗೆಲುವು, ಕೋವಿಡ್ ವರ್ಷದಲ್ಲೂ ಇಂಗ್ಲೆಂಡ್‌ನಲ್ಲಿ ಗೆಲುವು. ಇವೆಲ್ಲವೂ ನಾಲ್ಕು ದಶಕಗಳ ನನ್ನ ಕ್ರಿಕೆಟ್ ಜೀವನದಲ್ಲಿ ಎಂದಿಗೂ ಮರೆಯಲಾದ ಕ್ಷಣವಾಗಿದೆ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ವಿಶ್ವಕಪ್ ಟಿ-20 ಟೂರ್ನಿ ನಡೆಯಲಿದ್ದು, ಇದಾದ ಬಳಿಕ ಭಾರತ ತಂಡಕ್ಕೆ ನೂತನ ಕೋಚ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಜೊತೆಗೆ ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆಗಿರುವ ಶ್ರೀಧರ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮಾತ್ರ ತಂಡದ ಜತೆ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೂತನ ತರಬೇತುದಾರರ ಹುದ್ದೆ ರೇಸ್ ನಲ್ಲಿ ಅನಿಲ್ ಕುಂಬ್ಳೆ ಹಾಗು ವಿವಿಎಸ್ ಲಕ್ಷ್ಮಣ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಈ ಪೈಕಿ ಬಿಸಿಸಿಐ ಕುಂಬ್ಳೆ ಅವರನ್ನು ಕರೆತರಲು ಪ್ರಯತ್ನ ನಡೆಸುತ್ತಿದೆ. ಅವರಿಗೆ ಕೋಚ್ ಆಗಲು ಆಫರ್ ನೀಡಲಾಗಿದೆ ಎನ್ನಲಾಗಿದೆ. ಆದರೆ ಕುಂಬ್ಳೆ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲವಂತೆ.
IPL 2021: ಆರ್ಸಿಬಿ ಪ್ಲೇ ಆಫ್ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?: ಇಲ್ಲಿದೆ ನೋಡಿ ಲೆಕ್ಕಾಚಾರ
IPL 2021: ಐಪಿಎಲ್ 14ನೇ ಆವೃತ್ತಿ ಪುನರಾರಂಭಕ್ಕೆ ಕೇವಲ ಒಂದು ದಿನ ಬಾಕಿ: ನಿಮಗೆ ಗೊತ್ತಿರಲಿ ಈ ಸಂಗತಿಗಳು
(India head coach Ravi Shastri hints stepping down as India head coach after ICC T20 World Cup)