
ಭಾರತ ಹಾಗೂ ಐರ್ಲೆಂಡ್ (India vs Ireland) ನಡುವೆ ಎರಡು ಪಂದ್ಯಗಳ ಟಿ20 ಸರಣಿಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈಗಾಗಲೇ ಟೀಂ ಇಂಡಿಯಾ ಕೂಡ ಎರಡೆರಡು ಬ್ಯಾಚ್ಗಳಲ್ಲಿ ಐರ್ಲೆಂಡ್ ತಲುಪಿದೆ. ಐಪಿಎಲ್ ಬಳಿಕ ಟೀಂ ಇಂಡಿಯಾ ಆಡುತ್ತಿರುವ ಮೊದಲ ಟಿ20 ಸರಣಿ ಇದಾಗಿದೆ. ಹಾಗೆಯೇ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದಿಂದ ಕೈಬಿಟ್ಟ ಬಳಿಕ ನೂತನ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ನೂತನ ನಾಯಕನ ನಾಯಕತ್ವದಲ್ಲಿ ತಂಡ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ಈ ಎರಡು ಪಂದ್ಯಗಳ ಆರಂಭದ ಸಮಯವನ್ನು ಬದಲಾಯಿಸಲಾಗಿದೆ. ಇದಕ್ಕೆ ಕಾರಣ ಮಹಿಳಾ ಟಿ20 ವಿಶ್ವಕಪ್ ಎನ್ನಲಾಗುತ್ತಿದೆ.
ವಾಸ್ತವವಾಗಿ ಈ ಮೊದಲು ಭಾರತ ಹಾಗೂ ಐರ್ಲೆಂಡ್ ನಡುವಿನ ಈ ಎರಡು ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯವು ಕೂಡ ಜೂನ್ 28 ರ ಭಾನುವಾರದಂದು ಅದೇ ಸಮಯಕ್ಕೆ ಅಂದರೆ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ದಿನ ಭಾರತ ಮತ್ತು ಐರ್ಲೆಂಡ್ ನಡುವಿನ ಸರಣಿಯ ಎರಡನೇ ಮತ್ತು ಅಂತಿಮ ಟಿ20 ಪಂದ್ಯ ಕೂಡ ನಡೆಯಲಿದೆ. ಹೀಗಾಗಿ ಭಾರತ ಹಾಗೂ ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಸಮಯವನ್ನು ಒಂದು ಗಂಟೆ ಮುಂಚಿತವಾಗಿ ಆರಂಭಿಸಲು ತೀರ್ಮಾನಿಸಲಾಗಿದೆ.
ಎರಡೂ ಟಿ20 ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಪ್ರಾರಂಭವಾಗಲಿವೆ ಎಂದು ಐರ್ಲೆಂಡ್ ಕ್ರಿಕೆಟ್ ಹೇಳಿರುವುದಾಗಿ ಕ್ರಿಕ್‌ಬಜ್ ಉಲ್ಲೇಖಿಸಿದೆ. ಮೂಲತಃ ಪಂದ್ಯಗಳು ಸಂಜೆ 7:00 ಗಂಟೆಗೆ ಆರಂಭವಾಗಬೇಕಿತ್ತು. ಸಮಯವನ್ನು ಉದ್ದೇಶಪೂರ್ವಕವಾಗಿ ಒಂದು ಗಂಟೆ ಮುಂಚಿತವಾಗಿ ಬದಲಾಯಿಸಲಾಗಿದೆ. ಭಾರತ ಮತ್ತು ವಿದೇಶಗಳಲ್ಲಿ ನಡೆಯುವ ಟಿ20 ಪಂದ್ಯಗಳು ಸಾಮಾನ್ಯವಾಗಿ ಸ್ಥಳೀಯ ಸಮಯ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತವೆ. ಐರ್ಲೆಂಡ್ ಟಿ20 ಸರಣಿಯನ್ನು ಇದೇ ರೀತಿ ನಿಗದಿಪಡಿಸಲಾಗಿತ್ತು, ಆದರೆ ಕೊನೆಯ ಕ್ಷಣದಲ್ಲಿ ಬದಲಾಯಿಸಬೇಕಾಯಿತು.
ಭಾರತದ ಟಿ20 ನಾಯಕನಾಗಿ ಶ್ರೇಯಸ್ ಅಯ್ಯರ್ ಪ್ರಯಾಣ ಇಷ್ಟರಲ್ಲೇ ಅಂತ್ಯ
ಐರ್ಲೆಂಡ್ ತಂಡ: ಲೋರ್ಕನ್ ಟಕರ್ (ನಾಯಕ), ರಾಸ್ ಅಡೈರ್, ಬೆನ್ ಕೌಲ್ಟಿಡ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಮ್ಯಾಥ್ಯೂ ಹಂಫ್ರೈಸ್, ಗ್ಯಾವಿನ್ ಹೋಯ್, ಮ್ಯಾಥ್ಯೂ ಹೊಲ್ಲಾರ್ಡ್, ಲಿಯಾಮ್ ಮೆಕಾರ್ಥಿ, ಜೇ ಮುಂದ್ರಾ, ಹ್ಯಾರಿ ಟೆಕ್ಟರ್, ಟಿಮ್ ಟೆಕ್ಟರ್, ರೂಬೆನ್ ವಿಲ್ಸನ್.
ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್ ಮತ್ತು ವೈಭವ್ ಸೂರ್ಯವಂಶಿ.
Published On - 4:13 pm, Thu, 25 June 26