IND vs ENG: ಹಿಸ್ಟರಿನೇ ಇಲ್ಲ… 2ನೇ ಪಂದ್ಯ ಗೆಲ್ಲೋದು ಡೌಟ್
India vs England Test: ಭಾರತ ಮತ್ತು ಇಂಗ್ಲೆಂಡ್ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದು 1967 ರಲ್ಲಿ. ಅಲ್ಲಿಂದ ಶುರುವಾದ ಉಭಯ ತಂಡಗಳ ಪೈಪೋಟಿಯಲ್ಲಿ ಟೀಮ್ ಇಂಡಿಯಾ ಒಮ್ಮೆಯೂ ಗೆದ್ದಿಲ್ಲ ಎಂದರೆ ನಂಬಲೇಬೇಕು. ಅಂದರೆ ಬರ್ಮಿಂಗ್ಹ್ಯಾಮ್ನಲ್ಲಿ ಟೆಸ್ಟ್ ಪಂದ್ಯ ಗೆಲ್ಲೋದು ಟೀಮ್ ಇಂಡಿಯಾ ಪಾಲಿಗೆ ಕನಸಾಗಿಯೇ ಉಳಿದಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ಜುಲೈ 2 ರಿಂದ ಶುರುವಾಗಲಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ. ಏಕೆಂದರೆ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋತಿರುವ ಟೀಮ್ ಇಂಡಿಯಾ ಸರಣಿಯಲ್ಲಿ 1-0 ಅಂತರದಿಂದ ಹಿನ್ನಡೆ ಹೊಂದಿದ್ದು, ಇದೀಗ ಸರಣಿಯಲ್ಲಿ ಸಮಬಲ ಸಾಧಿಸಲು ಎಡ್ಜ್ಬಾಸ್ಟನ್ನಲ್ಲಿ ಗೆಲುವು ಅನಿವಾರ್ಯ. ಆದರೆ ಬರ್ಮಿಂಗ್ಹ್ಯಾಮ್ನಲ್ಲಿ ಭಾರತ ತಂಡಕ್ಕೆ ಗೆಲುವು ಅಂದುಕೊಂಡಷ್ಟು ಸುಲಭವಲ್ಲ.
ಏಕೆಂದರೆ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಟೀಮ್ ಇಂಡಿಯಾ ಈವರೆಗೆ ಒಂದೇ ಒಂದು ಟೆಸ್ಟ್ ಪಂದ್ಯ ಗೆದ್ದಿಲ್ಲ. ಕಳೆದ 58 ವರ್ಷಗಳಲ್ಲಿ ಈ ಮೈದಾನದಲ್ಲಿ ಟೀಮ್ ಇಂಡಿಯಾದ ಅತಿರಥ ಮಹಾರಥರು ಕಣಕ್ಕಿಳಿದರೂ ಒಂದೇ ಒಂದು ಪಂದ್ಯದಲ್ಲಿ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಎಡ್ಜ್‌ಬಾಸ್ಟನ್ ಮೈದಾನದಲ್ಲೂ ಇಂಗ್ಲೆಂಡ್ ತಂಡ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ.
ಈ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ಈವರೆಗೆ 8 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಒಂದು ಡ್ರಾ ಸಾಧಿಸಿರುವುದೇ ಟೀಮ್ ಇಂಡಿಯಾದ ಶ್ರೇಷ್ಠ ಸಾಧನೆ. ಇನ್ನುಳಿದ 7 ಮ್ಯಾಚ್ಗಳಲ್ಲೂ ಭಾರತ ತಂಡ ಹೀನಾಯವಾಗಿ ಸೋತಿದೆ.
ಅದರಲ್ಲೂ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಭಾರತ ತಂಡವು 8 ಪಂದ್ಯಗಳ 16 ಇನಿಂಗ್ಸ್ಗಳಲ್ಲಿ 400+ ಸ್ಕೋರ್ಗಳಿಸಿದ್ದು ಒಮ್ಮೆ ಮಾತ್ರ ಎಂದರೆ ನಂಬಲೇಬೇಕು. ಇನ್ನು 300+ ಸ್ಕೋರ್ಗಳಿಸಿದ್ದು ಕೂಡ ಒಂದು ಬಾರಿ ಮಾತ್ರ.
ಅಂದರೆ ಬರ್ಮಿಂಗ್ಹ್ಯಾಮ್ನಲ್ಲಿನ ಮೈದಾನದಲ್ಲಿ ಆಂಗ್ಲ ಬೌಲರ್ಗಳು ಪರಾಕ್ರಮ ಮರೆಯುತ್ತಾ ಬಂದಿದ್ದಾರೆ. ಇದಾಗ್ಯೂ ಟೀಮ್ ಇಂಡಿಯಾ ಬ್ಯಾಟರ್ಗಳು 2022 ರಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 416 ರನ್ಗಳಿಸಿದ್ದರು. ಇದಕ್ಕುತ್ತರವಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ ಕಲೆಹಾಕಿದ್ದು ಕೇವಲ 284 ರನ್ಗಳು.
ಆದರೆ ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾವನ್ನು 245 ರನ್ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ತಂಡವು 378 ರನ್ಗಳ ಗುರಿ ಬೆನ್ನತ್ತಿ ಐತಿಹಾಸಿಕ ಗೆಲುವು ದಾಖಲಿಸಿತ್ತು. ಅಂದರೆ ಉಭಯ ತಂಡಗಳು ಈ ಮೈದಾನದಲ್ಲಿ ಆಡಿದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಪಡೆ ಅಮೋಘ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು.
ಡ್ರಾ ಸಾಧಿಸಿದ್ದು ಯಾವಾಗ?
ಎಡ್ಜ್ಬಾಸ್ಟನ್ನಲ್ಲಿ ನಡೆದ 8 ಪಂದ್ಯಗಳಲ್ಲಿ ಟೀಮ್ ಇಂಡಿಯಾ 7 ಮ್ಯಾಚ್ಗಳಲ್ಲಿ ಸೋಲನುಭವಿಸಿದರೂ ಒಮ್ಮೆ ಮಾತ್ರ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಅದು ಕೂಡ 1986 ರಲ್ಲಿ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 390 ರನ್ಗಳಿಸಿದರೆ, ಟೀಮ್ ಇಂಡಿಯಾ 390 ರನ್ ಬಾರಿಸಿ ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿತ್ತು.
ಇನ್ನು ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 235 ರನ್ಗಳಿಸಿದ್ದರು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೊನೆಯ ದಿನದಾಟದಲ್ಲಿ 5 ವಿಕೆಟ್ ಕಳೆದುಕೊಂಡು 174 ರನ್ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರು. ಈ ಡ್ರಾ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಟೀಮ್ ಇಂಡಿಯಾದ ಶ್ರೇಷ್ಠ ಸಾಧನೆ.
ಇದನ್ನೂ ಓದಿ: ICC Test Ranking: ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಅಗ್ರ ಹತ್ತರಲ್ಲಿ 4 ಭಾರತೀಯರು
ಹೀಗಾಗಿ ಈ ಬಾರಿ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಭಾರತ ತಂಡವು ಗೆಲುವು ದಾಖಲಿಸಿದರೆ, ಹೊಸ ಇತಿಹಾಸ ನಿರ್ಮಾಣವಾಗಲಿದೆ. ಆದರೆ ಅಂತಹದೊಂದು ಇತಿಹಾಸ ನಿರ್ಮಿಸಲು ಆಂಗ್ಲ ಪಡೆ ಬಿಡಲಿದೆಯಾ ಎಂಬುದೇ ಪ್ರಶ್ನೆ.
ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭಾರತದ ಪಂದ್ಯವಾರು ದಾಖಲೆ:
- ಭಾರತ vs ಇಂಗ್ಲೆಂಡ್, 13 ಜುಲೈ 1967: ಭಾರತಕ್ಕೆ ಸೋಲು
- ಭಾರತ vs ಇಂಗ್ಲೆಂಡ್, 4 ಜುಲೈ 1974: ಭಾರತಕ್ಕೆ ಸೋಲು
- ಭಾರತ vs ಇಂಗ್ಲೆಂಡ್, 12 ಜುಲೈ 1979: ಭಾರತಕ್ಕೆ ಸೋಲು
- ಭಾರತ vs ಇಂಗ್ಲೆಂಡ್, 3 ಜುಲೈ 1986: ಪಂದ್ಯ ಡ್ರಾ
- ಭಾರತ vs ಇಂಗ್ಲೆಂಡ್ಮ ಜೂನ್ 6, 1996: ಭಾರತಕ್ಕೆ ಸೋಲು
- ಭಾರತ vs ಇಂಗ್ಲೆಂಡ್, ಆಗಸ್ಟ್ 10, 2011: ಭಾರತಕ್ಕೆ ಸೋಲು
- ಭಾರತ vs ಇಂಗ್ಲೆಂಡ್. ಆಗಸ್ಟ್ 1, 2018: ಭಾರತಕ್ಕೆ ಸೋಲು
- ಭಾರತ vs ಇಂಗ್ಲೆಂಡ್, ಜುಲೈ 1, 2022: ಭಾರತಕ್ಕೆ ಸೋಲು
