ಡಚ್ಚರ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಖಚಿತ

T20 World Cup 2026: ಟಿ20 ವಿಶ್ವಕಪ್​ನಲ್ಲಿ ಈಗಾಗಲೇ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಸೂಪರ್-8 ಹಂತಕ್ಕೇರಿದೆ. ಮೊದಲ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಗೆದ್ದಿದ್ದ ಭಾರತ ಆ ಬಳಿಕ ನಮೀಬಿಯ ವಿರುದ್ಧ ಗೆಲುವು ದಾಖಲಿಸಿತ್ತು. ಇದಾದ ಬಳಿಕ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದಿದೆ. ಇದೀಗ ನೆದರ್​ಲೆಂಡ್ಸ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ.

ಡಚ್ಚರ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಖಚಿತ
Team India

Updated on: Feb 17, 2026 | 2:53 PM

T20 World Cup 2026: ಟಿ20 ವಿಶ್ವಕಪ್​ನ 36ನೇ ಪಂದ್ಯದಲ್ಲಿ ಭಾರತ ಮತ್ತು ನೆದರ್​ಲೆಂಡ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬುಧವಾರ (ಫೆ.18) ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಡಚ್ಚರ (ನೆದರ್​ಲೆಂಡ್ಸ್​) ವಿರುದ್ಧದ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಕಂಡು ಬರುವುದು ಬಹುತೇಕ ಖಚಿತ.

ಏಕೆಂದರೆ ಕಳೆದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಭಾರತ ತಂಡವು ಈಗಾಗಲೇ ಸೂಪರ್-8 ಹಂತಕ್ಕೇರಿರುವ ಕಾರಣ ಬುಮ್ರಾಗೆ ನಾಳಿನ ಪಂದ್ಯದ ವೇಳೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚು.

ಇನ್ನು ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಕುಲ್ದೀಪ್ ಯಾದವ್ ನೆದರ್​ಲೆಂಡ್ಸ್ ವಿರುದ್ಧದ ಕಣಕ್ಕಿಳಿಯುವ ಸಾಧ್ಯತೆಯಿಲ್ಲ. ಅವರ ಬದಲಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಮತ್ತೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.

ಇತ್ತ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದರಂತೆ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಇನಿಂಗ್ಸ್​ ಆರಂಭಿಸಲಿದ್ದಾರೆ.

ಇನ್ನು ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಕಣಕ್ಕಿಳಿದರೆ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸಲಿದ್ದಾರೆ. ಇನ್ನುಳಿದ ಮೂರು ಕ್ರಮಾಂಕಗಳಲ್ಲಿ ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಫಿನಿಶರ್ ಪಾತ್ರದಲ್ಲಿ ರಿಂಕು ಸಿಂಗ್ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ.

ಇನ್ನುಳಿದಂತೆ ವೇಗಿಗಳಾಗಿ ಮೊಹಮ್ಮದ್ ಸಿರಾಜ್ ಹಾಗೂ ಅರ್ಷದೀಪ್ ಸಿಂಗ್ ಕಾಣಿಸಿಕೊಂಡರೆ, ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಆಡುವ ಬಳಗದಲ್ಲಿರಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ಅಭಿಷೇಕ್ ಶರ್ಮಾ
  • ಇಶಾನ್ ಕಿಶನ್ (ವಿಕೇಟ್ ಕೀಪರ್)
  • ತಿಲಕ್ ವರ್ಮಾ
  • ಸೂರ್ಯಕುಮಾರ್ ಯಾದವ್ (ನಾಯಕ)
  • ಹಾರ್ದಿಕ್ ಪಾಂಡ್ಯ
  • ಶಿವಂ ದುಬೆ
  • ರಿಂಕು ಸಿಂಗ್
  • ಅಕ್ಷರ್ ಪಟೇಲ್
  • ವರುಣ್ ಚಕ್ರವರ್ತಿ
  • ಅರ್ಷದೀಪ್ ಸಿಂಗ್
  • ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: W,W,W,W,W,W,W,W: ವಿಕೆಟ್ ಮೇಲೆ ವಿಕೆಟ್: ಶಮಿ ಬೆಂಕಿ ಬೌಲಿಂಗ್

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

 

Loading...
Unable to load recommendations.
Follow Us