IND vs SL: ಫಾಲೋ ಆನ್ ಹೇರಿಯೂ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಟೀಂ ಇಂಡಿಯಾ

India vs Sri Lanka: ಕೊಲಂಬೊದಲ್ಲಿ ನಡೆದ ಭಾರತ-ಶ್ರೀಲಂಕಾ ಎರಡನೇ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡಿದೆ. ಟೀಂ ಇಂಡಿಯಾ ಸರಣಿಯನ್ನು 1-0 ಅಂತರದಿಂದ ಗೆದ್ದರೂ, ಅಂತಿಮ ಪಂದ್ಯ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ್ದು ನಿರಾಸೆ ಮೂಡಿಸಿತು. ಶ್ರೀಲಂಕಾದ ಯುವ ಬ್ಯಾಟರ್ ಸೋನಲ್ ದಿನುಷಾ ಅವರ ಎರಡು ಶತಕಗಳು ಹಾಗೂ ಭಾರತದ ಕಳಪೆ ಬೌಲಿಂಗ್, ನಾಯಕನ ನಿರ್ಧಾರಗಳು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವು.

IND vs SL: ಫಾಲೋ ಆನ್ ಹೇರಿಯೂ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಟೀಂ ಇಂಡಿಯಾ
Team India

Updated on: Aug 27, 2026 | 5:32 PM

ಕೊಲಂಬೊದಲ್ಲಿ (Colombo Test) ನಡೆದ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅತ್ಯಗೊಂಡಿದೆ. ಇದರೊಂದಿಗೆ ಟೀಂ ಇಂಡಿಯಾ (Team India) 1-0 ಅಂತರದಿಂದ ಸರಣಿ ಗೆದ್ದಿತ್ತಾದರೂ, ಕೊನೆಯ ಟೆಸ್ಟ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತು. ಈ ಪಂದ್ಯವನ್ನು ಗೆಲ್ಲುವ ವಿಶ್ವಾಸದೊಂದಿಗೆ ಫಾಲೋ ಆನ್ ಹೇರಿದ ಟೀಂ ಇಂಡಿಯಾದ ಗೆಲುವು ಕಸಿದಿದ್ದು ಶ್ರೀಲಂಕಾದ ಯುವ ಬ್ಯಾಟರ್ ಸೋನಲ್ ದಿನುಷಾ. ಈ ಪಂದ್ಯದ ಎರಡು ಇನ್ನಿಂಗ್ಸ್​ಗಳಲ್ಲಿ ಶತಕ ಬಾರಿಸಿದ್ದಲ್ಲದೆ ಬಾಲಂಗೋಚಿಗಳೊಂದಿಗೆ ಜೊತೆಯಾಟವನ್ನಾಡುವ ಮೂಲಕ ಟೀಂ ಇಂಡಿಯಾ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಂತೆ ಮಾಡಿದರು. ಕೊನೆಯ ದಿನದಂದು ಟೀಂ ಇಂಡಿಯಾದ ಕಳಪೆ ಬೌಲಿಂಗ್ ಹಾಗೂ ನಾಯಕನ ನಿರ್ಧಾರಗಳು ತಂಡವನ್ನು ಗೆಲುವಿನಿಂದ ದೂರ ತಳ್ಳಿದವು ಎನ್ನಬಹುದು.

ಕೊನೆಯ ದಿನ ಕಳಪೆ ಬೌಲಿಂಗ್

ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಬೇಕಿದ್ದರೆ, ಕೊನೆಯ ದಿನದಂದು ಶ್ರೀಲಂಕಾವನ್ನು ಆಲೌಟ್ ಮಾಡಬೇಕಾಗಿತ್ತು. ಅದರಂತೆ ಶ್ರೀಲಂಕಾ ಕೇವಲ ನಾಲ್ಕು ವಿಕೆಟ್‌ಗನ್ನು ಉಳಿಸಿಕೊಂಡು 16 ರನ್‌ ಮಾತ್ರ ಮುನ್ನಡೆ ಹೊಂದಿತ್ತು. ಆದರೆ ಸೋನಲ್ ದಿನುಷಾ ಮತ್ತೊಮ್ಮೆ ಭಾರತದ ಗೆಲುವಿನ ದಾರಿಗೆ ಮುಳ್ಳಾದರು. ಸರಣಿಯ ಮೂರನೇ ಶತಕವನ್ನು ಬಾರಿಸುವ ಮೂಲಕ ಭಾರತದ ಗೆಲುವಿನ ಅವಕಾಶವನ್ನು ಕಸಿದುಕೊಂಡರು. ಇತ್ತ ಟೀಂ ಇಂಡಿಯಾ ಕೂಡ ತನ್ನ ಕಳಪೆ ಬೌಲಿಂಗ್ ಮೂಲಕ ಶ್ರೀಲಂಕಾ ತಂಡದ ಬಾಲಂಗೋಚಿಗಳು ಸಾಕಷ್ಟು ಸಮಯ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿತು.

ಇಡೀ ಸರಣಿಯಲ್ಲಿ ಭಾರತದ ಬೌಲರ್​ಗಳು ಮೇಲುಗೈ ಸಾಧಿಸಿದ್ದರು. ಆದರೆ ಸರಣಿಯ ಕೊನೆಯ ಪಂದ್ಯದ ಕೊನೆಯ ದಿನದಂದು ಭಾರತದ ಬೌಲರ್​ಗಳಿಗೆ ಕೊನೆಯ 4 ವಿಕೆಟ್​ಗಳನ್ನು ಕಬಳಿಸಲು ಸಾಧ್ಯವಾಗಲಿಲ್ಲ. ಇತ್ತ ಶ್ರೀಲಂಕಾ ತಂಡ ದಿನವಿಡೀ ಸುಮಾರು 82 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿ 200 ರನ್ ಕಲೆಹಾಕಿ ಕೇವಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಸೋನಲ್ ದಿನುಷಾ ಶತಕ

ಲಂಕಾ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಸೋನಲ್ ದಿನುಷಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 103 ರನ್‌ ಬಾರಿಸಿದ್ದ ಸೋನಲ್ ದಿನುಷಾ ಎರಡನೇ ಇನ್ನಿಂಗ್ಸ್​ನಲ್ಲಿ ಇಡೀ ದಿನ ಬ್ಯಾಟಿಂಗ್ ಮಾಡಿ ಅಜೇಯ 132 ರನ್‌ ಬಾರಿಸಿ ಪಂದ್ಯವನ್ನು ಡ್ರಾಕ್ಕೆ ಕೊಂಡೊಯ್ದರು ಮತ್ತು ಶ್ರೀಲಂಕಾವನ್ನು ತವರಿನಲ್ಲಿ 0-2 ಸೋಲಿನ ಮುಜುಗರದಿಂದ ರಕ್ಷಿಸಿದರು. ಈ ಟೆಸ್ಟ್ ಸರಣಿಯಲ್ಲಿ ಇದು ಸೋನಲ್ ಅವರ ಮೂರನೇ ಶತಕವಾಗಿದ್ದು, ಎರಡು ಪಂದ್ಯಗಳ ಸರಣಿಯಲ್ಲಿ ಮೂರು ಶತಕಗಳನ್ನು ಬಾರಿಸಿದ ಶ್ರೀಲಂಕಾದ ಮೂರನೇ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದರು.

112 ರನ್​ಗಳ ಜೊತೆಯಾಟ

ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲದಿರಲು ಕಾರಣ ಬಾಲಂಗೋಚಿಗಳನ್ನು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಬಿಟ್ಟಿದ್ದು. ಅದರಲ್ಲೂ ಪ್ರಭಾತ್ ಜಯಸೂರ್ಯ ಮತ್ತು ಲಹಿರು ಕುಮಾರರಂತಹ ಬೌಲರ್​ಗಳು ಟೀಂ ಇಂಡಿಯಾದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಮೊದಲಿಗೆ ಸೋನಲ್ ದಿನುಷಾ ಮತ್ತು ಕೇಸರ ನುವಂತ ಜೋಡಿಯು 112 ರನ್‌ಗಳ ಪಾಲುದಾರಿಕೆಯನ್ನು ನೀಡಿ ಶ್ರೀಲಂಕಾಕ್ಕೆ ಭರವೆ ಮೂಡಿಸಿದರು. ಆದರೆ ಈ ಪಾಲುದಾರಿಕೆ ಮುರಿದ ತಕ್ಷಣ, ಭಾರತಕ್ಕೆ ಭರವಸೆಯ ಕಿರಣವೊಂದು ಹೊರಹೊಮ್ಮಿತು. ಕೇಸರ ಔಟಾದಾಗ, ಶ್ರೀಲಂಕಾ ಕೇವಲ 117 ರನ್‌ಗಳ ಮುಂದಿತ್ತು, ಆದ್ದರಿಂದ ಟೀಂ ಇಂಡಿಯಾ ಕೊನೆಯ ಮೂರು ವಿಕೆಟ್‌ಗಳನ್ನು ಬೇಗನೆ ತೆಗೆದುಕೊಳ್ಳಬೇಕಾಗಿತ್ತು.

IND vs SL: 2 ಪಂದ್ಯಗಳಲ್ಲಿ 3ನೇ ಶತಕ; ಭಾರತವನ್ನು ಕಾಡಿದ ಸೋನಲ್ ಸುನಾಮಿ

ಭಾರತದ ಗೆಲುವಿಗೆ ಈ ಇಬ್ಬರು ಅಡ್ಡಿ

ಆದರೆ ಇದಕ್ಕೆ ಪ್ರಭಾತ್ ಜಯಸೂರ್ಯ ಮತ್ತು ನಂತರ ಲಹಿರು ಕುಮಾರ ಅವಕಾಶ ಮಾಡಿಕೊಡಲಿಲ್ಲ. ಪ್ರಭಾತ್ 28 ಎಸೆತಗಳನ್ನು ಎದುರಿಸಿ ದಿನುಷಾ ಅವರೊಂದಿಗೆ 25 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದರೆ ರನ್‌ಗಳಿಗಿಂತ ಮುಖ್ಯವಾಗಿ, ಈ ಜೋಡಿ 12 ಓವರ್‌ಗಳ ಕಾಲ ವಿಕೆಟ್ ನೀಡಲಿಲ್ಲ. ನಂತರ 10 ನೇ ಸ್ಥಾನದಲ್ಲಿ ಬ್ಯಾಟಿಂಗ್​ಗೆ ಬಂದ ಲಹಿರು ಕುಮಾರ 90 ಎಸೆತಗಳು ಅಥವಾ 15 ಓವರ್‌ಗಳ ಕಾಲ ಏಕಾಂಗಿಯಾಗಿ ಬ್ಯಾಟಿಂಗ್ ಮಾಡಿ ಭಾರತವನ್ನು ಗೆಲುವಿನಿಂದ ತಡೆದರು. ಹೀಗಾಗಿ, ಲಹಿರು ಮತ್ತು ಪ್ರಭಾತ್ ಒಟ್ಟಾಗಿ 118 ಎಸೆತಗಳು ಅಥವಾ ಸುಮಾರು 20 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿ ಭಾರತದ ಗೆಲುವಿಗೆ ಅಡ್ಡಿಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Thu, 27 August 26

Loading...
Unable to load recommendations.
Follow Us