
ಮುಂದಿನ ತಿಂಗಳು ಅಂದರೆ ಡಿಸೆಂಬರ್‌ನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ಸೀಮಿತ ಓವರ್‌ಗಳ ಸರಣಿ ನಡೆಯಲಿದೆ. ಈ ಸರಣಿಯ ವೇಳಾಪಟ್ಟಿ ಕೂಡ ಈಗಾಗಲೇ ಪ್ರಕಟವಾಗಿದೆ. ಆದರೆ ಏಕದಿನ ಸರಣಿಯ ಮೊದಲ ಪಂದ್ಯವನ್ನು ಇದೀಗ ಸ್ಥಳಾಂತರಿಸಿರುವುದಾಗಿ ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ. ಈ ಮೊದಲ ನಿಗದಿಯಾದಂತೆ ಮೊದಲ ಏಕದಿನ ಪಂದ್ಯ ಡಿಸೆಂಬರ್ 13 ರಂದು ದೆಹಲಿಯಲ್ಲಿ ನಡೆಯಬೇಕಿತ್ತು. ಆದರೀಗ ಈ ಪಂದ್ಯವನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಿರುವುದಾಗಿ ಬಿಸಿಸಿಐ ಮಾಹಿತಿ ನೀಡಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಗಳ ಹಿನ್ನೆಲೆಯಲ್ಲಿ ಪಂದ್ಯವನ್ನು ಬೇರೆಡೆ ನಡೆಸುವಂತೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಬಿಸಿಸಿಐಗೆ ಮನವಿ ಮಾಡಿತ್ತು. ಇದರ ಜೊತೆಗೆ ದೆಹಲಿಯ ಹವಾಮಾನ ಪರಿಸ್ಥಿತಿಯೂ ಸ್ಥಳ ಬದಲಾವಣೆಗೆ ಪ್ರಮುಖ ಕಾರಣವಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಹೀಗಾಗಿ ಡಿಸೆಂಬರ್ 13ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯವು ಇದೀಗ ವಿಶಾಖಪಟ್ಟಣದ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ವಿಶಾಖಪಟ್ಟಣಕ್ಕೆ ಸ್ಥಳಾಂತರವಾಗಿರುವುದು ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇದಕ್ಕೆ ಪ್ರಮುಖ ಕಾರಣ ಈ ಮೈದಾನದಲ್ಲಿ ಕೊಹ್ಲಿ ಹೊಂದಿರುವ ಅದ್ಭುತ ದಾಖಲೆ. ವಿಶಾಖಪಟ್ಟಣದ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ ಎಂಟು ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ 108.66ರ ಅತ್ಯುತ್ತಮ ಸರಾಸರಿಯಲ್ಲಿ ಒಟ್ಟು 652 ರನ್ ಗಳಿಸಿದ್ದಾರೆ.
ಇಲ್ಲಿ ಕೊಹ್ಲಿ ಮೂರು ಶತಕ ಹಾಗೂ ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಹೀಗಾಗಿ ಈ ಮೈದಾನ ಕೊಹ್ಲಿಗೆ ಅದೃಷ್ಟದ ತಾಣ ಎಂದೇ ಹೇಳಬಹುದು. ಅವರ ಬ್ಯಾಟಿಂಗ್ ದಾಖಲೆ ಗಮನಿಸಿದರೆ ವಿಶಾಖಪಟ್ಟಣದಲ್ಲಿ ಮತ್ತೊಂದು ದೊಡ್ಡ ಇನ್ನಿಂಗ್ಸ್ ಮೂಡಿಬರಬಹುದೆಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಉತ್ತಮ ಲಯದಲ್ಲಿರುವುದರಿಂದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಅವರಿಂದ ಭರ್ಜರಿ ಪ್ರದರ್ಶನವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
Published On - 5:59 pm, Fri, 6 November 26