ಯೂತ್ ಏಕದಿನ ಸರಣಿ; ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಭಾರತ ಯುವ ಪಡೆ

ಭಾರತ U19 ತಂಡ ಆಸ್ಟ್ರೇಲಿಯಾ U19 ವಿರುದ್ಧದ ಮೊದಲ ಯೂತ್ ಏಕದಿನ ಪಂದ್ಯದಲ್ಲಿ 7 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಮಳೆ ಪೀಡಿತ 20 ಓವರ್‌ಗಳ ಪಂದ್ಯದಲ್ಲಿ ಭಾರತ 182 ರನ್ ಗಳಿಸಿತು. ಯಶೋವರ್ಧನ್ ಅರ್ಧಶತಕ, ಅನ್ವಯ್ ದ್ರಾವಿಡ್ (38) ಮತ್ತು ಆರ್ಯವೀರ್ ಸೆಹ್ವಾಗ್ (28) ಅವರ ಕೊಡುಗೆ ಗಮನ ಸೆಳೆಯಿತು. ಯಶೋವರ್ಧನ್ ಬೌಲಿಂಗ್‌ನಲ್ಲಿಯೂ ಮಿಂಚಿ ಆಸೀಸ್ ತಂಡವನ್ನು 175 ರನ್‌ಗಳಿಗೆ ಕಟ್ಟಿಹಾಕಿದರು, ಸರಣಿಯಲ್ಲಿ ಭಾರತಕ್ಕೆ ಶುಭಾರಂಭ ಸಿಕ್ಕಿತು.

ಯೂತ್ ಏಕದಿನ ಸರಣಿ; ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಭಾರತ ಯುವ ಪಡೆ
ಭಾರತ Vs ಆಸ್ಟ್ರೇಲಿಯಾ U19 ತಂಡಗಳು

Updated on: Sep 18, 2026 | 7:35 PM

ಬಹು ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ಅಂಡರ್-19 ತಂಡ ಭಾರತಕ್ಕೆ ಬಂದಿದೆ. ಅದರಂತೆ ಭಾರತ ಹಾಗೂ ಆಸ್ಟ್ರೇಲಿಯಾ ಅಂಡರ್-19 ತಂಡಗಳ ನಡುವೆ ಇಂದಿನಿಂದ ಮೂರು ಪಂದ್ಯಗಳ ಯೂತ್ ಏಕದಿನ ಸರಣಿ ಆರಂಭವಾಗಿದೆ. ಇಂದು ನಡೆದ ಸರಣಿಯ ಮೊದಲ ಪಂದ್ಯವನ್ನು ಆತಿಥೇಯ ಭಾರತ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ರೋಮಾಂಚಕ ರೀತಿಯಲ್ಲಿ ಗೆದ್ದುಕೊಂಡಿತು. ಮಳೆ ಪೀಡಿತ ಈ ಪಂದ್ಯವನ್ನು ತಲಾ 20 ಓವರ್​ಗಳಿಗೆ ನಿಗದಿಪಡಿಸಲಾಯಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 182 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 175 ರನ್ ಕಲೆಹಾಕಲಷ್ಟೇ ಶಕ್ತವಾಗಿ 7 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಅರ್ಧಶತಕ ಬಾರಿಸಿದ ಯಶ್​ವರ್ಧನ್

ರಾಜ್‌ಕೋಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಮಗ ಆರ್ಯವೀರ್ ಮೇಲೆ ಇದ್ದವು. ಈ ಇಬ್ಬರು ಭಾರತೀಯ ಕ್ರಿಕೆಟ್ ಲೆಜೆಂಡಗಳ ಪುತ್ರರು ಅಲ್ಪ ಕಾಣಿಕೆ ನೀಡಿ ಎಲ್ಲರ ಗಮನ ಸೆಳೆದರು. ಆದರೆ ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಯಶ್​ವರ್ಧನ್ 54 ರನ್​ ಬಾರಿಸಿದರು. ಇತ್ತ ಅನ್ವಯ್ ಕೇವಲ 18 ಎಸೆತಗಳಲ್ಲಿ 38 ರನ್ ಬಾರಿಸಿದರೆ, ಆರ್ಯವೀರ್ ಸೆಹ್ವಾಗ್ 28 ರನ್​ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಭಾರತ 20 ಓವರ್​ಗಳಲ್ಲಿ 6 ವಿಕೆಟ್​ಗಳನ್ನು ಕಳೆದುಕೊಂಡು 182 ರನ್ ಕಲೆಹಾಕಿತು.

ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ

ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ಆರಂಭಿಕರಿಬ್ಬರು ಉತ್ತಮ ಜೊತೆಯಾಟವನ್ನಾಡುವ ಮೂಲಕ ಟೀಂ ಇಂಡಿಯಾದ ಒತ್ತಡವನ್ನು ಹೆಚ್ಚಿಸಿದರು. ನೀಲ್ ಪಟೇಲ್ ಮತ್ತು ಹೇಡನ್ ಬಾರ್ಬುಲೋವಿಕ್ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ 10 ಓವರ್‌ಗಳಲ್ಲಿ 90 ರನ್ ಕಲೆಹಾಕಿದರು. ಹೀಗಾಗಿ ಆಸ್ಟ್ರೇಲಿಯಾ ಸುಲಭವಾಗಿ ಗೆಲ್ಲುತ್ತದೆ ಎಂದು ತೋರುತ್ತಿತ್ತು, ಆದರೆ ಬೌಲಿಂಗ್‌ನಲ್ಲಿ ತಮ್ಮ ಮ್ಯಾಜಿಕ್ ತೋರಿಸಿದ ಯಶೋವರ್ಧನ್, ಮೊದಲು ಹೇಡನ್ ಮತ್ತು ನಂತರ ನೀಲ್ ಅವರನ್ನು 11 ನೇ ಓವರ್‌ನಲ್ಲಿ ಔಟ್ ಮಾಡಿದರು.

ಏಕದಿನ ವಿಶ್ವಕಪ್ ಆಡ್ತೀರಾ? ಅಚ್ಚರಿಯ ಉತ್ತರ ನೀಡಿದ ರೋಹಿತ್ ಶರ್ಮಾ

ಕೊನೆಯ ಓವರ್​ನಲ್ಲಿ ಗೆದ್ದ ಭಾರತ

ನಂತರ ಬಂದ ಜೇಡ್ ಹೋಲಿಕ್ ಕೂಡ ತಂಡದ ಇನ್ನಿಂಗ್ಸ್ ನಿಭಾಯಿಸುವಲ್ಲಿ ಯಶಸ್ವಿಯಾದರು. ಇತ್ತ ನಾಯಕ ಜ್ಯಾಕ್ ಸ್ಕೋಸ್ನಾಕ್ ವೇಗವಾಗಿ ರನ್ ಗಳಿಸುತ್ತಿದ್ದರು. ಆದರೆ ಜೇಡ್ ಹೋಲಿಕ್ 24 ರನ್​ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿದರೆ, ಕೇವಲ 2 ರನ್​ಗಳ ಅಂತರದಲ್ಲಿ ಅಂದರೆ 19 ನೇ ಓವರ್‌ನಲ್ಲಿ ನಾಯಕ ಜ್ಯಾಕ್ ಸ್ಕೋಸ್ನಾಕ್ ಕೂಡ ಪೆವಿಲಿಯನ್ ಸೇರಿಕೊಂಡರು. ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಗೆಲ್ಲಲು 11 ರನ್‌ಗಳು ಬೇಕಿದ್ದವು. ಆದರೆ ಆಸೀಸ್ ಬ್ಯಾಟರ್​ಗಳಿಗೆ ಕೊನೆಯ ಓವರ್​ನಲ್ಲಿ ಕೇವಲ 3 ರನ್‌ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಭಾರತ ಅಂಡರ್-19 ತಂಡ ಪಂದ್ಯವನ್ನು 7 ರನ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us