U19 T20 World Cup: ವಿಂಡೀಸ್ ವಿರುದ್ಧ ಕೇವಲ 26 ಎಸೆತಗಳಲ್ಲಿ ಗೆಲುವು ಸಾಧಿಸಿದ ಭಾರತ

|

Updated on: Jan 19, 2025 | 3:13 PM

U19 T20 World Cup 2025: ಭಾರತದ ಅಂಡರ್-19 ಮಹಿಳಾ ಕ್ರಿಕೆಟ್ ತಂಡವು ಜನವರಿ 18 ರಂದು ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಕೇವಲ 44 ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ ಭಾರತ 26 ಎಸೆತಗಳಲ್ಲಿ ಗೆಲುವು ಸಾಧಿಸಿತು. ಜೋಶಿತಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

U19 T20 World Cup: ವಿಂಡೀಸ್ ವಿರುದ್ಧ ಕೇವಲ 26 ಎಸೆತಗಳಲ್ಲಿ ಗೆಲುವು ಸಾಧಿಸಿದ ಭಾರತ
ಭಾರತ ಮಹಿಳಾ ತಂಡ
Follow us on

ಜನವರಿ 18 ರಿಂದ ಆರಂಭವಾಗಿರುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ವನಿತಾ ಪಡೆ ಗೆಲುವಿನ ಶುಭಾರಂಭ ಮಾಡಿದೆ. ತನ್ನ ಚೊಚ್ಚಲ ಪಂದ್ಯದಲ್ಲಿ ಇಂದು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಿದ್ದ ಟೀಂ ಇಂಡಿಯಾ 20 ಓವರ್‌ಗಳ ಗುರಿಯನ್ನು ಕೇವಲ 26 ಎಸೆತಗಳಲ್ಲಿ ಬೆನ್ನಟ್ಟಿತು. ಇದರೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್​ಗಳ ಅದ್ಭುತ ಜಯ ಸಾಧಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 13.2 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 44 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಭಾರತ ವನಿತಾ ಪಡೆ ಕೇವಲ 1 ವಿಕೆಟ್ ಕಳೆದುಕೊಂಡು 4.2 ಓವರ್​ಗಳಲ್ಲಿ ಜಯದ ಬಗೆ ಬೀರಿತು. ವಿಂಡೀಸ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸುವ ಮೂಲಕ ಭಾರತ ತಂಡವು ತನ್ನ ಇತರ ಎದುರಾಳಿಗಳಿಗೂ ಸ್ಪಷ್ಟ ಸಂದೇಶವನ್ನು ನೀಡಿದೆ.

ಸುಲಭವಾಗಿ ಗುರಿ ಬೆನ್ನಟ್ಟಿದ ಭಾರತ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್​ ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ ಪೂರ್ಣ 20 ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇಡೀ ತಂಡ 13.2 ಓವರ್‌ಗಳಲ್ಲಿ 44 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ವಿಂಡೀಸ್ ತಂಡ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಕಡಿಮೆ ಸ್ಕೋರ್​ಗೆ ಆಲೌಟ್ ಆದ ಬೇಡದ ದಾಖಲೆಯನ್ನು ಬರೆಯಿತು. ಗೆಲುವಿಗೆ 45 ರನ್‌ಗಳ ಗುರಿ ಪಡೆದಿದ್ದ ಭಾರತ ಕೇವಲ 4.2 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

9 ವಿಕೆಟ್​ಗಳ ಜಯ

45 ರನ್ಗಳ ಸುಲಭ ಗುರಿ ಬೆನ್ನತ್ತಿದ ಭಾರತ 4 ರನ್ ಗಳಿಸುವಷ್ಟರಲ್ಲಿ ತನ್ನ ಏಕೈಕ ವಿಕೆಟ್ ಕಳೆದುಕೊಂಡಿತು. ಆದರೆ ಆ ಬಳಿಕ ಭಾರತದ ಬ್ಯಾಟ್ಸ್‌ಮನ್‌ಗಳು ವೆಸ್ಟ್‌ ಇಂಡೀಸ್‌ಗೆ ವಿಕೆಟ್‌ ಪಡೆಯುವ ಎರಡನೇ ಅವಕಾಶವನ್ನೇ ನೀಡಲಿಲ್ಲ. ಎರಡನೇ ವಿಕೆಟ್‌ಗೆ ಕಮಲಿನಿ ಮತ್ತು ಚಾಲ್ಕೆ ನಡುವೆ 43 ರನ್‌ಗಳ ಅಜೇಯ ಪಾಲುದಾರಿಕೆ ಇತ್ತು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಪಂದ್ಯ ಮುಗಿಸಿದ ಬಳಿಕ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು 9 ವಿಕೆಟ್​ಗಳಿಂದ ಸೋಲಿಸುವಲ್ಲಿ ಭಾರತ ಯಶಸ್ವಿಯಾಯಿತು.

26 ಎಸೆತಗಳಲ್ಲೇ ಜಯ

ಕೌಲಾಲಂಪುರ್‌ದಲ್ಲಿ ಮಳೆ ಬೀಳುತ್ತಿರುವ ಕಾರಣ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿತ್ತು. ಹೀಗಾಗಿ 45 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾಯಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ತಂಡದ ನಾಯಕಿ ನಿಕ್ಕಿ ಪ್ರಸಾದ್ ಆದಷ್ಟು ಬೇಗ ಪಂದ್ಯ ಮುಗಿಸಬೇಕು ಎಂದು ಟೀಮ್ ಮ್ಯಾನೇಜ್ ಮೆಂಟ್​ನಿಂದ ಸ್ಪಷ್ಟ ಸೂಚನೆ ಬಂದಿತ್ತು. ಹಾಗಾಗಿ ನಾವು ಸೂಚನೆಯ ಪ್ರಕಾರ ಬ್ಯಾಟಿಂಗ್ ಮಾಡಿದೇವು ಎಂದಿದ್ದಾರೆ. ಅಚ್ಚರಿಯೆಂದರೆ ಭಾರತ ಪಂದ್ಯ ಗೆದ್ದ ತಕ್ಷಣ ಮೈದಾನದಲ್ಲಿ ಮಳೆ ಸುರಿಯಲಾರಂಭಿಸಿತು.

ಜೋಶಿತಾಗೆ ಪಂದ್ಯ ಶ್ರೇಷ್ಠ

ಈ ಪಂದ್ಯದಲ್ಲಿ ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಜೋಶಿತಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಜೋಶಿತಾ ತಮ್ಮ ಖೋಟಾದ 2 ಓವರ್‌ಗಳಲ್ಲಿ 5 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Sun, 19 January 25