IND vs AUS: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ಇಬ್ಬರಿಗೆ ಚೊಚ್ಚಲ ಅವಕಾಶ; ಹೀಗಿದೆ ಪ್ಲೇಯಿಂಗ್ 11
IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆರಂಭವಾಗಿದೆ. ರೋಹಿತ್ ಶರ್ಮಾ ಅಲಭ್ಯರಾಗಿರುವುದರಿಂದ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರೊಂದಿಗೆ ಉಭಯ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಿದೆ. ಉಭಯ ತಂಡಗಳ ನಡುವಿನ ಈ ಪಂದ್ಯಕ್ಕೆ ಪರ್ತ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಆಪ್ಟಸ್ ಸ್ಟೇಡಿಯಂ ಆತಿಥ್ಯವಹಿಸುತ್ತಿದೆ. ಈ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯರಾಗಿರುವ ಕಾರಣ, ವೇಗಿ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೇರಬೇಕಾದರೆ ಟೀಂ ಇಂಡಿಯಾ ಈ ಸರಣಿಯನ್ನು 4-0 ಅಂತರದಿಂದ ಗೆಲ್ಲಬೇಕಿದೆ. ಇದರ ಜೊತೆಗೆ ಸತತ ಎರಡು ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿರುವ ಭಾರತಕ್ಕೆ ಹ್ಯಾಟ್ರಿಕ್ ಸರಣಿ ಗೆಲುವು ಸಾಧಿಸುವ ಅವಕಾಶವಿದೆ. ಭಾರತ ಕೊನೆಯ ಬಾರಿಗೆ 2022-23ರಲ್ಲಿ ತವರಿನಲ್ಲಿ ಆಸ್ಟ್ರೇಲಿಯಾವನ್ನು 2-1 ಅಂತರದಲ್ಲಿ ಸೋಲಿಸುವ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಇನ್ನು ಈ ಪಂದ್ಯದ ಟಾಸ್ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರೊಂದಿಗೆ ಉಭಯ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.
ಇಬ್ಬರ ಪದಾರ್ಪಣೆ
ಪರ್ತ್ ಟೆಸ್ಟ್‌ನಲ್ಲಿ ಭಾರತದ ಪರ ಇಬ್ಬರು ಯುವ ಕ್ರಿಕೆಟಿಗರು ಟೆಸ್ಟ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಆಲ್ರೌಂಡರ್ಗಳಾದ ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಈ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಆಡುತ್ತಿದ್ದಾರೆ. ಹರ್ಷಿತ್ ರಾಣಾಗೆ, ಅಶ್ವಿನ್ ಚೊಚ್ಚಲ ಕ್ಯಾಪ್ ನೀಡಿದರೆ, ನಿತೀಶ್ಗೆ, ವಿರಾಟ್ ಕೊಹ್ಲಿ ಚೊಚ್ಚಲ ಕ್ಯಾಪ್ ಹಸ್ತಾಂತರಿಸಿದರು. ಉಳಿದಂತೆ ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಅವಕಾಶ ಸಿಕ್ಕಿದ್ದು, ಕೆಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಕಣಕ್ಕಿಳಿಯುತ್ತಿದ್ದಾರೆ. ಸ್ಪಿನ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಕಾಣಿಸಿಕೊಂಡರೆ, ನಾಲ್ವರು ವೇಗದ ಬೌಲರ್‌ಗಳಿಗೆ ತಂಡದಲ್ಲಿ ಅವಕಾಶ ಸಿಕ್ಕಿದೆ.
ಉಭಯ ತಂಡಗಳು
ಆಸ್ಟ್ರೇಲಿಯಾ ತಂಡ: ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್.
ಭಾರತ ತಂಡ: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ (ನಾಯಕ), ಮೊಹಮ್ಮದ್ ಸಿರಾಜ್.
🚨 Toss & Team News from Perth 🚨
Jasprit Bumrah has won the toss & #TeamIndia have elected to bat in the first Test.
Nitish Kumar Reddy & Harshit Rana make their Test debuts 🧢🧢 for India.
A look at our Playing XI 🔽
Live ▶️ https://t.co/gTqS3UPruo#AUSvIND |… pic.twitter.com/HVAgGAn8OZ
— BCCI (@BCCI) November 22, 2024
2015 ರಿಂದ ಭಾರತ ಅಜೇಯ
ಟೀಂ ಇಂಡಿಯಾ 2015 ರಿಂದ ಒಮ್ಮೆಯೂ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಸೋತಿಲ್ಲ. ಕಳೆದ 2 ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಕಾಂಗರೂ ತಂಡವನ್ನು ಅವರ ತವರಿನಲ್ಲಿಯೇ ಸೋಲಿಸುವಲ್ಲಿಯೂ ಟೀಂ ಇಂಡಿಯಾ ಯಶಸ್ವಿಯಾಗಿದೆ. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಟೀಂ ಇಂಡಿಯಾ ಯುವ ಆಟಗಾರರಿಂದ ಕಂಗೊಳಿಸುತ್ತಿದ್ದು, ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋತ ಬಳಿಕ ಈ ಸರಣಿಗೆ ಬರುತ್ತಿದೆ. ನ್ಯೂಜಿಲೆಂಡ್ ಭಾರತಕ್ಕೆ ಬಂದು ಟೀಂ ಇಂಡಿಯಾವನ್ನು 3-0 ಅಂತರದಿಂದ ಸೋಲಿಸಿದ್ದು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಟೀಂ ಇಂಡಿಯಾ ಮತ್ತೊಮ್ಮೆ ಈ ಸರಣಿಯಲ್ಲಿ ಟೆಸ್ಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನಿಸಿದರೆ, ಇತ್ತ ಆಸ್ಟ್ರೇಲಿಯಾ ತನ್ನ ತವರಿನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಯಾವುದೇ ಬೆಲೆ ತೆತ್ತಾದರೂ ಗೆದ್ದುಕೊಳ್ಳಲು ಹೋರಾಡಲಿದೆ.
ಸತತ 3ನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್
ಟೀಂ ಇಂಡಿಯಾ ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪುತ್ತದೆಯೇ ಅಥವಾ ಇಲ್ಲವೇ ಎಂಬುದು ಈ 5 ಟೆಸ್ಟ್ ಪಂದ್ಯಗಳ ಫಲಿತಾಂಶದಿಂದ ನಿರ್ಧರಿಸಲ್ಪಡುತ್ತದೆ. ಈ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 4-0 ಅಥವಾ 5-0 ಅಂತರದ ಗೆಲುವು ಸಾಧಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಪಡೆಯುವುದು ಖಚಿತ. ಆದರೆ ಒಂದು ಪಂದ್ಯದಲ್ಲಿ ಸೋತರೆ ಬೇರೆ ತಂಡಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಭಾರತ 4-1 ಅಂತರದಲ್ಲಿ ಗೆದ್ದರೆ, ಇಂಗ್ಲೆಂಡ್, ನ್ಯೂಜಿಲೆಂಡ್ ವಿರುದ್ಧ ಕನಿಷ್ಠ ಒಂದು ಟೆಸ್ಟ್ ಪಂದ್ಯವನ್ನಾದರೂ ಡ್ರಾ ಮಾಡಿಕೊಳ್ಳಬೇಕಾಗುತ್ತದೆ, ಅಥವಾ ಶ್ರೀಲಂಕಾ ಮತ್ತು ಪಾಕಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧದ ಒಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:31 am, Fri, 22 November 24